ADVERTISEMENT

ಜಿಲ್ಲೆಯಲ್ಲಿ ವೈರಾಣು ಪೀಡಿತರ ಸಂಖ್ಯೆ 85ಕ್ಕೆ ಏರಿಕೆ

ಮಹಾರಾಷ್ಟ್ರದಿಂದ ಬಂದವರಿಂದ ಹೆಚ್ಚುತ್ತಿರುವ ಸೋಂಕು

ಚಂದ್ರಕಾಂತ ಮಸಾನಿ
Published 24 ಮೇ 2020, 19:45 IST
Last Updated 24 ಮೇ 2020, 19:45 IST
ಬೀದರ್‌ನ ಓಲ್ಡ್‌ಸಿಟಿಯ ಚೌಬಾರಾ ರಸ್ತೆಯಲ್ಲಿ ಭಾನುವಾರ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಮಾರ್ಗವನ್ನು ಬಂದ್‌ ಮಾಡಿದರು/ ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ನ ಓಲ್ಡ್‌ಸಿಟಿಯ ಚೌಬಾರಾ ರಸ್ತೆಯಲ್ಲಿ ಭಾನುವಾರ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಮಾರ್ಗವನ್ನು ಬಂದ್‌ ಮಾಡಿದರು/ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್: ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಬಾಲಕರು ಸೇರಿ ಒಟ್ಟು ಆರು ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 85ಕ್ಕೆ ಏರಿದೆ.

ಮುಂಬೈನಿಂದ ಬಂದವರಿಗೇ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಹಳ್ಳಿಗಳಲ್ಲೇ ಸೋಂಕು ಹರಡಲು ಶುರುವಾಗಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 14,492 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. 10,184 ಜನರ ವರದಿ ನೆಗೆಟಿವ್‌ ಬಂದಿದೆ. ಈಗಾಗಲೇ ಕೋವಿಡ್ 19 ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಪಾಸಿಟಿವ್‌ ಬಂದ 21 ಜನರಿಗೆ ಚಿಕಿತ್ಸೆ ನೀಡಿ ಗುಣಮುಖರಾದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನೂ 4223 ಜನರ ವೈದ್ಯಕೀಯ ವರದಿ ಬರಬೇಕಿದೆ.

ADVERTISEMENT

ಜಿಲ್ಲೆಯ ಮೂರು ಚೆಕ್‌ಪೋಸ್ಟ್‌ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೂ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುತ್ತಿರುವ ವಲಸೆ ಕಾರ್ಮಿಕರು ರಾತ್ರಿ ವೇಳೆಯಲ್ಲಿ ಹೊಲಗದ್ದೆ ಹಾಗೂ ಕಳ್ಳದಾರಿಗಳ ಮೂಲಕ ಊರು ಸೇರುತ್ತಿದ್ದಾರೆ. ಇವರನ್ನು ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಬೀದರ್‌ ಜಿಲ್ಲಾಡಳಿತ ಒಟ್ಟು 13 ಕಂಟೇನ್ಮೆಂಟ್ ವಲಯಗಳನ್ನು ಘೋಷಿಸಿದೆ. ಬೀದರ್‌ನ ಓಲ್ಡ್‌ಸಿಟಿ, ಅಂಬೇಡ್ಕರ್‌ ಕಾಲೊನಿ, ಈಡೆನ್‌ ಕಾಲೊನಿ, ಮೈಲೂರ್, ವಿದ್ಯಾನಗರ, ಕುಂಬಾರವಾಡ(ಪಾಟೀಲನಗರ), ಬಸವಕಲ್ಯಾಣ ತಾಲ್ಲೂಕಿನ ಧನ್ನೂರ್‌(ಕೆ), ಚಿಟಗುಪ್ಪದ ದಸ್ತಗಿರ ಮೊಹಲ್ಲಾ, ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಬಿ), ಹುನಸಗೇರಾ, ಭಾಲ್ಕಿ ತಾಲ್ಲೂಕಿನ ಚಳಕಾಪುರ, ಭಾತಂಬ್ರಾ, ಹಲಸಿ(ಎಲ್) ಗ್ರಾಮವನ್ನು ಕಂಟೈನ್‌ಮೆಂಟ್‌ ಪ್ರದೇಶವೆಂದು ಗುರುತಿಸಿ ನಿಗಾ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.