
96k farmers gets flood relief amount
ಬೀದರ್: ‘ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಜಿಲ್ಲೆಯ 96,510 ಜನ ರೈತರ ಖಾತೆಗೆ ಇದುವರೆಗೆ ಪರಿಹಾರದ ಮೊತ್ತ ಜಮೆ ಮಾಡಲಾಗಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಪರಿಹಾರ ವಿತರಣೆ ಕಾರ್ಯ ಮುಕ್ತಾಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ರಾಜ್ಯ ಸರ್ಕಾರ ಜಿಲ್ಲೆಗೆ ₹69 ಕೋಟಿ ಬಿಡುಗಡೆ ಮಾಡಿದೆ. ಸರ್ಕಾರ ಘೋಷಿಸಿರುವ ಹೆಚ್ಚುವರಿ ₹8,500 ಸದ್ಯ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎಲ್ಲೆಲ್ಲಿ ಸೇತುವೆಗಳು, ರಸ್ತೆ ಹಾಳಾಗಿತ್ತೋ ಅದನ್ನು ಸರಿಪಡಿಸಿ, ಸಂಪರ್ಕ ಮರು ಸ್ಥಾಪಿಸಲಾಗಿದೆ. ಶಿಥಿಲಗೊಂಡಿರುವ ಸೇತುವೆಗಳ ಗುಣಮಟ್ಟ ಪರಿಶೀಲಿಸಿ, ಸರಿಪಡಿಸಲಾಗುವುದು. ಮುಖ್ಯರಸ್ತೆಗಳ ದುರಸ್ತಿಯ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಬ್ಬು ದರ ನಿಗದಿ ಸಂಬಂಧ ಈಗಾಗಲೇ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಲಾಗಿದೆ. ಪ್ರತಿ ಟನ್ ಕಬ್ಬಿಗೆ ₹2,750, ರಾಜ್ಯ ಸರ್ಕಾರದಿಂದ ₹50 ಮತ್ತು ಸಕ್ಕರೆ ಕಾರ್ಖಾನೆಗಳಿಂದ ₹50 ಹೆಚ್ಚುವರಿಯಾಗಿ ಸೇರಿಸಿ ₹2,850 ನೀಡುವ ಬಗ್ಗೆ ರೈತ ಮುಖಂಡರ ಜೊತೆ ಚರ್ಚಿಸಲಾಗಿದೆ. ಆದರೆ, ಬೆಳಗಾವಿಯಂತೆ ದರ ನೀಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. ಆದರೆ, ಬೆಳಗಾವಿ ಕಬ್ಬಿನ ರಿಕವರಿ ದರ ಹೆಚ್ಚಿದೆ. ಬೀದರ್‌ನಲ್ಲಿ ರಿಕವರಿ ದರ ತೀರ ಕಡಿಮೆ ಇದೆ. ಆದಕಾರಣ ಕಾರ್ಖಾನೆಗಳು ಒಪ್ಪುತ್ತಿಲ್ಲ. ಮತ್ತೊಂದು ಸಲ ರೈತ ಮುಖಂಡರ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಮಯೂರ ಕುಮಾರ್ ಗೋರ್ಮೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಕಾರ್ಯಕ್ರಮದ ಜಿಲ್ಲಾ ಅಭಿಯಾನ್ ಉಸ್ತುವಾರಿಗಳಾದ ಚನ್ನಬಸವ ಬಳತೆ, ಶಿವಕುಮಾರ ಸ್ವಾಮಿ, ರವೀಂದ್ರ ಹಾಜರಿದ್ದರು.
ಶೇ 92ರಷ್ಟು ಸರ್ವೆ ಪೂರ್ಣ
ರಾಜ್ಯ ಸರ್ಕಾರದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು ಶೇ 92ರಷ್ಟು ಪೂರ್ಣಗೊಂಡಿದೆ. ಶೇ 132ರಷ್ಟು ಮನೆಗಳ ಸಮೀಕ್ಷೆ ಮುಗಿದಿದೆ. ಕೆಲವರು ನೆರೆಯ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಯಾರೂ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ಸಲ್ಲಿಸಿಲ್ಲವೋ ಅಂತಹವರು ಆನ್‌ಲೈನ್‌ನಲ್ಲಿ ವಿವರ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ನ.14 15ರಂದು ಏಕತಾ ನಡಿಗೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ನ.14 15ರಂದು ಬೀದರ್ ನಗರದಲ್ಲಿ ಏಕತಾ ನಡಿಗೆ (ಯುನಿಟಿ ಮಾರ್ಚ್) ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವ ಸಬಲೀಕರಣ ಮಂತ್ರಾಲಯದ ಮೇರಾ ಯುವ ಭಾರತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ನ.14ರಂದು ಬೆಳಿಗ್ಗೆ 8 ಕ್ಕೆ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ನಡಿಗೆ ಆರಂಭಗೊಳ್ಳಲಿದೆ. ಮೈಲೂರ ಕ್ರಾಸ್ ಬೊಮ್ಮಗೊಂಡೇಶ್ವರ ವೃತ್ತ ಬಸವೇಶ್ವರ ವೃತ್ತ ಭಗತ್ ಸಿಂಗ್ ವೃತ್ತ ಹರಳಯ್ಯ ವೃತ್ತ ಗುದಗೆ ಆಸ್ಪತ್ರೆಯಿಂದ ನೆಹರೂ ಕ್ರೀಡಾಂಗಣದ ವರೆಗೆ ನಡೆಯಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು. ನ.15ರಂದು ನಗರದ ಬರೀದ್ ಷಾಹಿ ಉದ್ಯಾನದಿಂದ ಆರಂಭವಾಗುವ ನಡಿಗೆ ಕೇಂದ್ರ ಬಸ್ ನಿಲ್ದಾಣ ಮಡಿವಾಳ ವೃತ್ತ ರೋಟರಿ ವೃತ್ತ ಬ್ರಿಮ್ಸ್ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಶಿವಾಜಿ ವೃತ್ತ ಗುದಗೆ ಆಸ್ಪತ್ರೆಯಿಂದ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ವರೆಗೆ ಜರುಗಲಿದೆ. ಸಾರ್ವಜನಿಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.