ADVERTISEMENT

ಔರಾದ್: ಗಣೇಶ್ ಉತ್ಸವದಲ್ಲಿ ರಕ್ತದಾನ ಮಾಡಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:39 IST
Last Updated 13 ಸೆಪ್ಟೆಂಬರ್ 2024, 14:39 IST
ಔರಾದ್ ಪಟ್ಟಣದಲ್ಲಿ ಗಣೇಶ್ ಉತ್ಸವ ಅಂಗವಾಗಿ ನಡೆದ ಶಿಬಿರದಲ್ಲಿ ರಕ್ತದಾನ ಮಾಡಿದ ಫೈಜುಲ್ಲಾಖಾನ್ ಹಾಗೂ ಮೋಸಿನ್ ಪಟೇಲ್ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು
ಔರಾದ್ ಪಟ್ಟಣದಲ್ಲಿ ಗಣೇಶ್ ಉತ್ಸವ ಅಂಗವಾಗಿ ನಡೆದ ಶಿಬಿರದಲ್ಲಿ ರಕ್ತದಾನ ಮಾಡಿದ ಫೈಜುಲ್ಲಾಖಾನ್ ಹಾಗೂ ಮೋಸಿನ್ ಪಟೇಲ್ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು   

ಔರಾದ್: ಪಟ್ಟಣದ ಮಾತೆ ಮಾಣಿಕೇಶ್ವರಿ ಕಾಲೊನಿಯಲ್ಲಿ ಹಿಂದೂ ಮಹಾ ಗಣೇಶ ಮಂಡಳಿ ಶುಕ್ರವಾರ ಆಯೋಜಿಸಿದ್ದ ಶಿಬಿರದಲ್ಲಿ ಇಬ್ಬರು ಮುಸ್ಲಿಂ ಹಾಗೂ ಒಬ್ಬರು ಕ್ರಿಶ್ಚಿಯನ್‌ ಯುವಕರು ರಕ್ತದಾನ ಮಾಡಿ ಭಾವೈಕ್ಯತೆ ಮರೆದಿದ್ದಾರೆ.

ಪ್ರತಿ ವರ್ಷ ವೈಶಿಷ್ಟ್ಯಪೂರ್ಣ ಗಣೇಶ ಉತ್ಸವ ಆಚರಣೆಗೆ ಹೆಸರು ಮಾಡಿದ ಹಿಂದೂ ಮಹಾ ಗಣೇಶ ಮಂಡಳಿ ಈ ಬಾರಿ 11ನೇ ವರ್ಷಾಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಿತ್ತು.

ಪಟ್ಟಣದ ನಿವಾಸಿ ಫೈಜುಲ್ಲಾಖಾನ್, ಮೋಸಿನ್ ಪಟೇಲ್, ಆಕಾಶ ನಾಗೂರೆ, ಸಂತೋಷ, ಸ್ವಾಮಿ, ಶಿವಬಸವ ಪಾಟೀಲ, ನಾಗರಾಜ ಭಾಲ್ಕೆ, ವಿಶಾಲ ಗಜರೆ, ಶ್ರೀಕಾಂತ ನಿರ್ಮಳೆ, ಬಸವಲಿಂಗ ಯನಗುಂದೆ ಸೇರಿದಂತೆ 20 ಯುವಕರು ರಕ್ತದಾನ ಮಾಡಿದ್ದಾರೆ. ಇನ್ನು 15 ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ತಿಳಿಸಿದ್ದಾರೆ.

ADVERTISEMENT

ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಸಿಪಿಐ ರಘುವೀರಸಿಂಗ್ ಠಾಕೂರ್ ‘ಇಲ್ಲಿ ಹಿಂದೂ ಮುಸ್ಲಿಂರು ಸೇರಿ ಗಣೇಶ ಉತ್ಸವ ಆಚರಿಸುವುದು ಮಾದರಿಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದು ಬಹಳ ಖುಷಿ ಕೊಡುತ್ತಿದೆ’ ಎಂದು ಹೇಳಿದರು.

ಶಿಬಿರ ಉದ್ಘಾಟಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ‘ಇಲ್ಲಿಯ ಯುವಕರು ರಕ್ತದಾನ ಮಾಡುವ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಎಲ್ಲ ಯುವಕರಲ್ಲಿ ಇಂತಹ ಮಾನವೀಯ ಗುಣ ಬರಬೇಕು’ ಎಂದರು.

ಹಿಂದೂ ಮಹಾ ಗಣೇಶ ಮಂಡಳಿ ಅಧ್ಯಕ್ಷ ಸಂತೋಷ ದ್ಯಾಡೆ, ‘ಎಲ್ಲ ಸಮುದಾಯ ಜನ ಸೇರಿ ನಾವು ಪ್ರತಿ ವರ್ಷ ಗಣೇಶ ಉತ್ಸವ ಆಚರಿಸುತ್ತೇವೆ. ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ದಾಸೋಹ ವಿತರಣೆಯಲ್ಲಿ ಮುಸ್ಲಿಂ ಯುವಕರು ಕೈಜೋಡಿಸುತ್ತಾರೆ. ನಮ್ಮ ಗೆಳೆಯ ಮೋಸಿನ್ ಪಟೇಲ್ ಅವರು ಇಂದು ನಡೆಯುವ 7ನೇ ದಿನದ ಪ್ರಸಾದ ವ್ಯವಸ್ಥೆ ಖರ್ಚು ಅವರೇ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳೂರ್, ಶಂಕು ನಿಸ್ಪತೆ, ಪಿಎಸ್‍ಐ ವಸಿಮ್ ಪಟೇಲ್, ದಯಾನಂದ ಘುಳೆ ಮತ್ತಿತರರು ಶಿಬಿರದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.