ಬೀದರ್: ‘ಮೂರು ತಿಂಗಳಿಂದ ಸಿಬ್ಬಂದಿಗೆ ವೇತನ ಪಾವತಿಸಿಲ್ಲ’ ಎಂದು ಬಿಜೆಪಿ ಮುಖಂಡರೂ ಆದ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ನೀಡಿರುವ ಹೇಳಿಕೆ ಖಂಡನಾರ್ಹ’ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿಬಿ) ನೌಕರರ ಒಕ್ಕೂಟ ತಿಳಿಸಿದೆ.
ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಎಂ.ಎಡಮಲ್ಲೆ, ಉಪ ಪ್ರಧಾನ ವ್ಯವಸ್ಥಾಪಕ ರಾಜಕುಮಾರ ಆಣದೂರೆ, ಖಜಾಂಚಿ ಅರವಿಂದ ಮರೂರಕರ್ ಸೇರಿದಂತೆ 333 ಸಿಬ್ಬಂದಿ ಸಹಿ ಮಾಡಿ ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
‘ಖೂಬಾ ಅವರು ಸ್ವಯಂಪ್ರಚಾರದ ಭರಾಟೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸರಿಯಾದ ಅಂಕಿ ಅಂಶ ಪಡೆಯದೇ ಪತ್ರಿಕಾಗೋಷ್ಠಿ ನಡೆಸಿ, ಅಸಂಬದ್ಧವಾದ ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಶೋಭೆ ತರುವಂತಹದ್ದಲ್ಲ. ಮೂರು ತಿಂಗಳಿಂದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ವೇತನ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಯಾರ ಸಂಬಳವೂ ಬಾಕಿ ಇರುವುದಿಲ್ಲ. ಎಲ್ಲರ ವೇತನ ಪಾವತಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಖೂಬಾ ಅವರು ಈ ವಿಷಯದಲ್ಲಿ ರಾಜಕೀಯ ಬೆರೆಸಿ, ಬ್ಯಾಂಕಿನ ವಾತಾವರಣದಲ್ಲಿ ಗೊಂದಲ ನಿರ್ಮಿಸುವುದು ಸರಿಯಲ್ಲ. ನೌಕರರ ವಿಷಯದಲ್ಲಿ ರಾಜಕೀಯ ಬೆರೆಸಿದರೆ ಯಾವ ಸಂಸ್ಥೆಗೂ ಒಳ್ಳೆಯದಾಗುವುದಿಲ್ಲ. ಇದರಿಂದ ನೌಕರರ ಭವಿಷ್ಯಕ್ಕೆ ಮಾರಕವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೌಕರರ ಸಂಬಳ ಹಾಗೂ ಎನ್‌ಪಿಎ ಬಗ್ಗೆ ಅಷ್ಟು ಕಾಳಜಿಯಿದ್ದರೆ ತಮ್ಮ ಸಂಪರ್ಕದಲ್ಲಿರುವ ಸುಸ್ತಿ ಸಾಲಗಾರರಿಗೆ ಸಾಲ ಮರುಪಾವತಿಸಲು ಮನವೊಲಿಸಬೇಕು. ಇದರಿಂದ ಬ್ಯಾಂಕಿನ ನೌಕರರು, ಅರ್ಹ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಆದರೆ, ಬ್ಯಾಂಕಿನ ನೌಕರರ ಬಾಳಿನಲ್ಲಿ ರಾಜಕೀಯ ವಿಷ ಬೀಜ ಬಿತ್ತಬೇಡಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.