ADVERTISEMENT

ಬಿಲ್ಲವರ ಬೇಡಿಕೆ ಈಡೇರಿಕೆಗೆ ಆಗ್ರಹ|700 ಕಿ.ಮೀ ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:24 IST
Last Updated 24 ನವೆಂಬರ್ 2025, 6:24 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಬೀದರ್‌: ‘ಬಿಲ್ಲವ ಸಮಾಜದ 18 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬರುವ ಜನವರಿಯಲ್ಲಿ 700 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಶಹಾಪುರ ತಾಲ್ಲೂಕಿನ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಜನವರಿ 6ರಂದು ಶಹಾಪುರದ ಶಕ್ತಿಪೀಠದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈಡಿಗ, ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ ಒಟ್ಟು 18 ಬೇಡಿಕೆಗಳ ಈಡೇರಿಕೆಗೆ ಸತತವಾಗಿ ಸರ್ಕಾರವನ್ನು ಒತ್ತಾಯಿಸುತ್ತ ಬರಲಾಗಿದೆ. ಆದರೆ, ಕಿವಿಗೊಟ್ಟಿಲ್ಲ. ಸರ್ಕಾರದ ಕಣ್ತೆರೆಸಲು 41 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಬಳಿಕ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.

ADVERTISEMENT

ಬಿಜೆಪಿ ಅಡಳಿತಾವಧಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಆಚರಿಸಲು ಆರಂಭಿಸಲಾಯಿತು. ಆಗ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ₹10 ಕೋಟಿ ಅನುದಾನ ಸಹ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳು ಕಳೆದರೂ ನಯಾಪೈಸೆ ನೀಡಿಲ್ಲ. ಒಂದು ತಿಂಗಳ ಕೆಳಗಷ್ಟೇ ನಿಗಮಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ನಿಗಮಕ್ಕೆ ಕನಿಷ್ಠ ₹500 ಕೋಟಿ ಅನುದಾನ ನೀಡಬೇಕು. ಕುಲಕಸುಬು ಕಳೆದುಕೊಂಡಿವರಿಗೆ ಈಡಿಗರಿಗೆ 5 ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಮಂಗಳೂರು, ಉಡುಪಿ, ಕಾರವಾರ ಹಾಗೂ ಶಿವಮೊಗ್ಗದಲ್ಲಿ 22 ಲಕ್ಷಕ್ಕೂ ಅಧಿಕ ಹಾಗೂ ರಾಜ್ಯದ ಇತರೆ 27 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಅಧಿಕ ಸೇರಿದಂತೆ ಒಟ್ಟು 33 ಲಕ್ಷ ಜನಸಂಖ್ಯೆಯಿರುವ ಸಮಾಜವನ್ನು 2ಎದಿಂದ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ವಿಧಾನಸೌಧದ ಎದುರು ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಈಡಿಗ ಸಮಾಜದ ಹಾಗೂ ಹಿಂದುಳಿದ ವರ್ಗದ ಭಕ್ತಿ-ಶ್ರದ್ಧಾ ಕೇಂದ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿದ ಮೊಕ್ಕದಮೆಗಳನ್ನು ಕೂಡಲೇ ಹಿಂಪಡೆಯಬೇಕು. ಮದ್ಯ ಮಾರಾಟದಲ್ಲಿ ಸಮಾಜದವರಿಗೆ ಶೇ 50ರಷ್ಟು ಮೀಸಲಾತಿ ನೀಡಬೇಕು. ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗೆ ಪ್ರಾಧಿಕಾರಕ್ಕೆ ಪ್ರತಿ ಬಜೆಟ್‌ನಲ್ಲಿ ಕನಿಷ್ಠ ₹100 ಕೋಟಿ ನೀಡಬೇಕು. ನಾರಾಯಣಗುರುಗಳ ಹೆಸರಲ್ಲಿ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸಬೇಕೆಂದು ಹಕ್ಕೊತ್ತಾಯ ಮಾಡಿದರು.

ಮುಖಂಡರಾದ ಸುಭಾಷ ಚೌಧರಿ, ಸಂಗಯ್ಯ ಸುಲ್ತಾನಪುರ, ದಿಲೀಪ ತೇಲಂಗ್, ಉಮೇಶ ತೇಲಂಗ್, ಆನಿಲಗೋಡ್ ಸುಂದಾಳ, ಸುರೇಶ, ಸತೀಶ ಎಣಕೂರ, ರಾಜಕುಮಾರ, ಆಕಾಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.