ADVERTISEMENT

ಹಾವು ಕಡಿತಕ್ಕೆ ‘ಆ್ಯಂಟಿ ವೆನಮ್‌’: ಆರೋಗ್ಯ ಮತ್ತು ಜೈವಿಕ ಸಂಸ್ಥೆಯಿಂದ ಅಭಿವೃದ್ಧಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀದರ್‌: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆರೋಗ್ಯ ಮತ್ತು ಜೈವಿಕ ಸಂಸ್ಥೆಯು ವಿಷಕಾರಿ ಹಾವುಗಳ ಕಡಿತಕ್ಕೆ ‘ಆ್ಯಂಟಿ ವೆನಮ್‌’ ಔಷಧ ಸಿದ್ಧಪಡಿಸಿದೆ. ಇದರ ಪರೀಕ್ಷೆಯಿಂದ ಉತ್ತಮ ಫಲಿತಾಂಶ ಕೂಡಾ ಬಂದಿದೆ.

2015ರಲ್ಲಿ ಆರಂಭಗೊಂಡ ಈ ಯೋಜನೆ ಈಗ ಪೂರ್ಣಗೊಂಡಿದೆ. ಈಗಾಗಲೇ ಇಲಿ, ಗಿನಿ ಹಂದಿಗಳ ಮೇಲೆ ಪರೀಕ್ಷೆ ನಡೆಸಲಾಗಿದೆ. ಶೀಘ್ರದಲ್ಲೇ ಹಂದಿ, ಕುರಿಗಳ ಮೇಲೂ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆನಂತರ ತಂತ್ರಜ್ಞಾನವನ್ನು ದೊಡ್ಡ ಮಟ್ಟದಲ್ಲಿ ವಾಣಿಜ್ಯ ಬಳಕೆಗೆ ನೀಡಲು ಸಿದ್ಧತೆ ನಡೆದಿದೆ. ಈ ಸಂಬಂಧ ಈಗಾಗಲೇ ವಿವಿಯಿಂದ ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಲಾಗಿದೆ.

ADVERTISEMENT

‘ಆ್ಯಂಟಿ ವೆನಮ್‌’ ಸಿದ್ಧಪಡಿಸಲು ಸರ್ಕಾರವು 2015ರಲ್ಲಿ ₹50 ಲಕ್ಷ ಅನುದಾನವನ್ನು ವಿಶ್ವವಿದ್ಯಾಲಯಕ್ಕೆ ನೀಡಿತ್ತು. ನಾಗರಹಾವು, ರಸೆಲ್‌ ವೈಪರ್‌, ಕಾಳಿಂಗಸರ್ಪ ಹಾಗೂ ಕೊಳಕು ಮಂಡಲ ಜಾತಿಯ ಹಾವುಗಳ ವಿಷವನ್ನು ಸಂಗ್ರಹಿಸಿ, ಮೊಟ್ಟೆ ನೀಡುವ ಕೋಳಿಗಳಿಗೆ ಇದನ್ನು ಇಂಜೆಕ್ಟ್‌ ಮಾಡಲಾಗುತ್ತದೆ. ಬಳಿಕ ಅವುಗಳ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ನಂತರದಲ್ಲಿ ಆ ಕೋಳಿಯ ಮೊಟ್ಟೆಗಳನ್ನು ಪಡೆಯಲಾಗಿದೆ.  ಅದರೊಳಗಿನ ಹಳದಿ ಭಾಗವನ್ನು ಸಂಗ್ರಹಿಸಿ, ಶುದ್ಧೀಕರಿಸಿ, ಔಷಧ ಸಿದ್ಧಪಡಿಸಿ, ಇಲಿ, ಗಿನಿ ಹಂದಿಗಳ ಮೇಲೆ ಪರೀಕ್ಷೆ ನಡೆಸಲಾಗಿದೆ. ಉತ್ತಮ ಫಲಿತಾಂಶ ಬಂದಿದೆ’ ಎಂದು ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕಿ ಡಾ.ಡಿ.ರತ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸದ್ಯ ಆಸ್ಪತ್ರೆಗಳಲ್ಲಿ ಕೊಡುತ್ತಿರುವ ‘ಆ್ಯಂಟಿ ವೆನಮ್‌’ ಅನ್ನು ಕುದುರೆಗಳ ಮೂಲಕ ತಯಾರಿಸಲಾಗು ತ್ತಿದೆ. ಕುದುರೆಗೆ ಇಂಜೆಕ್ಟ್‌ ಮಾಡಿ, ಅದರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಲಾಗುತ್ತದೆ. ಬಳಿಕ ಅದರ ರಕ್ತದ ಸಾರದಿಂದ ಆ್ಯಂಟಿ ವೆನಮ್‌ ತಯಾರಿಸಲಾಗುತ್ತಿದೆ. ಆದರೆ, ಇದಕ್ಕೆ ಪ್ರಾಣಿ ದಯಾ ಸಂಘ ಸೇರಿದಂತೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಆ್ಯಂಟಿ ವೆನಮ್‌ ತಯಾರಿಕೆಗೆ ತೊಡಕಾಗಿದೆ. ಆದಕಾರಣ ಮೊಟ್ಟೆ ಕೊಡುವ ಕೋಳಿಗಳಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದು ಸಂಶೋಧನಾ ಕ್ಷೇತ್ರದಲ್ಲಿನ ದೊಡ್ಡ ಸಾಧನೆಯಾಗಿದೆ. ಈ ಆ್ಯಂಟಿ ವೆನಮ್‌ ಅನ್ನು ನಾಗರಹಾವು, ರಸೆಲ್‌ ವೈಪರ್‌, ಕಾಳಿಂಗ ಸರ್ಪ ಹಾಗೂ ಕೊಳಕು ಮಂಡಲ ಜಾತಿಯ ಹಾವುಗಳು ಮನುಷ್ಯರಿಗೆ ಕಚ್ಚಿದಾಗ ಕೊಡಬಹುದು’ ಎಂದು ಹೇಳಿದ್ದಾರೆ.

ನಮ್ಮ ವಿಜ್ಞಾನಿಗಳು ಛಲಬಿಡದೇ ಶ್ರಮಿಸಿ ‘ಆ್ಯಂಟಿ ವೆನಮ್‌’ ಅಭಿವೃದ್ಧಿಪಡಿಸಿದ್ದಾರೆ. ಇದು ನಮ್ಮ ಸಂಸ್ಥೆಯ ವಿಜ್ಞಾನಿಗಳ ಕಾರ್ಯಕ್ಷಮತೆಗೆ ಸಾಕ್ಷಿ
ಪ್ರೊ. ಕೆ.ಸಿ. ವೀರಣ್ಣ, ಕುಲಪತಿ, ಕರ್ನಾಟಕ ಪಶು ವೈದ್ಯಕೀಯ ವಿ.ವಿ
ಕರ್ನಾಟಕ ಪಶು ವೈದ್ಯಕೀಯ ವಿ.ವಿ11 ವರ್ಷಗಳ ಶ್ರಮ
ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಈ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ನಾಲ್ವರು ಹಿರಿಯ ವಿಜ್ಞಾನಿಗಳಾದ ಡಾ.ಶ್ರೀಪಾದ್‌, ಡಾ.ರವೀಂದ್ರ ಹೆಗಡೆ, ಡಾ.ಕವಿತಾ ಹಾಗೂ ಡಾ.ಶೋಭಾರಾಣಿ ಅವರು ಸತತ 11 ವರ್ಷಗಳ ಕಾಲ ಶ್ರಮಿಸಿ, ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.