ಬೀದರ್: ನಾಟ್ಯಶ್ರೀ ನೃತ್ಯಾಲಯವು ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ದಸರಾ ನೃತ್ಯೋತ್ಸವ ಹಾಗೂ ಹಾಸ್ಯೋತ್ಸವ ಜನರ ಮನಸೂರೆಗೊಳಿಸಿತು.
ಭರತ ನಾಟ್ಯ, ಗರ್ಭಾ ನೃತ್ಯ, ಜಾನಪದ ನೃತ್ಯ, ಮರಾಠಿ ನೃತ್ಯ, ದೇಶಭಕ್ತಿ ಗೀತೆ ನೃತ್ಯ, ಮಹಿಷ ಮರ್ದಿನಿ ನೃತ್ಯ ರೂಪಕ ಜನರನ್ನು ರಂಜಿಸಿತು. 30ಕ್ಕೂ ಹೆಚ್ಚು ಕಲಾವಿದರ ‘ಹಚ್ಚೇವು ಕನ್ನಡದ ದೀಪ…’ ಆಕರ್ಷಕ ನೃತ್ಯದೊಂದಿಗೆ ನೃತ್ಯೋತ್ಸವ ಆರಂಭಗೊಂಡಿತು.
ಅಷ್ಟಲಕ್ಷ್ಮಿ ನೃತ್ಯ, ವಿಷ್ಣು ದಶಾವತಾರ ನೃತ್ಯ, ‘ನೀನೊಲಿದರೆ ಕೊರಡು ಕೊನರುವುದಯ್ಯ' ವಚನ ನೃತ್ಯ, ‘ಭಾರತಾಂಬೆ ಹೆಮ್ಮೆಯ ಮಕ್ಕಳು ನಾವು' ದೇಶಭಕ್ತಿ ಗೀತೆ ನೃತ್ಯ, ನವ ದುರ್ಗೆಯರ ಮರಾಠಿ ನೃತ್ಯ, ಸಂತ ಶಿಶುನಾಳ ಷರೀಫರ ‘ಏನ್ ಕೊಡ ಏನ್ ಕೊಡವ ಹುಬ್ಬಳ್ಳಿ ಮಾಟ’ ಗೀತೆ ನೃತ್ಯ, ಅಘೋರಿ ನೃತ್ಯ, ಕೋಲಾಟ, ಗಾಯಕಿ ರೇಖಾ ಅಪ್ಪಾರಾವ್ ಸೌದಿ ಅವರ ‘ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು...’ ಸುಮಧುರ ಗೀತೆ ಸಭಿಕರ ಮೆಚ್ಚುಗೆಗೆ ಪಾತ್ರವಾದವು.
ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನೇತೃತ್ವದ ಕಲಾವಿದರ ತಂಡವು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿತು. ಭಾನುಪ್ರಿಯ ಅರಳಿ ನಾಡಗೀತೆ ಹಾಗೂ ಬೇಂದ್ರೆಯವರ ಕವನ ‘ನೀ ಹಿಂಗ ನೋಡಬೇಡ ನನ್ನ, ನೀ ಹಿಂಗ ನೋಡಿದರೆ ನನ್ನ, ತಿರುಗಿ ನಾ ಹೆಂಗ ನೋಡಲಿ ನಿನ್ನ..’ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ವಿವಿಧ ನೃತ್ಯ ಕಲಾ ಪ್ರದರ್ಶನದಲ್ಲಿ ಮಕ್ಕಳು, ಪಾಲಕರು ಸೇರಿದಂತೆ 78 ಕಲಾವಿದರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ಯ ಕಾರ್ಯಕ್ರಮ ಉದ್ಘಾಟಿಸಿದ ಚಲನಚಿತ್ರ ನಟ ಅನಂತಕೃಷ್ಣ ದೇಶಪಾಂಡೆ (ಬೇಂದ್ರೆ), ಅನುಭವದ ಸಾಹಿತ್ಯ ರಚಿಸುವ ಅಗತ್ಯವಿದೆ ಎಂದು ಬೇಂದ್ರ ದರ್ಶನ ಕುರಿತು ಉಪನ್ಯಾಸ ನೀಡಿದ ಹೇಳಿದರು.
ದ.ರಾ. ಬೇಂದ್ರೆ ಅವರು ತಾವು ನೋಡಿದ, ಅನುಭವಿಸಿದ, ಗ್ರಹಿಸಿದ ಸಂಗತಿಗಳಿಗೆ ಕವನ, ಕಥೆ ಸ್ವರೂಪ ನೀಡುತ್ತಿದ್ದರು. ಬೇಂದ್ರೆ ಅವರು ತಮ್ಮ ಮಗಳ ಅನಾರೋಗ್ಯದ ವೇಳೆ ರಚಿಸಿದ ಗೀತೆ, ಬ್ರಿಟಿಷರು ಜೈಲಿಗೆ ಹಾಕಿದಾಗ ಕವನ ರಚನೆಗೆ ಕಾರಣವಾದವರು ಯಾರು ಎಂದು ವಿವರಿಸಿದ ಪರಿ ಮೊದಲಾದವುಗಳನ್ನು ಮೆಲುಕು ಹಾಕಿದರು.
ಕೆಲ ಹೊತ್ತು ಬೇಂದ್ರೆ ಅವರ ಧಾಟಿಯಲ್ಲೇ ಮಾತನಾಡಿ, ಗಾಯನ ಮಾಡಿ ಗಮನ ಸೆಳೆದರು.
ಕನ್ನಡ ಪ್ರಪಂಚದ ಅತ್ಯುತ್ತಮ ಭಾಷೆಯಾಗಿದೆ ಎಂದು ಕನ್ನಡವೆಂಬ ಸೊಬಗು ಕುರಿತು ಮಾತನಾಡಿದ ಮೈಸೂರಿನ ಖ್ಯಾತ ಸಾಹಿತಿ, ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡ ಬಣ್ಣಿಸಿದರು.
ಕನ್ನಡ ಭಾಷೆಯೇ ಚೆಂದ ಆಗಿರುವುದರಿಂದ ಕವಿತೆಗಳೂ ಚೆಂದವಾಗಿಯೇ ಮೂಡಿ ಬರುತ್ತವೆ ಎಂದು ತಿಳಿಸಿದರು.
ಪತ್ರಕರ್ತ ಸದಾನಂದ ಜೋಶಿ, ಟಾಟಾ ಎಐಎ ಲೈಫ್ ಇನ್‌ಶುರೆನ್ಸ್‌ನ ಕೆ. ಕಿರಣಮೂರ್ತಿ ಹಾಗೂ ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ, ಸಮಾಜ ಸೇವಕಿ ನೀತಾ ಎಸ್. ಬೆಲ್ದಾಳೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ ಉಪಸ್ಥಿತರಿದ್ದರು.
ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ ಸ್ವಾಗತಿಸಿದರೆ. ಬಸವರಾಜ ಮೂಲಗೆ, ರಾಘವೇಂದ್ರ ಅಡಿಗ, ದೇವಿದಾಸ ಜೋಶಿ ಹಾಗೂ ಸ್ವರೂಪರಾಣಿ ನಾಗೂರೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.