ADVERTISEMENT

ಬೀದರ್‌: ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಮ್ಯಾನ್‌ಹೋಲ್‌

ಚಂದ್ರಕಾಂತ ಮಸಾನಿ
Published 14 ಅಕ್ಟೋಬರ್ 2019, 20:00 IST
Last Updated 14 ಅಕ್ಟೋಬರ್ 2019, 20:00 IST
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಮ್ಯಾನ್‌ಹೋಲ್‌ ಮುಚ್ಚಳವನ್ನು ಅರ್ಧ ಮುಚ್ಚಲಾಗಿದೆ
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಮ್ಯಾನ್‌ಹೋಲ್‌ ಮುಚ್ಚಳವನ್ನು ಅರ್ಧ ಮುಚ್ಚಲಾಗಿದೆ   

ಬೀದರ್: ನಗರದ ಯಾವುದೇ ಮೂಲೆಗೆ ಹೋದರೂ ರಸ್ತೆಗಳ ಮೇಲೆ ಮ್ಯಾನ್‌ಹೋಲ್‌ಗಳು ಅಪಾಯಕರ ರೀತಿಯಲ್ಲಿ ಎದ್ದು ನಿಂತಿರುವುದು ಕಂಡು ಬರುತ್ತದೆ. ಇವು ದ್ವಿಚಕ್ರ ವಾಹನ ಹಾಗೂ ಆಟೊರಿಕ್ಷಾಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿವೆ.

ನಗರದ ಅಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರ ಅಮೃತ ಯೋಜನೆ ಅಡಿ ಬಿಡುಗಡೆ ಮಾಡಿದ ಅನುದಾನದಲ್ಲಿ ನಗರದ ಎಲ್ಲೆಡೆ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕರು ಖುಷಿ ಪಡುವ ಹಂತದಲ್ಲಿರುವಾಗಲೇ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಒಳಚರಂಡಿ ನಿರ್ಮಿಸಲು ರಸ್ತೆಗಳನ್ನು ಅಗೆದು ಹಾಕಿತು. ರಸ್ತೆಗಳ ಮಧ್ಯೆಯೇ ಅವೈಜ್ಞಾನಿಕವಾಗಿ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಿತು. ಇದೀಗ ಮ್ಯಾನ್‌ಹೋಲ್‌ಗಳಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ.

ಹಾರೂರಗೇರಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿವಾಸದ ವರೆಗಿನ ಮಾರ್ಗದಲ್ಲಿ ರಸ್ತೆ ಮಧ್ಯೆಯೇ ಎತ್ತರಕ್ಕೆ ಮ್ಯಾನ್‌ಹೋಲ್‌ ನಿರ್ಮಿಸಲಾಗಿದೆ. ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೆ ಕೈಕಾಲು ಊನ ಮಾಡಿಕೊಳ್ಳುವುದು ಖಚಿತ. ಮ್ಯಾನ್‌ಹೋಲ್‌ ದಿಬ್ಬದಿಂದ ತಪ್ಪಿಸಿಕೊಳ್ಳಲು ಹಠಾತ್‌ ಆಗಿ ಬ್ರೇಕ್‌ ಹಾಕಿದರೆ ಹಿಂಬದಿ ಸವಾರರು ಕೆಳಗೆ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಇಲ್ಲಿ ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನಗಳು ಹೆಚ್ಚು ಅಪಘಾತಕ್ಕೀಡಾಗುತ್ತಿವೆ.

ADVERTISEMENT

ಅಂಬೇಡ್ಕರ್‌ ವೃತ್ತದಿಂದ ಮೆಹಮೂದ್‌ ಗವಾನ್‌ ವೃತ್ತ, ಟಸ್ಕರ್‌ ರೋಡ್‌, ಶಾಸಕ ಬಂಡೆಪ್ಪ ಕಾಶೆಂಪುರ್‌ ನಿವಾಸ ಎದುರಿನ ರಸ್ತೆ, ದರ್ಜಿಗಲ್ಲಿ, ವಿದ್ಯಾನಗರ, ಚೆನ್ನಬಸವನಗರ–ಲಾಡಗೇರಿ ರಸ್ತೆ, ಗುಂಪಾ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗಳು ರಸ್ತೆ ಮೇಲೆಯೇ ಇವೆ. ರಾತ್ರಿ ವೇಳೆ ವೇಗವಾಗಿ ಸಂಚರಿಸುವ ವಾಹನಗಳು ಅಪಘಾತಕ್ಕೀಡಾಗುತ್ತಲೇ ಇವೆ. ಕಾರುಗಳ ಬಾನೆಟ್‌ಗಳಿಗೂ ತಾಗಿ ಹಾನಿಯಾಗುತ್ತಿದೆ.

ರಸ್ತೆ ದುರಸ್ತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನಗರದ ರಸ್ತೆಗಳು ಮತ್ತದೇ ಸ್ಥಿತಿಗೆ ತಲುಪಿವೆ. ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳ ಗುಣಮಟ್ಟವು ಅಧಿಕಾರಿಗಳ ಪ್ರಾಮಾಣಿಕತೆ, ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಕಾರ್ಯಕ್ಷಮತೆ ಎಂತಹದ್ದು ಎನ್ನುವುದನ್ನು ಸಾಕ್ಷೀಕರಿಸುತ್ತದೆ.

ಅಚ್ಚರಿಯ ಸಂಗತಿಯೆಂದರೆ ಅತ್ಯಂತ ಪುರಾತನ ನಗರ ಬೀದರ್‌ನಲ್ಲಿ ಒಳಚರಂಡಿ ಕಾಮಗಾರಿ ಆರಂಭವಾದದ್ದೇ ಎರಡು ವರ್ಷಗಳ ಹಿಂದೆ. ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಅಚ್ಚುಕಟ್ಟಾಗಿ ಕೆಲಸ ಮಾಡಿದ ಉದಾಹರಣೆ ಇಲ್ಲ.ರಾಜಕಾರಣಿಗಳ ಕೈಬಿಸಿ ಮಾಡಿ ಕೋಟ್ಯಂತರ ಮೊತ್ತದ ಕಾಮಗಾರಿಯನ್ನು ಪಡೆದು ಕೆಳಹಂತದ ಗುತ್ತಿಗೆದಾರರಿಗೆ ಕೊಡಲಾಗಿದೆ. ಇದು ಅನೇಕ ಬಗೆಯ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ರಸ್ತೆಗಳ ಲೇವೆಲ್‌ಗೆ ಇರಬೇಕಿದ್ದ ಮ್ಯಾನ್‌ಹೋಲ್‌ಗಳನ್ನು ರಸ್ತೆಗಿಂತ ಸುಮಾರು ಅರ್ಧ, ಒಂದು ಅಡಿಯಷ್ಟು ಎತ್ತರಕ್ಕೆ ನಿರ್ಮಿಸಲಾಗಿದೆ. ಕೆಲ ಕಡೆ ಮ್ಯಾನ್‌ಹೋಲ್‌ ಮುಚ್ಚಳವನ್ನು ಅರ್ಧ ಹಾಕಲಾಗಿದೆ. ಇದರಿಂದ ಪಾದಚಾರಿಗಳಿಗೂ ಅಪಾಯ ಕಾದಿದೆ. ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ದಿಸೆಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ಮ್ಯಾನ್‌ಹೋಲ್‌ಗಳು ಇದೀಗ ಅಪಘಾತ ಸ್ಥಳಗಳಾಗಿ ಗುರುತಿಸಿಕೊಳ್ಳುತ್ತಿವೆ.

ರಸ್ತೆಗಳ ಡಾಂಬರ್‌ ಬಹುತೇಕ ಕಡೆಗಳಲ್ಲಿ ಕಿತ್ತು ಹೋಗಿದೆ. ನಗರದ ಜನ ಮತ್ತದೇ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ಚಿದ್ರಿ ರಸ್ತೆಯಲ್ಲಿ ಮಹಿಳೆಯೊಬ್ಬಳು ಆಯತಪ್ಪಿ ಮ್ಯಾನ್‌ಹೋಲ್‌ ಒಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಬೈಕ್‌ ಮೇಲೆ ಹೊರಟಿದ್ದಾಗ ಮ್ಯಾನ್‌ಹೋಲ್‌ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಉದಾಹರಣೆಗಳು ನಮ್ಮ ಮುಂದೆ ಇವೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಮೊದಲ ಬಾರಿಗೆ ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತುಂಡು ಗುತ್ತಿಗೆ ಕಾಮಗಾರಿಯಿಂದಾಗಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದನ್ನು ಪ್ರಸ್ತಾಪಿಸಿದ್ದಾರೆ. ಅಧಿಕಾರಿಗಳಿಗೆ ಹತ್ತು ದಿನಗಳ ಗಡುವು ವಿಧಿಸಿದರೂ ಕಾಮಗಾರಿಯಲ್ಲಿ ಎಳ್ಳಷ್ಟೂ ಸುಧಾರಣೆ ಕಂಡು ಬಂದಿಲ್ಲ.

‘ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ಮ್ಯಾನ್‌ಹೋಲ್‌ ನಿರ್ಮಿಸಿದ ಗುತ್ತಿಗೆದಾರರು ಹಾಗೂ ಸರಿಯಾಗಿ ಮೇಲ್ವಿಚಾರಣೆ ಮಾಡದ ಅಧಿಕಾರಿಗಳ ವಿರುದ್ಧ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಎಲ್ಲ ದಾಖಲೆಗಳೊಂದಿಗೆ ಶೀಘ್ರದಲ್ಲೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.

*
ಜಿಲ್ಲಾ ಕೇಂದ್ರವಾದ ಬೀದರ್‌ ನಗರದಲ್ಲಿ ಕಳಪೆ ಕಾಮಗಾರಿ ನಡೆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಅಚ್ಚರಿ ಮೂಡಿಸುತ್ತದೆ.
–ಸಮಿಯೊದ್ದಿನ್ ಅಬ್ದುಲ್‌ ವಹಾಬ್, ಓಲ್ಡ್‌ಸಿಟಿ ನಿವಾಸಿ

*
ಪ್ರಮುಖ ಗುತ್ತಿಗೆದಾರರು ಎರಡು ಮೂರು ಜನರಿಗೆ ಉಪ ಗುತ್ತಿಗೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಕಾಮಗಾರಿ ಸರಿಯಾಗಿ ನಡೆದಿಲ್ಲ.
-ಅಬ್ದುಲ್‌ ಖಯಾಮ್‌, ಓಲ್ಡ್‌ಸಿಟಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.