ADVERTISEMENT

ಬಸವಕಲ್ಯಾಣ: ಸಂಭ್ರಮದ ಹಾರಕೂಡ ರಥೋತ್ಸವ

ಚನ್ನಬಸವ ಶಿವಯೋಗಿಗಳ 74 ನೇ ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 4:58 IST
Last Updated 25 ಡಿಸೆಂಬರ್ 2025, 4:58 IST
   

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದಲ್ಲಿ ಹಿರೇಮಠ ಸಂಸ್ಥಾನದ ಸದ್ಗುರು ಚನ್ನಬಸವ ಶಿವಯೋಗಿಗಳ 74ನೇ ಜಾತ್ರಾಮಹೋತ್ಸವದ ಅಂಗವಾಗಿ ಬುಧವಾರ ರಥೋತ್ಸವ ಜರುಗಿತು. ಅಪಾರ ಭಕ್ತರು ಸೂರ್ಯಾಸ್ತದೊಂದಿಗೆ ರಥ ಎಳೆದು ಜೈಕಾರ ಕೂಗಿ ಸಂಭ್ರಮಿಸಿದರು.

ಶಿವಯೋಗಿಗಳ ಗದ್ದುಗೆಗೆ ಪೂಜೆ, ಅಭಿಷೇಕ ನೆರವೆರಿಸಿದ ಬಳಿಕ ಗ್ರಾಮದಲ್ಲಿ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಪಲ್ಲಕ್ಕಿ ಮಠಕ್ಕೆ ಬಂದಾಗ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು, ತಲೆಮೇಲೆ ವಿಶಿಷ್ಟ ಟೊಪ್ಪಿಗೆ, ಕೊರಳಲ್ಲಿ ದೊಡ್ಡ ಪುಷ್ಪಮಾಲೆ ಹಾಕಿಕೊಂಡು, ಕೈಯಲ್ಲಿ ತ್ರಿಶೂಲ ಹಿಡಿದು ಬಂದು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ರಥವು ಪೂರ್ವಾಭಿಮುಖವಾಗಿ ಸಾಗಿ ಮತ್ತೆ ಮೊದಲಿದ್ದ ಸ್ಥಳಕ್ಕೆ ಹಿಂದಿರುಗಿತು. ಭಜನಾ ತಂಡ, ವಾದ್ಯ ಮೇಳದವರು, ಕಲಾ ತಂಡದವರು ಮುಂದೆ ಮುಂದೆ ಸಾಗಿದರು. ಪಟಾಕಿ ಸಿಡಿಸಲಾಯಿತು. ಚನ್ನಬಸವ ಶಿವಯೋಗಿಗಳಿಗೆ ಜಯವಾಗಲಿ ಎಂದು ಭಕ್ತರು ಜೈಕಾರ ಕೂಗಿದರು. ಮಹಿಳೆ ಮಕ್ಕಳಾದಿಯಾಗಿ ನೆರೆದಿದ್ದ ಅನೇಕರು ರಥದ ಮೇಲೆ ಹಣ್ಣು, ನಾಣ್ಯ ಎಸೆದು ದರ್ಶನ ಪಡೆದರು.

ADVERTISEMENT

ಮಠದ ಆವರಣದಲ್ಲಿ ಎಲ್ಲೆಂದರಲ್ಲಿ ವಿವಿಧ ತಿನಿಸುಗಳ ಅಂಗಡಿಗಳಿದ್ದವು. ಭಕ್ತರು ಬೆಂಡುಬತ್ತಾಸು ಹಾಗೂ ಇತರೆ ಸಿಹಿ ತಿನಿಸು, ಮಕ್ಕಳ ಆಟಿಕೆ, ಸಾಮಗ್ರಿ ಖರೀದಿಸಿದರು. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ಮುಡಬಿ, ಶಿರಗಾಪುರ, ಗದ್ಲೇಗಾಂವ ಭಾಗದಲ್ಲಿ ಹಾಗೂ ಸರಜವಳಗಾ ರಸ್ತೆಯಲ್ಲಿ ದೂರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

ಶಿವಾನುಭವ ಚಿಂತನಗೋಷ್ಠಿ ಆಯೋಜಿಸಲಾಗಿತ್ತು. ಡಿಸೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ಜಂಗೀ ಪೈಲ್ವಾನರ ಕುಸ್ತಿ ಸ್ಪರ್ಧೆ ನಡೆಯಲಿದ್ದು ಡಿಸೆಂಬರ್ 26 ರಂದು ಪಶು ಪ್ರದರ್ಶನ ಏರ್ಪಡಿಸಲಾಗುತ್ತದೆ. ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಿಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.