
ರಾಜಶೇಖರ ಶಿವಾಚಾರ್ಯ ಸ್ವಾಮೀಜಿ
ಬೀದರ್: ಬೀದರ್ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಹೆಸರಿಡಬೇಕು’ ಎಂದು ಶ್ರೀಶೈಲದ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠದ ಸಂಚಾಲಕ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಅವರು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ಧಾರೆ.
ಬಸವಣ್ಣನವರು ವಿಶ್ವಕಂಡ ಶ್ರೇಷ್ಠ ಮತ್ತು ಅಪ್ರತಿಮ ಮಹಾಪುರುಷರು. ಸಕಲ ಜೀವಾತ್ಮರಿಗೆ ಲೇಸು ಬಯಸಿದ ವಿಶ್ವ ಪ್ರೇಮಿಗಳು. ಸಮಾನತೆ, ಸ್ವಾತಂತ್ರ್ಯ, ವಿಶ್ವ ಬಂಧುತ್ವದ ಯುಗಪುರುಷರು. ಗಂಡು–ಹೆಣ್ಣು, ಬಡವ– ಬಲ್ಲಿದ, ಮೇಲೂ –ಕೀಳು, ವರ್ಗಭೇದ, ವರ್ಣಭೇದ ಮತ್ತು ಲಿಂಗ ಭೇದಗಳನ್ನು ತೊಡೆದು ಹಾಕಿ ಎಲ್ಲರೂ ಸಮಾನರೆಂಬ ದಿವ್ಯ ಸಂದೇಶವನ್ನು ಸಾರಿ ಕಾರ್ಯರೂಪಕ್ಕೆ ತಂದ ದೊಡ್ಡ ಸಾಮಾಜಿಕ ಹರಿಕಾರರು, ಕ್ರಾಂತಿಪುರುಷರು. ಇವರ ಹೆಸರು ಬೀದರ್ ವಿವಿಗೆ ಇಡುವುದು ಬಹಳ ಸೂಕ್ತ ಎಂದಿದ್ದಾರೆ.
ಬಸವಾದಿ ಶಿವಶರಣರು ರಚಿಸಿದ ವಚನ ಸಾಹಿತ್ಯ ವಿಶ್ವ ಮಾನ್ಯವಾಗಿದೆ. ನಾಡಿನ ಸಾಂಸ್ಕೃತಿಕ ಲೋಕದ ಅತ್ಯದ್ಭುತ ದಿವ್ಯ ಸಂಪತ್ತಾಗಿ ವಿಶ್ವವನ್ನು ಬೆಳಗುತ್ತಿದೆ. ಬಸವವಾದಿ ಶಿವಶರಣರು ವಚನ ಸಾಹಿತ್ಯದ ಮೂಲಕವಾಗಿ ಕನ್ನಡ ನಾಡು-ನುಡಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ವಿಶ್ವ ಸಾಹಿತ್ಯದಲ್ಲಿ ಅದ್ವಿತೀಯವಾದ ಛಾಪು ಮೂಡಿಸಿದ್ದಾರೆ. ಬಸವ ಭಕ್ತರ ಬೇಡಿಕೆಯಂತೆ ಮುಖ್ಯಮಂತ್ರಿಗಳಾದ ತಾವು ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದ್ದೀರಿ. ನಿಮ್ಮ ಅವಧಿಯಲ್ಲೇ ಸಮಗ್ರ ವಚನ ಸಂಪುಟವು ಹೊರಬಂದಿದೆ. ಬೀದರ್ ಜಿಲ್ಲೆಯ ಹೆಮ್ಮೆ ಎನಿಸಿದ ಬೀದರ್ ವಿವಿಗೆ ಬಸವಣ್ಣನವರು ಹೆಸರಿಡಬೇಕೆನ್ನುವುದು ಜನರ ಆಶಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.