ಬೀದರ್: ‘ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‌ಎಸ್‌ಕೆ) ಲೀಜ್‌ಗೆ ಕೊಡಬೇಕು ಅಥವಾ ಸರ್ಕಾರ ಅನುದಾನ ಕೊಟ್ಟು ಶೀಘ್ರ ಪ್ರಾರಂಭಿಸಬೇಕು’ ಎಂದು ಮಾಜಿ ಶಾಸಕರೂ ಆದ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ ಆಗ್ರಹಿಸಿದರು.
ಕಾರ್ಖಾನೆಗೂ ನಮಗೂ ಭಾವನಾತ್ಮಕ ಸಂಬಂಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಹೇಳುತ್ತಾರೆ. ಆದರೆ, ಅದೇ ಕಾರ್ಖಾನೆ ಆರಂಭಕ್ಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಾರ್ಖಾನೆಯ ಪುನಶ್ಚೇತನಕ್ಕಾಗಿ ಲೀಜ್ ಮೇಲೆ ಕೊಡಬೇಕು. ಇಲ್ಲವಾದಲ್ಲಿ ಸರ್ಕಾರ ವಿಶೇಷ ಅನುದಾನ ನೀಡಬೇಕು. ಈ ಕೆಲಸ ಮಾಡಲು ಆಗದಿದ್ದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಬಿಡುವುದಿಲ್ಲ. ಒಂದುವೇಳೆ ಅದಕ್ಕೆ ಕೈ ಹಾಕಿದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಎಸ್‌ಎಸ್‌ಕೆ 173.35 ಎಕರೆ ಜಮೀನು ಹೊಂದಿದೆ. ಡಿಸಿಸಿ ಬ್ಯಾಂಕ್‌ನವರಿಗೆ ಏಳೆಂಟು ಸಲ ಪತ್ರ ಬರೆದು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಲಾಗಿದೆ. ಲೀಜ್‌ನಿಂದ ಬರುವ ಹಣದಿಂದ ಸಾಲ ಪಾವತಿ ಮಾಡಲಾಗುವುದು ಎಂದು ವಿನಂತಿಸಲಾಗಿದೆ. ಆದರೆ, ಚುನಾಯಿತ ಆಡಳಿತ ಮಂಡಳಿಯವರಿಗೆ ತಿಳಿಸದೆ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆಯವರು 2024ರ ಆಗಸ್ಟ್ 2ರಂದು ಕಬ್ಜೆಗೆ ಪಡೆದು ಡಿಸೆಂಬರ್ 16ರಂದು ₹184 ಕೋಟಿಗೆ ಹರಾಜು ಮಾಡಿದ್ದಾರೆ ಎಂದು ಆರೋಪಿಸಿದರು.
ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಹಿತಾಸಕ್ತಿ ಕಾಪಾಡಲು ಉಸ್ತುವಾರಿ ಸಚಿವರು ವಿಳಂಬ ಮಾಡುತ್ತಿದ್ದಾರೆ. ಅವರ ವರ್ತನೆಗೆ ಬೇಸತ್ತು ಹೋಗಿದ್ದೇವೆ. ಬಿಎಸ್‌ಎಸ್‌ಕೆ ಆರಂಭಿಸಲು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸುತ್ತೇನೆ. ಈ ಹಿಂದೆ ಕಾರ್ಖಾನೆಯನ್ನು ಲೀಜ್‌ಗೆ ಪಡೆಯಲು ಮೂವರು ಬಿಡ್‌ದಾರರು ಮುಂದೆ ಬಂದಿದ್ದರು. ಆದರೆ, ಉದ್ದೇಶಪೂರ್ವಕವಾಗಿಯೇ ಲೀಜ್‌ಗೆ ಕೊಡಲಿಲ್ಲ ಎಂದು ಆರೋಪ ಮಾಡಿದರು.
ಕೆಲವು ತಿಂಗಳ ಹಿಂದೆ ವಿಧಾನಸೌಧದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಆಯುಕ್ತರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ. ಆಗ ಜಿಲ್ಲಾ ಉಸ್ತುವಾರಿ ಸಚಿವರು ಒಟಿಎಸ್ ಯೋಜನೆ ಅಡಿಯಲ್ಲಿ ಪಾವತಿಸಲು ಎನ್‌ಸಿಡಿಸಿಯಿಂದ ಸಾಲ ಪಡೆದು ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಸಾಲ ಪಾವತಿಸಲು ಸರ್ಕಾರದ ಖಾತ್ರಿ ನೀಡುವಂತೆ ಸಿಎಂಗೆ ಭೇಟಿಯಾಗಿ ಕೋರಲಾಗುವುದು ಎಂದು ಹೇಳಿದ್ದರು. ಆದರೆ, 70 ದಿನಗಳಾದರೂ ಸಚಿವರು ಕ್ಯಾರೇ ಎನ್ನುತ್ತಿಲ್ಲ. ನಾವು ಕೇಳಿದಾಗಲೆಲ್ಲ ಎರಡ್ಮೂರು ದಿನಗಳಲ್ಲಿ ಸಮಯ ತೆಗೆದುಕೊಳ್ಳುವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಖಾನೆಯ ಉಪಾಧ್ಯಕ್ಷ ವಿಶ್ವನಾಥ ಪಾಟೀಲ ಮಾಡಗೂಳ, ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ ಚಿಟಗುಪ್ಪ, ಬಕ್ಕಪ್ಪ ಬಸರೆಡ್ಡಿ, ಅಪ್ಪಾರಾವ್ ಡಾಕುಳಗಿ, ರಾಜಪ್ಪ ಶೇರಿಕಾರ್ ಇದ್ದರು.
ಈಶ್ವರ ಬಿ. ಖಂಡ್ರೆಯವರು ಉಸ್ತುವಾರಿ ಸಚಿವರಾಗಿದ್ದಾರೆ. ಅವರ ಮಗ ಸಂಸದರಾಗಿದ್ದಾರೆ. ಅವರ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಹೀಗಿದ್ದರೂ ರೈತರ ಜೀವನಾಡಿ ಬಿಎಸ್‌ಎಸ್‌ಕೆ ಕಾರ್ಖಾನೆ ಆರಂಭಿಸಲು ಸಾಧ್ಯವಾಗಿದ್ದರೆ ಹೇಗೆ?ಸುಭಾಷ ಕಲ್ಲೂರ ಅಧ್ಯಕ್ಷ ಬಿಎಸ್‌ಎಸ್‌ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.