ADVERTISEMENT

'ಬಿಜೆಪಿಯಿಂದ ರೈತರನ್ನು ಗುಲಾಮರನ್ನಾಗಿ ಮಾಡುವ ಸಂಚು'

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 14:07 IST
Last Updated 28 ಡಿಸೆಂಬರ್ 2020, 14:07 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ‘ಬಿಜೆಪಿ ಸರ್ಕಾರ ರೈತ ಪರವಾದ ಕಾನೂನುಗಳಿಗೆ ತಿದ್ದುಪಡಿ ತಂದು ರೈತರನ್ನು ಗುಲಾಮರನ್ನಾಗಿ ಮಾಡುವ ಸಂಚು ನಡೆಸಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಿದೆ. ಬೆಂಬಲ ಬೆಲೆಗೆ ಮಾರಕವಾದ ತೀರ್ಮಾನ ಕೈಕೊಂಡು ಖಾಸಗಿಯವರಿಗೆ ಅನುಕೂಲ ಮಾಡಿಕೊಡುತ್ತಿದೆ. ಒಟ್ಟಾರೆ ರೈತರು ಕತ್ತು ಹಿಸುಕುವ ಕಾರ್ಯ ವ್ಯವಸ್ಥಿತವಾಗಿ ನಡೆದಿದೆ’ ಎಂದು ಇಲ್ಲಿಯ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ದೆಹಲಿಯಲ್ಲಿ ರೈತರು ಒಂದು ತಿಂಗಳಿಂದ ಹೋರಾಟ ನಡೆಸಿದರೂ ಅವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದೇಶದಲ್ಲಿ ಅರಾಜುಕತೆ ಸೃಷ್ಟಿಯಾಗುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ ಮೂರು ಬಾರಿ ಪ್ರವಾಹ ಬಂದು 2.47 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಕೇಂದ್ರದ ಒಬ್ಬ ಮುಖಂಡರು ಜಿಲ್ಲೆಗೆ ಭೇಟಿಕೊಟ್ಟಿಲ್ಲ. ಎನ್‌ಡಿಆರ್‌ಎಫ್‌, ಎಸ್‌ಟಿಆರ್‌ಎಫ್‌ ನಿಯಮಾವಳಿಗಳ ಪ್ರಕಾರ ಪರಿಹಾರವನ್ನೂ ಒದಗಿಸಿಲ್ಲ’ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆ ಅಡಿ ರೈತರಿಗೆ ಕನಿಷ್ಠ ₹ 1 ಸಾವಿರ ಪರಿಹಾರ ಕೊಡಬೇಕಿತ್ತು. ಆದರೆ, ರೈತರ ಖಾತೆಗಳಿಗೆ ₹300, ₹400, ₹ 500 ಜಮಾ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ವಿದ್ಯುತ್‌ ಪರಿವರ್ತಕ ಸುಟ್ಟರೂ ಅವುಗಳನ್ನು ಸಕಾಲದಲ್ಲಿ ದುರಸ್ತಿ ಮಾಡುತ್ತಿಲ್ಲ. ಭಾಲ್ಕಿಯಲ್ಲಿ ಮೂರು ತಿಂಗಳಿಂದ ವಿದ್ಯುತ್ ಪರಿವರ್ತಕ ದುರಸ್ತಿ ಮಾಡುವ ಕೇಂದ್ರ ಬಾಗಿಲು ಮುಚ್ಚಿದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದಿಂದ ₹ 100 ಕೋಟಿ ಬಿಡುಗಡೆ ಮಾಡಿಸಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಕೆಲ ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಆದರೆ, ಇದೀಗ ಕಾರ್ಖಾನೆಯನ್ನೇ ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರ ನಡೆದಿದೆ’ ಎಂದರು.

‘ನಾಲ್ಕು ವರ್ಷಗಳಿಂದ ನೌಬಾದ್‌ನಿಂದ ಕಮಲನಗರ ವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ₹277 ಕೋಟಿದ ವೆಚ್ಚದ ಹೆದ್ದಾರಿ 24 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಹಿಂದಿನ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಇದೀಗ ಹೊಸ ಹೆದ್ದಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ’ ಎಂದು ಟೀಕಿಸಿದರು.

‘ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿರುವ ಆರೋಪಗಳು ಕೇಳಿ ಬರುತ್ತಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನಾನು ಪೌರಾಡಳಿತ ಸಚಿವನಾಗಿದ್ದಾಗ ಜಿಲ್ಲೆಯ ನಗರ, ಪಟ್ಟಣಗಳ ಅಭವೃದ್ಧಿಗೆ ನಗರೋತ್ಥಾನ ಯೋಜನೆಯಲ್ಲಿ ₹333 ಕೋಟಿ ಕೊಟ್ಟಿದ್ದೇನೆ. ಕಾಂಗ್ರೆಸ್‌ ಸರ್ಕಾರ ಪತನದ ನಂತರ ಕಾಮಗಾರಿ ಆರಂಭವಾಗಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ’ ಎಂದು ತಿಳಿಸಿದರು.

ಬಸವಕಲ್ಯಾಣ: 22 ಆಕಾಂಕ್ಷಿಗಳು

‘ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು 22 ಆಕಾಂಕ್ಷಿಗಳು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಹೆಸರುಗಳನ್ನೂ ಪಕ್ಷದ ವರಿಷ್ಠರಿಗೆ ಕಳಿಸಿಕೊಡಲಾಗಿದೆ. ಆಯ್ಕೆ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಪಕ್ಷದ ಯಾವುದೇ ವ್ಯಕ್ತಿಗೆ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದಾಗ ಕೆಲ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಬೆಂಬಲ ನೀಡಿದರು. ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲೂ ಇದೇ ಆಗಿದೆ. ಪಕ್ಷಕ್ಕೆ ಚೂರಿ ಹಾಕಿ ಬೇರೆ ಪಕ್ಷಕ್ಕೆ ಬೆಂಬಲಿಸಿರುವುದನ್ನು ಜನ ನೋಡಿದ್ದಾರೆ. ಇದು ಕ್ಷಣಿಕ ಮಾತ್ರ. ಬರುವ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠಕಲಿಸಲಿದ್ದಾರೆ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪುನರ್‌ ಸಂಘಟನೆ:
ಕಾಂಗ್ರೆಸ್ 135ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷವನ್ನು ಪುನರ್‌ ಸಂಘಟಿಸಲಾಗುವುದು. ಕಾಂಗ್ರೆಸ್‌ನ ಮೂಲ ತತ್ವ ಹಾಗೂ ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ರಾಜಶೇಖರ ಪಾಟೀಲ ಅಷ್ಟೂರ್, ಮನ್ನಾನ್‌ ಸೇಠ, ಸಂಜಯ ಜಾಗೀರದಾರ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.