
ಶಹಾಪುರ(ಜನವಾಡ): ಬೀದರ್ ತಾಲ್ಲೂಕಿನಲ್ಲಿ ಸ್ವಸಹಾಯ ಗುಂಪುಗಳ ಸದಸ್ಯೆಯರು ಉಳಿತಾಯಕ್ಕಷ್ಟೇ ಸೀಮಿತವಾಗಿಲ್ಲ. ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಮೂಲಕ ಸ್ವಾವಲಂಬಿ ಬದುಕನ್ನೂ ಕಟ್ಟಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಸೇರಿದವರು ಶಹಾಪುರದ ಕನಕದಾಸ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯೆಯರು. ಅವರು ಉಳಿತಾಯದ ಜತೆಗೆ ಗೋಡಂಬಿ ಸಂಸ್ಕರಣ ಘಟಕ ಆರಂಭಿಸಿ ತಿಂಗಳಿಗೆ ₹ 12 ಸಾವಿರದಂತೆ ವಾರ್ಷಿಕ ₹ 1.44 ಲಕ್ಷ ಗಳಿಕೆ ಮಾಡುತ್ತಿದ್ದಾರೆ.
ಸಂಸ್ಕರಿಸಿದ ಗುಣಮಟ್ಟದ ಗೋಡಂಬಿಯನ್ನು ಪ್ಯಾಕ್ ಮಾಡಿ ಬೀದರ್‌ನ ಮಾರುಕಟ್ಟೆ, ಜಾತ್ರೆ, ಉತ್ಸವ, ಮೇಳಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಅನೇಕರು ಗೋಡಂಬಿಗಾಗಿ ಅವರನ್ನು ಸಂಪರ್ಕಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಗುಣಮಟ್ಟದ ಗೋಡಂಬಿ ಉತ್ಪಾದನೆ ಗುಂಪಿನ ಗುರಿಯಾಗಿದೆ.
ತೋಟಗಾರಿಕೆ ಇಲಾಖೆಯ ಸಹಾಯ ಧನದಿಂದ 2021ರಲ್ಲಿ ಶಹಾಪುರದಲ್ಲಿ ಶೆಡ್ ನಿರ್ಮಿಸಿ, ಗೋಡಂಬಿ ಸಂಸ್ಕರಣ ಘಟಕ ಸ್ಥಾಪಿಸಿದ್ದೇವೆ. ಇಲ್ಲಿ ದಿನಕ್ಕೆ 1.5 ಕ್ವಿಂಟಲ್ ಗುಣಮಟ್ಟದ ಗೋಡಂಬಿ ಉತ್ಪಾದಿಸುತ್ತಿದ್ದೇವೆ ಎಂದು ತಿಳಿಸುತ್ತಾರೆ ಕನಕದಾಸ ಮಹಿಳಾ ಸ್ವಸಹಾಯ ಗುಂಪಿನ ಅಧ್ಯಕ್ಷೆ ರೇಣುಕಾ ಗೋಪಾಲ ಮಲ್ಕಾಪುರೆ.
ಮೊದಲು ಗೋಡಂಬಿ ಸಂಸ್ಕರಣೆಗೆ ಹ್ಯಾಂಡ್ ಕಟ್ಟಿಂಗ್ ಯಂತ್ರ, ಡ್ರೈಯರ್ ಯಂತ್ರ ಬಳಸುತ್ತಿದ್ದೆವು. ಆಗ ದಿನಕ್ಕೆ 20 ಕೆ.ಜಿ.ಯಿಂದ 50 ಕೆ.ಜಿ. ಗೋಡಂಬಿ ಉತ್ಪಾದನೆ ಮಾತ್ರ ಆಗುತ್ತಿತ್ತು. ಬಳಿಕ ಘಟಕದಿಂದ ಬಂದ ಆದಾಯ ಹಾಗೂ ಉಳಿತಾಯದ ಹಣದಿಂದ ಸ್ವಯಂಚಾಲಿತ(ಆಟೊಮೆಟಿಕ್) ಕಟ್ಟಿಂಗ್ ಯಂತ್ರ ಖರೀದಿಸಿದೆವು. ಬರುವ ದಿನಗಳಲ್ಲಿ ಇನ್ನೂ ಅಧಿಕ ಗೋಡಂಬಿ ಉತ್ಪಾದನೆಗೆ ಹೆಚ್ಚಿನ ಸಾಮರ್ಥ್ಯದ ಸ್ವಯಂಚಾಲಿತ ಕಟ್ಟಿಂಗ್ ಯಂತ್ರ ಖರೀದಿಸುವ ಆಲೋಚನೆಯಿದೆ ಎಂದು ಹೇಳುತ್ತಾರೆ.
ರೈತರಿಂದ ಖರೀದಿಸಿ ತಂದು, ಸಂಸ್ಕರಿಸಿದ ಗೋಡಂಬಿಯನ್ನು ಅರ್ಧ ಕೆ.ಜಿ, ಒಂದು ಕೆ.ಜಿ, 5 ಕೆ.ಜಿ., 10 ಕೆ.ಜಿ.ಯಂತೆ ಪ್ಯಾಕ್ ಮಾಡಿ ಮಾರಾಟ ಮಾಡುತ್ತೇವೆ. ಮೂರು ಗುಣಮಟ್ಟದ ಗೋಡಂಬಿ ಇರುತ್ತದೆ. ಮೊದಲ ಗುಣಮಟ್ಟದ ಗೋಡಂಬಿ ಕೆ.ಜಿ.ಗೆ ₹ 850, ದ್ವಿತೀಯ ದರ್ಜೆ ಗುಣಮಟ್ಟದ ಗೋಡಂಬಿ ₹ 720 ಹಾಗೂ ಮೂರನೇ ಗುಣಮಟ್ಟದ ಗೋಡಂಬಿ ಕೆ.ಜಿ.ಗೆ ₹ 650 ರಂತೆ ಮಾರಾಟವಾಗುತ್ತದೆ ಎಂದು ತಿಳಿಸುತ್ತಾರೆ.
15 ವರ್ಷದ ಹಿಂದೆ ರಚಿಸಿದ ಸ್ವಸಹಾಯ ಗುಂಪಿನಲ್ಲಿ 12 ಸದಸ್ಯೆಯರು ಇದ್ದೇವೆ. ವಾರಕ್ಕೆ ಒಬ್ಬರಿಗೆ ತಲಾ ₹ 20 ಉಳಿತಾಯ ಮಾಡುತ್ತಾ ಬಂದಿದ್ದೇವೆ. ಅದರಲ್ಲಿ ಅವಶ್ಯಕತೆ ಇರುವವರಿಗೆ ಸಾಲ ಕೊಡುತ್ತಿದ್ದೇವೆ. ಐದು ವರ್ಷಕ್ಕೆ ಒಮ್ಮೆ ಆದಾಯ ಹಂಚಿಕೊಳ್ಳುತ್ತೇವೆ’ ಎಂದು ತಿಳಿಸುತ್ತಾರೆ.
ಕನಕದಾಸ ಎಸ್ಎಚ್‌ಜಿಯವರು ಗೋಡಂಬಿ ಸಂಸ್ಕರಣ ಘಟಕದಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಬೇರೆ ಗುಂಪಿನವರೂ ಆದಾಯ ತರುವ ವಿನೂತನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕುಡಾ. ಗಿರೀಶ್ ಬದೋಲೆ ಜಿ.ಪಂ. ಸಿಇಒ
ಗೋಡಂಬಿ ಸಂಸ್ಕರಣೆ ಘಟಕದಿಂದ ಗುಂಪಿನ ಸದಸ್ಯೆಯರಿಗೆ ಅನುಕೂಲವಾಗಿದೆ. ಇದರಿಂದ ನಾಲ್ಕು ವರ್ಷಗಳಲ್ಲಿ ₹ 6 ಲಕ್ಷ ಆದಾಯ ಬಂದಿದೆರೇಣುಕಾ ಮಲ್ಕಾಪುರೆ ಕನಕದಾಸ ಮಹಿಳಾ ಸ್ವಸಹಾಯ ಗುಂಪಿನ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.