
ಬೀದರ್: ಅತಿವೃಷ್ಟಿಯಿಂದ ಬೀದರ್ ಜಿಲ್ಲೆಯಲ್ಲಿ 1.67 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದ್ದು, ₹285 ಕೋಟಿ ನಷ್ಟ ಉಂಟಾಗಿದೆ.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡದ ಜಂಟಿ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಈಗಾಗಲೇ ರೈತರ ವಿವರ ಪರಿಹಾರದ ಪೋರ್ಟಲ್‌ನಲ್ಲಿ ದಾಖಲಿಸುವ ಕೆಲಸ ಪ್ರಗತಿಯಲ್ಲಿದೆ. ಶೇ 88ರಿಂದ ಶೇ 90ರಷ್ಟು ವಿವರ ದಾಖಲಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದಾದ ಬಳಿಕ ರೈತರಿಗೆ ಪರಿಹಾರ ಧನ ಕೊಡಲು ಉದ್ದೇಶಿಸಲಾಗಿದೆ.
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಒಳಗೊಂಡಂತೆ ಒಟ್ಟು 1.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಅತಿವೃಷ್ಟಿಗೆ ಹಾಳಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಕ್ಟೋಬರ್ 30ರೊಳಗೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆ ಆಗಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ಕೆಲವೇ ದಿನಗಳು ಉಳಿದಿದ್ದು, ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಸಾಲ ಸೂಲ ಮಾಡಿ ಬೆಳೆ ಕಳೆದುಕೊಂಡಿರುವ ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರದ ಮೊತ್ತ ಕೈಸೇರಿದರೆ ಹಾಕಿದ ಬಂಡವಾಳವಾದರೂ ಕೈಸೇರಿ, ಸಾಲ ತೀರಿಸಿದರೆ ನೆಮ್ಮದಿಯಾಗಿ ಇರಬಹುದು ಎಂದು ಉಮೇದಿನಲ್ಲಿದ್ದಾರೆ.
ರೈತರ ಸಮಸ್ಯೆಯನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿ, ಆ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಆದರೆ, ಮಾತು ಕೊಟ್ಟಂತೆ ರೈತರಿಗೆ ಅ. 30ರೊಳಗೆ ಹಣ ಜಮೆ ಆಗುತ್ತದೆಯೇ ಎಂಬುದು ರೈತರಿಗೆ ಕಾಡುತ್ತಿದೆ.
ಅತಿವೃಷ್ಟಿಯಿಂದ ಬೀದರ್ ಜಿಲ್ಲೆಯಲ್ಲಿ ಮುಖ್ಯರಸ್ತೆಗಳು ಸೇರಿದಂತೆ ಹಲವೆಡೆ ರಸ್ತೆಗಳು ಹಾಳಾಗಿವೆ. ಎಲ್ಲೆಡೆ ಸಾಕಷ್ಟು ಗುಂಡಿಗಳು ಬಿದ್ದಿವೆ. ಸೇತುವೆಗಳು ಹಾಳಾಗಿವೆ. ಗುಂಡಿಗಳ ನಡುವೆ ಓಡಾಡುತ್ತಿರುವ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಆದ್ಯತೆ ಮೇರೆಗೆ ಜಿಲ್ಲಾಡಳಿತ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.
ಮುಖ್ಯರಸ್ತೆ, ಬಡಾವಣೆಗಳ ಒಳರಸ್ತೆಗಳು, ಗ್ರಾಮೀಣ ಭಾಗದ ಹಲವೆಡೆ ರಸ್ತೆಗಳು ಬಹಳ ಹಾಳಾಗಿವೆ. ಅವುಗಳನ್ನು ಬೇಗ ದುರಸ್ತಿಗೊಳಿಸಬೇಕು. ಗುಂಡಿಗಳನ್ನು ತುರ್ತಾಗಿ ಮೊದಲು ಮುಚ್ಚಬೇಕು. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ಸ್ಥಳೀಯರಾದ ಬಸವರಾಜ, ಸೋಮಶೇಖರ್, ರಾಜು ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯಾದ್ಯಂತ ಈಗಾಗಲೇ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 1.67 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಡೇಟಾ ಎಂಟ್ರಿ ಕೆಲಸ ಶೇ 88ರಷ್ಟು ಮುಗಿದಿದೆ. ಇನ್ನುಳಿದ ಕೆಲಸ ಮುಗಿದ ತಕ್ಷಣ ರೈತರಿಗೆ ಪರಿಹಾರ ವಿತರಿಸುವ ಕೆಲಸ ಆರಂಭಿಸಲಾಗುವುದು.ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ ಬೀದರ್
ಅತಿವೃಷ್ಟಿಯಿಂದ ಬೀದರ್ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು ₹285 ಕೋಟಿಯಷ್ಟು ಹಾನಿ ಉಂಟಾಗಿದೆ. ಜಂಟಿ ಸಮೀಕ್ಷೆ ಮುಗಿದಿದ್ದು ಪೋರ್ಟಲ್‌ನಲ್ಲಿ ವಿವರ ದಾಖಲಿಸುವ ಕೆಲಸ ಅಂತಿಮ ಹಂತದಲ್ಲಿದೆ. ಶೀಘ್ರ ಪರಿಹಾರ ವಿತರಿಸಲಾಗುವುದು.ದೇವಿಕಾ ಆರ್. ಜಂಟಿ ಕೃಷಿ ನಿರ್ದೇಶಕಿ
ಜಿಲ್ಲಾ ಉಸ್ತುವಾರಿ ಸಚಿವರು ಅಕ್ಟೋಬರ್ 30ರೊಳಗೆ ಪರಿಹಾರದ ಹಣ ಕೊಡುತ್ತೇವೆಂದು ಆಶ್ವಾಸನೆ ಕೊಟ್ಟಿದ್ದಾರೆ. ಅ. 30ರೊಳಗೆ ಒಂದುವೇಳೆ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರೈತರು ರಸ್ತೆ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.