ಬೀದರ್: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶನಿವಾರ ನಗರದ ನಯಾ ಕಮಾನ್, ಚಮಕುರಿ ಗಲ್ಲಿಗೆ ಭೇಟಿ ಕೊಟ್ಟು ನವಜಾತ ಶಿಶುಗಳಿಗೆ ನೀಡಲಾಗುವ ಲಸಿಕಾಕರಣದ ಪ್ರಕ್ರಿಯೆ ಪರಿಶೀಲಿಸಿ, ಮಾಹಿತಿ ಪಡೆದರು.
ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ಸಿಡಿಪಿಒ ಹಾಜರಿದ್ದರು. ಜನನಿ ಸುರಕ್ಷಾ ಯೋಜನೆ ಹಾಗೂ ಮಾತೃವಂದನಾ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಎಲ್ಲ ಹೆಣ್ಣು ಮಕ್ಕಳಿಗೂ ಜಾಗೃತಿ ಮೂಡಿಸಬೇಕು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರತಿ ತಿಂಗಳು ವಿಶೇಷ ಜಾಗೃತಿ ಆಂದೋಲನ ಹಮ್ಮಿಕೊಳ್ಳಬೇಕು ಎಂದು ಶಿಲ್ಪಾ ಶರ್ಮಾ ಸೂಚಿಸಿದರು.
ಜನನಿ ಸುರಕ್ಷಾ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಪ್ರತಿ ಮಹಿಳೆಗೆ ಗ್ರಾಮೀಣ ಪ್ರದೇಶದಲ್ಲಿ ಮೊದಲ ಹಾಗೂ ಎರಡನೇ ಹೆರಿಗೆಗೆ ತಲಾ ₹700 ಹಾಗೂ ನಗರಗಳಲ್ಲಿ ₹600 ಫಲಾನುಭವಿ ಖಾತೆಗೆ ಜಮೆ ಮಾಡಲಾಗುತ್ತಿದೆ. ಮಾತೃವಂದನಾ ಕಾರ್ಯಕ್ರಮದಡಿ ಮೊದಲ ಹೆರಿಗೆಗೆ ₹5 ಸಾವಿರ, ಎರಡು ಕಂತುಗಳಲ್ಲಿ ಹಾಗೂ 2ನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ₹6 ಸಾವಿರ ಒಂದೇ ಕಂತಿನಲ್ಲಿ ಜಮೆಯಾಗುತ್ತದೆ ಎಂದು ಹೇಳಿದರು.
ಮಾತೃವಂದನಾ ಯೋಜನೆಯಡಿ ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ 10,629 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಪ್ರಥಮ ಸಲ ಗರ್ಭಿಣಿಯಾದ 6,592 ಮಹಿಳೆಯರಿಗೆ ₹5 ಸಾವಿರದಂತೆ ₹3.29 ಕೋಟಿ ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಾದಲ್ಲಿ 6 ಸಾವಿರಗಳಂತೆ 3,298 ಫಲಾನುಭವಿಗಳಿಗೆ ₹1.97 ಕೋಟಿ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.
ಮಹಿಳೆಯರು ನವಜಾತ ಶಿಶುಗಳಿಗೆ ರೋಗ ತಡೆಗಟ್ಟಲು ಬಾಲಕ್ಷಯ, ರೋಟಾವೈರಸ್ ಅತಿಸಾರ ಭೇದಿ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ಇನ್‌ಫ್ಲುಯೆಂಜ, ಹೆಪಟೈಟಿಸ್ ಬಿ, ನ್ಯೂಮೊಕೊಕಲ್ ಕಾಯಿಲೆ, ರೋಟಾವೈರಸ್ ಅತಿಸಾರ ಭೇದಿ, ದಡಾರ ಮತ್ತು ರುಬೆಲ್ಲಾ, ನ್ಯೂಮೊಕೊಕಲ್ ಕಾಯಿಲೆ, ಮೆದುಳು ಜ್ವರ, ಇರುಳು ಕುರುಡಿಗೆ ಸಂಬಂಧಿಸಿದ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 26,588 ಮಕ್ಕಳಿಗೆ ಎಲ್ಲ ತರಹದ ಬಿಸಿಜಿ, ಹೆಪಟೈಟಿಸ್, ಪೋಲಿಯೋ, ರೋಟಾವೈರಸ್ ಸೇರಿದಂತೆ ಎಲ್ಲ ಲಸಿಕೆಗಳನ್ನು ಹಾಕಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲೆಯ ಪ್ರತಿಯೊಬ್ಬ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಲ್ಪಾ ಶರ್ಮಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.