
ಬೀದರ್: ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಿಲ್ಲಾ ಎನ್.ಸಿ.ಡಿ. ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಕ್ಯಾನ್ಸರ್ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿ, ಪ್ರತಿ ವರ್ಷ ಭಾರತದಲ್ಲಿ 14ರಿಂದ15 ಲಕ್ಷ ಕ್ಯಾನ್ಸರ್ ಹೊಸ ಪ್ರಕರಣಗಳು ವರದಿಯಾಗುತ್ತಿವೆ. 8 ರಿಂದ 9 ಲಕ್ಷ ಸಾವುಗಳು ಸಂಭವಿಸುತ್ತಿವೆ. ಯಾವುದೇ ತರಹದ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಲ್ಲಿ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವರ್ಷದ ಕ್ಯಾನ್ಸರ್ ದಿನಾಚರಣೆಯ ಘೋಷಕವಾಕ್ಯ ‘ವಿಶಿಷ್ಟತೆಯಿಂದ ಏಕತೆ’ ಎಂಬುದಾಗಿದೆ. ಜನರಲ್ಲಿ ಕ್ಯಾನ್ಸರ್ ಕುರಿತ ರೋಗ ಕಾರಣಗಳು, ಲಕ್ಷಣಗಳು, ತಪಾಸಣೆ ಹಾಗೂ ಆರೈಕೆ ಕುರಿತು ಅರಿವು ಬಹುಮುಖ್ಯ. ಆದಕಾರಣ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪ ಬೊಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಪ್ರಮಾಣವು ಜಗತ್ತಿನಾದ್ಯಾಂತ ಅತಿ ತೀವ್ರವಾಗಿ ಹೆಚ್ಚುತ್ತಿದೆ. ಜನರಲ್ಲಿ ಭಯದ ಬದಲು ರೋಗದ ಅರಿವು ಬಹಳ ಮುಖ್ಯವಾದುದು. ಇದಕ್ಕೆ ಪ್ರಮುಖವಾಗಿ ತಂಬಾಕು ಪದಾರ್ಥಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮದ್ಯಪಾನ ಸೇವನೆ ಮುಖ್ಯ ಕಾರಣಗಳಾಗಿವೆ. ಪುರುಷರಲ್ಲಿ ಪ್ರಮುಖವಾಗಿ ಬಾಯಿ, ಗಂಟಲು, ಶ್ವಾಸಕೋಶ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್‌ಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದರು.
ಜನರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. 30 ವರ್ಷ ಮೇಲಿನ ಪುರುಷರು ಪ್ರತಿ 5 ವರ್ಷಗಳಿಗೊಮ್ಮೆ ಬಾಯಿ ಕ್ಯಾನ್ಸರ್ ಹಾಗೂ ಮಹಿಳೆಯರು ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದಿಲೀಪ್ ಡೊಂಗ್ರೆ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಶಿವಶಂಕರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರಾಜಶೇಖರ ಪಾಟೀಲ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಅನಿಲ ಚಿಂತಾಮಣಿ, ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮ ಸಂಯೋಜಕ ಡಾ.ವೀರೇಶ ಬಿರಾದಾರ, ಪ್ರಾದೇಶಿಕ ಕಾರ್ಯ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ, ಎಸ್.ಬಿ. ಪಾಟೀಲ್ ದಂತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕ ಡಾ. ಸಿದ್ದನಗೌಡ, ಸಿದ್ದಾರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಮಹೇಶ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು ಗುರುನಾಥ, ವಸಂತ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಬಾಲಾಜಿ, ಜಿಲ್ಲಾ ಎಫ್.ಎಲ್.ಸಿ. ಪ್ರವೀಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಮೇಶ ಕಾಂಬ್ಳೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.