ಬೀದರ್: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೊಂಡು 20 ವರ್ಷ ಕಳೆದಿವೆ. ಆದರೆ, ಈಗಲೂ ಇದು ಎಲ್ಲ ಚಟುವಟಿಕೆಗಳಿಗೂ ಗ್ರಂಥಾಲಯ ಕಟ್ಟಡವನ್ನೇ ಅವಲಂಬಿಸಿದೆ.
ಸರ್ಕಾರ ಈ ಭಾಗದಲ್ಲಿ 1984ರಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಿಸಿತು. ನಂಜುಂಡಪ್ಪ ವರದಿ ಆಧರಿಸಿ 2005ರ ಜನವರಿ 17ರಂದು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಯಿತು. ಕಾಲೇಜು ಸಂದರ್ಭದಲ್ಲಿ ನಿರ್ಮಿಸಿದ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಆಡಳಿತ ಭವನವಾಗಿ ಬದಲಿಸಲಾಯಿತು. 20 ವರ್ಷ ಕಳೆಯುತ್ತ ಬಂದರೂ ಈಗಲೂ ಅದೇ ಕಟ್ಟಡದಲ್ಲಿ ವಿ.ವಿ. ಕುಲಪತಿ, ಕುಲಸಚಿವರು, ಹಣಕಾಸು ಅಧಿಕಾರಿಗಳು ಹಾಗೂ ಡೀನ್‌ಗಳ ಕಚೇರಿಗಳು ಕೆಲಸ ನಿರ್ವಹಿಸುತ್ತಿವೆ.
ರಾಜ್ಯದ 7 ಪಶು ವೈದ್ಯಕೀಯ ಕಾಲೇಜುಗಳು, 2 ಹೈನುಗಾರಿಕೆ ಕಾಲೇಜು, 1 ಮೀನುಗಾರಿಕೆ ಕಾಲೇಜು, 10 ಸಂಶೋಧನಾ ವಲಯಗಳು ಹಾಗೂ 5 ಡಿಪ್ಲೊಮಾ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ.
ಜಾನುವಾರು ತಳಿ ಅಭಿವೃದ್ಧಿ, ಲಸಿಕೆ ಸೇರಿ ಹೊಸ ಸಂಶೋಧನೆಗಳು ನಡೆಯುತ್ತಿರುತ್ತಿವೆ. ಕಾರ್ಯಾಭಾರ ಹೆಚ್ಚಾಗಿದೆ. ಹೀಗಿದ್ದರೂ ಕೆಲಸ ನಿರ್ವಹಿಸಲು ಕುಲಪತಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ಉತ್ತಮ ಕಟ್ಟಡದ ವ್ಯವಸ್ಥೆಯಿಲ್ಲ.
180 ಎಕರೆ ಪ್ರದೇಶದಲ್ಲಿ ಹರಡಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಉತ್ತಮ ಅತಿಥಿ ಗೃಹ, ಸಿಬ್ಬಂದಿ ವಸತಿಗೃಹ, ಸಿ.ಸಿ ರಸ್ತೆಗಳಿಲ್ಲ. ಕ್ರೀಡಾಂಗಣವಿದೆ. ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ‘ಇಲ್ಲ’ಗಳ ನಡುವೆಯೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.
ಶೇ 70ರಷ್ಟು ಹುದ್ದೆ ಖಾಲಿ:
ಇದರ ಜೊತೆಗೆ ಸಿಬ್ಬಂದಿ ಕೊರತೆಯೂ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ಕಾಡುತ್ತಿದೆ. ವಿ.ವಿ. ವ್ಯಾಪ್ತಿಯ ಸಂಸ್ಥೆಗಳಿಗೆ ಒಟ್ಟು 794 ಬೋಧಕ ಹುದ್ದೆಗಳು ಮಂಜೂರಾಗಿದೆ. ಆದರೆ, 264 ಹುದ್ದೆಗಳಷ್ಟೇ ಭರ್ತಿ ಆಗಿವೆ. 1,577 ಬೋಧಕೇತರ ಹುದ್ದೆಗಳಲ್ಲಿ 225 ನೇಮಕಾತಿಯಾಗಿದ್ದು, 1,352 ಹುದ್ದೆ ಖಾಲಿ ಉಳಿದಿವೆ.
‘ವಿ.ವಿ ಆಡಳಿತ ಮಂಡಳಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಲೇ ಇದೆ. ಆದರೆ, ಸರ್ಕಾರ ಕಿವಿಗೊಟ್ಟಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿ ಬಳಿಕ ಅನುದಾನದ ಕಡತ ಮೂಲೆ ಸೇರಿದೆ’ ಎಂದು ವಿ.ವಿ. ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಸರ್ಕಾರಕ್ಕೆ ಪ್ರಸ್ತಾವ’
‘20 ವರ್ಷಗಳಿಂದ ಗ್ರಂಥಾಲಯ ಕಟ್ಟಡದಲ್ಲೇ ಆಡಳಿತಾತ್ಮಕ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತ್ಯೇಕ ಆಡಳಿತಾತ್ಮಕ ಕಟ್ಟಡದ ಅಗತ್ಯವಿದೆ. ಸರ್ಕಾರ ಅಥವಾ ಕೆಕೆಆರ್‌ಡಿಬಿ ಮೂಲಕ ಅನುದಾನ ಒದಗಿಸಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದೇವೆ. ಮೇಲಿಂದ ಮೇಲೆ ಅಂತರರಾಷ್ಟ್ರೀಯ ಸಮ್ಮೇಳನಗಳು ನಡೆಯುತ್ತಿರುತ್ತವೆ. ಅದಕ್ಕಾಗಿ ಅತಿಥಿಗೃಹ ಸೇ ಮೂಲಸೌಕರ್ಯ ಹೆಚ್ಚಿಸಲು ಅನುದಾನದ ಅಗತ್ಯವಿದೆ’ ಎಂದು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.