ಬಸವಕಲ್ಯಾಣ ನಗರದ ಮಡಿವಾಳ ಮಾಚಿದೇವರ ಹೊಂಡದ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು
ಬಸವಕಲ್ಯಾಣ: ನಗರದ ಪಶ್ಚಿಮ ದಿಕ್ಕಿನಲ್ಲಿ ಅಲ್ಲಮಪ್ರಭು ಗದ್ದುಗೆ ಮಠದ ಹಿಂಭಾಗದ ಮಡಿವಾಳ ಮಾಚಿದೇವರ ಹೊಂಡವು ನಯನರಮ್ಯ ಹಸಿರು ವನಸಿರಿಯ ತಾಣ. ಇಲ್ಲಿನ ಗುಡಿ ಸುತ್ತಲಿನ ನೀರಿನ ಹೊಂಡದ ತಡೆಗೋಡೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆದರೂ, ಸಂಬಂಧಿತರು ನಿರ್ಲಕ್ಷ್ಯ ವಹಿಸಿದ್ದಾರೆ.
ಚಾಲುಕ್ಯಶೈಲಿಯ ಕೆತ್ತನೆಯ ಕಲ್ಲುಗಳಿಂದ ಕಟ್ಟಿದ ಶಿಖರ ನಗರದಲ್ಲಿರುವ ಇದೊಂದೇ ಶರಣ ಸ್ಮಾರಕಕ್ಕಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಇಲ್ಲಿನ ನವೀಕರಣ ಕಾರ್ಯ ಕೈಗೊಂಡಾಗ ಗುಡಿ, ನಂದಿ ಮಂಟಪ ಮತ್ತು ಶಿಖರ ನಿರ್ಮಿಸಲಾಗಿದೆ. ಎಲ್ಲಕ್ಕೂ ಕಲ್ಲಿನ ಕೆತ್ತನೆಯ ಕಂಬಗಳಿವೆ. ಆಕರ್ಷಕ ದೇವಸ್ಥಾನ ಇಲ್ಲಿದ್ದರೂ ಈ ಸ್ಥಳಕ್ಕೆ ‘ಮಾಚಿದೇವರ ಹೊಂಡ’ ಎಂದೇ ಕರೆಯುವ ರೂಢಿಯಿದೆ. 12ನೇ ಶತಮಾನದಲ್ಲಿ ಶರಣ ಮಡಿವಾಳ ಮಾಚಿದೇವರು ಇಲ್ಲಿ ಧ್ಯಾನಗೈಯುವುದಲ್ಲದೇ ಈ ಹೊಂಡದಲ್ಲಿ ಬಟ್ಟೆ ಶುಚಿಗೊಳಿಸುತ್ತಿದ್ದರು. ಆದ್ದರಿಂದ ಈ ಹೆಸರು ಇದಕ್ಕೆ ಬಂದಿದೆ.
ತ್ರಿಪುರಾಂತ ಕೆರೆಯಲ್ಲೂ ಅವರು ಕಾಯಕ ಕೈಗೊಂಡಿದ್ದರು. ಆದ್ದರಿಂದ ಈ ಕೆರೆಯ ದಂಡೆಯಲ್ಲೂ ಕಟ್ಟೆ ಮತ್ತು ಅಗ್ನಿಕುಂಡವಿದೆ. ಸಂಕ್ರಾಂತಿಗೆ ನಡೆಯುವ ಎರಡು ದಿನಗಳ ಜಾತ್ರೆಯಲ್ಲಿ ಈ ಎರಡೂ ಕಡೆ ನೈವೇದ್ಯ ಅರ್ಪಣೆ ಮತ್ತು ಧಾರ್ಮಿಕ ಕಾರ್ಯಗಳು ಜರುಗುತ್ತವೆ. ಮಾಚಿದೇವರು 100ಕ್ಕೂ ಹೆಚ್ಚಿನ ವಚನಗಳನ್ನು ರಚಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕೈಯಲ್ಲಿ ಖಡ್ಗ ಹಿಡಿದು ಹೋರಾಡಿ ಇತರೆ ಶರಣರ ವಚನಗಳನ್ನು ಸಹ ಸಂರಕ್ಷಿಸಿದ್ದಾರೆ.
ಈ ಹೊಂಡದಲ್ಲಿ ಒಂದು ಕಾಲದಲ್ಲಿ ಕಮಲ ಪುಷ್ಪಗಳು ಅರಳುತ್ತಿದ್ದವು. ನಂತರದಲ್ಲಿ ಇದು ಹಾಳಾಗಿತ್ತು. ಆದ್ದರಿಂದ ಒಳಗಿನ ಹೂಳು ತೆಗೆಯಲಾಯಿತು. ಇದರ ಮಧ್ಯದಲ್ಲಿ ನಡುಗಡ್ಡೆಯಂತಿರುವ ಜಾಗದಲ್ಲಿನ ದೇವಸ್ಥಾನಕ್ಕೆ ಹೋಗುವುದಕ್ಕಾಗಿ ಸೇತುವೆಯ ವ್ಯವಸ್ಥೆ ಮಾಡಲಾಗಿದೆ. ತಂಪು ಪ್ರದೇಶ ಇರುವುದರಿಂದ ಪರಿಸರದಲ್ಲಿ ಸಹಜವಾಗಿಯೇ ಗಿಡಮರಗಳು ಹೆಚ್ಚಾಗಿ ಬೆಳೆದಿವೆ. ಆದ್ದರಿಂದ ಹೊಂಡದ ಸುತ್ತಲಿನಲ್ಲಿ ವಾಕಿಂಗ್ ಪಾಥ್ ನಿರ್ಮಿಸಲಾಗಿದೆ.
ಆದರೆ, ಸುತ್ತಲಿನ ಈ ರಸ್ತೆ ಮತ್ತು ಹೊಂಡದ ಮಧ್ಯೆ ಕಟ್ಟಿದ ತಡೆಗೋಡೆಗೆ ಅನೇಕ ಕಡೆ ಬಿರುಕುಗಳು ಕಾಣಿಸಿಕೊಂಡಿವೆ. ಸೇತುವೆಯ ಸ್ಥಳದಲ್ಲೂ ಅಲ್ಲಲ್ಲಿ ಗೋಡೆಗೆ ಹಾನಿಯಾಗಿದ್ದು ಕಲ್ಲುಗಳು ಕುಸಿಯುವ ಹಂತಕ್ಕೆ ತಲುಪಿವೆ. ಮುಖ್ಯವೆಂದರೆ, ಬೇಸಿಗೆಯಲ್ಲಿ ಹೊಂಡದಲ್ಲಿನ ನೀರು ಒಣಗುತ್ತದೆ. ಆದ್ದರಿಂದ ಪಕ್ಕದಲ್ಲಿಯೇ ಇರುವ ತ್ರಿಪುರಾಂತ ಕೆರೆಯಿಂದ ಕಾಲುವೆಯ ಮೂಲಕ ಇಲ್ಲಿಗೆ ನೀರು ಹರಿಸಬೇಕು ಎಂಬ ಬೇಡಿಕೆ ಇದ್ದರೂ ಇದುವರೆಗೆ ಈಡೇರಿಲ್ಲ.
ಮೊದಲು ತಿಳಿ ನೀರು ಇರುತ್ತಿತ್ತು. ಈಚೆಗೆ ನೀರು ಹಸಿರು ಮತ್ತು ಕಪ್ಪು ಬಣ್ಣ ಪಡೆದುಕೊಳ್ಳುತ್ತಿದ್ದು ದುರ್ವಾಸನೆ ಬೀರುತ್ತಿದೆ. ಇದಾಗದಂತೆ ವ್ಯವಸ್ಥೆಗೈಯಬೇಕು. ಇಲ್ಲಿ ದೋಣಿ ವಿಹಾರದ ವ್ಯವಸ್ಥೆಯಾದರೆ ಪ್ರವಾಸಕ್ಕೆ ಬರುವ ಮಕ್ಕಳ ಉತ್ಸಾಹ ಇನ್ನಷ್ಟು ಹೆಚ್ಚಬಹುದು. ವಾಕಿಂಗ್ ಪಾಥ್‌ನ ಪಕ್ಕದಲ್ಲಿನ ಖಾಲಿ ಜಾಗದಲ್ಲಿದ್ದ ಹುಲ್ಲು, ಹೂಗಿಡಗಳು ಹಾಳಾಗಿದ್ದು ಮತ್ತೆ ಬೆಳೆಸಬೇಕು. ಎಲ್ಲಕ್ಕೂ ಮೊದಲು ತಡೆಗೋಡೆಯ ದುರಸ್ತಿ ಕೈಗೊಳ್ಳಬೇಕು ಆಗುವ ಅನಾಹುತ ತಪ್ಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಹೊಂಡಕ್ಕೆ ಅನೇಕರು ವಾಯುವಿಹಾರಕ್ಕೆ ಬರುವುದರಿಂದ ಗೋಡೆ ಕುಸಿದು ಅಪಾಯವಾದರೆ ಬಸವಕಲ್ಯಾಣ ಮಂಡಳಿಯವರೇ ಜವಾಬ್ದಾರಿ ವಹಿಸಬೇಕಾಗುತ್ತದೆ.-ರವಿ ನಾವದ್ಗೇಕರ್ ಸಾಮಾಜಿಕ ಕಾರ್ಯಕರ್ತ
ಮಡಿವಾಳ ಮಾಚಿದೇವರು ವಚನಕಾರರು. ಶರಣಗಣದಲ್ಲಿ ವೀರಗಣಾಚಾರಿ ಎಂದೇ ಗುರುತಿಸಿಕೊಂಡಿದ್ದರು. ಅವರ ಸ್ಮಾರಕ ಉತ್ತಮ ರೀತಿಯಲ್ಲಿರುವುದು ಅಗತ್ಯ.-ವಿಶ್ವನಾಥ ಮುಕ್ತಾ ಸಾಹಿತಿ
ಬಿಸಿಲಿನ ನಾಡಲ್ಲೂ ಇಂಥದ್ದೊಂದು ಹಸಿರು ವನಸಿರಿಯ ಸ್ಥಳ ಇರುವುದರಿಂದ ಬೇಸಿಗೆಯಲ್ಲಿ ಇಲ್ಲಿನ ಗಿಡಮರಗಳು ಒಣಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.-ಅಂಬರೀಶ ನಿಂಬಾಳೆ ಅಟ್ಟೂರ್ ಸಾಮಾಜಿಕ ಕಾರ್ಯಕರ್ತ
ಮಡಿವಾಳ ಮಾಚಿದೇವರ ಹೊಂಡ ಒಳಗೊಂಡು ಬಸವಾದಿ ಶರಣ ಸ್ಮಾರಕಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು.-ಮಲ್ಲಿಕಾರ್ಜುನ ಪಾಟೀಲ ಮಂಠಾಳ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.