ADVERTISEMENT

ಬೀದರ್: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಬಂಧುಗಳಿಗೆ ಕೇಕ್‌ ಹಂಚಿ ಶುಭಕೋರಿದ ಕ್ರೈಸ್ತರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 12:50 IST
Last Updated 25 ಡಿಸೆಂಬರ್ 2018, 12:50 IST
ಬೀದರ್‌ನ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಮಂಗಳವಾರ ಕ್ರಿಸ್‌ಮಸ್‌ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬಿಷಪ್‌ ಎನ್‌.ಎಲ್‌ ಕರ್ಕರೆ ಮೇಣದ ಬತ್ತಿ ಬೆಳಗಿಸಿದರು. ಕಮಲ ಕರ್ಕರೆ, ರೆವರೆಂಡ್ ಎಂ.ಪಿ. ಜೈಪಾಲ್‌, ಸತ್ಯಮಿತ್ರಾ, ಸ್ಟಾಲಿನ್‌ ಡೇವಿಡ್‌, ಡಿಸೋಜಾ ಥಾಮಸ್‌ ಇದ್ದಾರೆ
ಬೀದರ್‌ನ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಮಂಗಳವಾರ ಕ್ರಿಸ್‌ಮಸ್‌ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬಿಷಪ್‌ ಎನ್‌.ಎಲ್‌ ಕರ್ಕರೆ ಮೇಣದ ಬತ್ತಿ ಬೆಳಗಿಸಿದರು. ಕಮಲ ಕರ್ಕರೆ, ರೆವರೆಂಡ್ ಎಂ.ಪಿ. ಜೈಪಾಲ್‌, ಸತ್ಯಮಿತ್ರಾ, ಸ್ಟಾಲಿನ್‌ ಡೇವಿಡ್‌, ಡಿಸೋಜಾ ಥಾಮಸ್‌ ಇದ್ದಾರೆ   

ಬೀದರ್: ಜಿಲ್ಲೆಯ ವಿವಿಧೆಡೆ ಮಂಗಳವಾರ ಕ್ರೈಸ್ತರು ಸಂಭ್ರಮ ಸಡಗರದೊಂದಿಗೆ ಕ್ರಿಸ್‌ಮಸ್ ಆಚರಿಸಿದರು.

ನಗರದ ಮಂಗಲಪೇಟೆಯಲ್ಲಿ ಇರುವ ಮೆಥೋಡಿಸ್ಟ್‌ ಚರ್ಚ್‌, ಶಹಾಪುರ ಗೇಟ್‌ ಸಮೀಪದ ಸೇಂಟ್‌ ಜೋಸೆಫ್‌ ಚರ್ಚ್, ಕುಂಬಾರವಾಡಾದ ಚರ್ಚ್‌, ನಾವದಗೇರಿ ಚರ್ಚ್‌, ರೋಸ್‌ ಮೆಮೊರಿಯಲ್‌ ಚರ್ಚ್‌, ಮಿರ್ಜಾಪುರದ ಗುಹಾ ದೇವಾಲಯ, ಆಣದೂರಿನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಆರಾಧನೆ ಕಾರ್ಯಕ್ರಮ ನಡೆಯಿತು.

ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಬಂದಿದ್ದರಿಂದ ಮೆಥೋಡಿಸ್ಟ್‌ ಚರ್ಚ್‌ ಆವರಣದಲ್ಲಿ ಶಾಮಿಯಾನ ಹಾಕಲಾಗಿತ್ತು. ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಕ್ರೈಸ್ತರು ಪರಸ್ಪರ ಶುಭಾಶಯ ಕೋರಿದರು.

ADVERTISEMENT

ಇದಕ್ಕೂ ಮೊದಲು ಬಿಷಪ್‌ ಎನ್‌.ಎಲ್‌. ಕರ್ಕರೆ ಅವರು ಕ್ರಿಸ್‌ಮಸ್‌ ದಿನದ ಮೇಣದ ಬತ್ತಿಯನ್ನು ಬೆಳಗಿಸಿ ಭಕ್ತರಿಗೆ ಯೇಸುವಿನ ಸಂದೇಶ ನೀಡಿದರು.

‘ಪರಸ್ಪರರ ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯೇ ದೇವರ ಸಂದೇಶ. ಕ್ರಿಸ್‌ಮಸ್‌, ಮನುಕುಲದ ಕಲ್ಯಾಣಕ್ಕಾಗಿ ಯೇಸು ಅವತರಿಸಿದ ದಿನ. ದೇವರು ತೋರಿದ ದಾರಿಯಲ್ಲಿ ಸಾಗುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ’ ಎಂದರು.

‘ದೀನದಲಿತರ ಉದ್ಧಾರಕ್ಕಾಗಿ ಯೇಸು ಧರೆಗೆ ಇಳಿದು ಬಂದು ಶಾಂತಿ ಹಾಗೂ ಪ್ರೀತಿ ಸಂದೇಶವನ್ನು ಜಗತ್ತಿಗೆ ಸಾರಿದರು. ಯೇಸುವಿನ ಸಂದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಎಂ.ಪಿ.ಜೈಪಾಲ್‌ ಪ್ರವಚನ ನೀಡಿದರು. ಕಮಲ ಕರ್ಕರೆ, ಸತ್ಯಮಿತ್ರಾ, ಸ್ಟಾಲಿನ್‌ ಡೇವಿಡ್‌, ಡಿಸೋಜಾ ಥಾಮಸ್‌ ಪ್ರಾರ್ಥನೆ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಹಾಗೂ ಸಚಿವ ರಹೀಂ ಖಾನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೈಸ್ತರಿಗೆ ಹಬ್ಬದ ಶುಭ ಕೋರಿದರು.

ನಗರಸಭೆ ಸದಸ್ಯ ನಬಿ ಖುರೇಶಿ, ಕಾಂಗ್ರೆಸ್‌ ಮುಖಂಡ ಚಂದ್ರಕಾಂತ ಹಿಪ್ಪಳಗಾಂವ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. ಕ್ರಿಸ್‌ಮಸ್‌ ಪ್ರಯುಕ್ತ ಕ್ರೀಡಾಕೂಟ ಹಾಗೂ ಚಿತ್ರಕಲೆ ಪ್ರದರ್ಶನ ಏರ್ಪಡಿಲಾಗಿತ್ತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಚರ್ಚ್‌ ಆವರಣಗಳಲ್ಲಿ ಗೋದಲಿ, ಯೇಸು, ಮೇರಿ, ಜೋಸೆಫ್ ಹಾಗೂ ಕುರಿಗಳ ಪ್ರತಿಕೃತಿಗಳನ್ನು ಇಡಲಾಗಿತ್ತು. ಧಾರ್ಮಿಕ ಪುಸ್ತಕಗಳು, ಕ್ರಿಸ್‌ಮಸ್‌ ಟ್ರೀ, ಸಾಂಟಾಕ್ಲಾಸ್ ಟೊಪ್ಪಿಗೆ, ವಿವಿಧ ಬಗೆಯ ಬೆಲ್ ಹಾಗೂ ಆಟಿಕೆ ಸಾಮಗ್ರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.