ಔರಾದ್: ‘ನಮ್ಮ ರಾಜ್ಯದ ಸುತ್ತಮುತ್ತ ಇರುವ ಗಡಿ ಭಾಗದ ಕನ್ನಡ ಶಾಲೆಗಳ ಪ್ರಗತಿಗೆ ಪ್ರಾಧಿಕಾರ ಎಲ್ಲ ರೀತಿಯ ನೆರವು ನೀಡಲಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ತಾಲ್ಲೂಕಿನ ಗಡಿಗ್ರಾಮ ನಾಗಮಾರಪಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ ಪ್ರಾಧಿಕಾರದಿಂದ ಮಂಜೂರಾದ ಸ್ಮಾರ್ಟ್ ಬೋರ್ಡ್ ಉದ್ಘಾಟಿಸಿ ಅವರು ಮಾತನಾಡಿದರು.
‘ಈಗಾಗಲೇ ತಾವು 16 ಜಿಲ್ಲೆಯ 49 ತಾಲ್ಲೂಕುಗಳಿಗೆ ಭೇಟಿ ನೀಡಿ ಗಡಿ ಭಾಗದ ಕನ್ನಡ ಸ್ಥಿತಿಗತಿ ಬಗ್ಗೆ ಪೂರ್ಣ ಮಾಹಿತಿ ಪಡೆದಿದ್ದೇನೆ. ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗೆ ಮರಾಠಿ ಶಿಕ್ಷಕ ನೇಮಕ ವಿಷಯ ಗೊತ್ತಾಗುತ್ತಿದ್ದಂತೆ ಅಲ್ಲಿ ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ನೋಡಿಕೊಳ್ಳಲಾಗಿದೆ. ಬೇರೆ ರಾಜ್ಯದ ಗಡಿ ಭಾಗದ ಕನ್ನಡ ಶಾಲೆ ಹಾಗೂ ಅಲ್ಲಿಯ ಕನ್ನಡಿಗರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಅನ್ಯ ರಾಜ್ಯದಲ್ಲಿ ಓದಿದ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲಿಯ ಶಾಲೆಗಳಿಗೆ ಕನ್ನಡ ಪುಸ್ತಕ ಪೂರೈಸಲಾಗಿದೆ’ ಎಂದು ಹೇಳಿದರು.
ಗಡಿಭಾಗದ ಕನ್ನಡ ಶಾಲೆಗಳಲ್ಲಿ ಶಿಕ್ಷಕ ಕೊರತೆ ಹಾಗೂ ಇತರೆ ಮೂಲಸೌಲಭ್ಯದ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹಂತ ಹಂತವಾಗಿ ಈ ಎಲ್ಲ ಮೂಲ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ತಿಳಿಸಿದರು.
‘ಗೋವಾ ಸೇರಿದಂತೆ ನಮ್ಮ ನೆರೆಹೊರೆ ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಪ್ರಾಧಿಕಾರ ಸರ್ಕಾರಕ್ಕೆ ಕೊಟ್ಟಿರುವ ₹15 ಕೋಟಿ ಅನುದಾನ ಅಗತ್ಯ ಇರುವ ಕಡೆ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರಕ್ಕೆ ₹100 ಕೋಟಿ ಅನುದಾನ ಕೊಡಲು ಸರ್ಕಾರಕ್ಕೆ ಕೇಳಲಾಗಿದೆ’ ಎಂದು ಹೇಳಿದರು.
ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಲಾಜಿ ಅಮರವಾಡಿ, ಮುಖ್ಯಶಿಕ್ಷಕ ತುಳಸಿರಾಮ ಬೇಂದ್ರೆ, ಶಾಲಾ ಸಮಿತಿ ಅಧ್ಯಕ್ಷ ಪ್ರಕಾಶ ಹೆಬ್ಬಾಳೆ, ಪಿಡಿಒ ಶರಣಪ್ಪ ನಾಗಲಗಿದ್ದಿ, ಶಿಕ್ಷಕ ಈಶ್ವರ ಕ್ಯಾದೆ, ಮಹಾನಂದಾ, ನಾಗನಾಥ ಸುರಂಗೆ ಹಾಜರಿದ್ದರು.
ಪ್ರಾಧಿಕಾರದ ಅಧ್ಯಕ್ಷರು ಔರಾದ್ ಕನ್ನಡ ಭವನಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಸಮಾಲೋಚನೆ ನಡೆಸಿದರು. ಅನುದಾನರಹಿತ ಶಾಲೆ ಆಡಳಿತ ಮಂಡಳಿ ಗಡಿಯಲ್ಲಿ ಖಾಸಗಿ ಕನ್ನಡ ಶಾಲೆ ಉಳಿಸಲು ಸಹಕಾರ ನೀಡುವಂತೆ ಕೋರಿದರು. ಗಡಿಭಾಗದ 23 ಗ್ರಾಮಗಳಲ್ಲಿ ಕನ್ನಡ ಶಾಲೆ ಆರಂಭಿಸುವಂತೆ ಕಸಾಪ ಅಧ್ಯಕ್ಷರು ಮನವಿ ಮಾಡಿದರು.
ಸರಳತೆ ಮೆರೆದ ಪ್ರಾಧಿಕಾರದ ಅಧ್ಯಕ್ಷರು
ಔರಾದ್ ತಾಲ್ಲೂಕಿನ ನಾಗಮಾರಪಳ್ಳಿ ಸರ್ಕಾರಿ ಶಾಲೆಗೆ ಶನಿವಾರ ಭೇಟಿ ನೀಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಕಾರ್ಯಕ್ರಮದಲ್ಲಿ ಸನ್ಮಾನ ಹಾರ-ತುರಾಯಿಗೆ ಅವಕಾಶ ನೀಡದೆ ಸರಳತೆ ಮೆರೆದರು. ಶಾಲೆಗೆ ಪ್ರಾಧಿಕಾರದಿಂದ ಮಂಜೂರಾದ ಸ್ಮಾರ್ಟ್ ಬೋರ್ಡ್ ವಿದ್ಯಾರ್ಥಿಗಳಿಂದಲೇ ಉದ್ಘಾಟಿಸಿದರು. ತಮ್ಮ ಸನ್ಮಾನಕ್ಕೆ ತಂದ ಪೇಟ ಹಾಗೂ ಶಾಲು ಶಾಲೆ ಮುಖ್ಯಶಿಕ್ಷಕರಿಗೆ ತೊಡಿಸಿದರು. ಶಾಲೆ ಕೊಠಡಿಗಳಲ್ಲಿ ಭವಿಷ್ಯ ನಿರ್ಮಾಣ ಆಗುತ್ತದೆ. ಹೀಗಾಗಿ ನಿಜವಾಗಿ ಗೌರವಕ್ಕೆ ಅರ್ಹರಾದವರು ಶಿಕ್ಷಕರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.