ಭಾಲ್ಕಿ: ಪಟ್ಟಣದ ಸರ್ವೆ ನಂ.204 ಮತ್ತು 205ರ ಒಟ್ಟು ವಿಸ್ತೀರ್ಣ 12 ಎಕರೆ 29 ಗುಂಟೆ ಭೂಮಿಯಲ್ಲಿ ಸುಮಾರು ವರ್ಷಗಳಿಂದ ದಾವೆ ನಡೆಯುತ್ತಿದ್ದು, ಈ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದನ್ನು ತೆರವುಗೊಳಿಸಬೇಕು ಎಂದು ವಕೀಲ ಬಸವರಾಜ ಸಿರ್ಸಿ ಆಗ್ರಹಿಸಿದ್ದಾರೆ.
ಈ ಕುರಿತು ಭಾನುವಾರ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದ ಸರ್ವೆ ನಂ.204, 205ರಲ್ಲಿಯ 12 ಎಕರೆ 29 ಗುಂಟೆ ಭೂಮಿ ಜಂಟಿ ಮಾಲೀಕರ ಸ್ವಾಧೀನದಲ್ಲಿದೆ. ಇದು ಸುಮಾರು ವರ್ಷಗಳಿಂದ ಹಿರಿಯ ಶ್ರೇಣಿ (ದಿವಾಣಿ) ನ್ಯಾಯಾಲಯದಲ್ಲಿ ಶಂಕ್ರೆಪ್ಪಾ ವಿರುದ್ಧ ಶೇಶಪ್ಪಾ ಸೇರಿದಂತೆ ಹಲವರ ಮಧ್ಯ ವ್ಯಾಜ್ಯ ನಡೆಯುತ್ತಿದೆ. ಆದರೆ ಪುರಸಭೆ ಮುಖ್ಯಾಧಿಕಾರಿ ಕಾನೂನು ಬಾಹಿರ ಕಾಗದಗಳನ್ನು ನೀಡಿ ಅನಧಿಕೃತ ಕಟ್ಟಡ ಕಟ್ಟಲು ಭೂಮಾಫಿಯಾಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.
‘ಈ ಸಂಬಂಧ ನ್ಯಾಯಾಲಯ ಹಾಗೂ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಅಧಿಕಾರಿಗಳಿಗೆ ಕಾರಣ ಕೇಳಿ ಸೂಚನೆ ಜಾರಿ ಮಾಡಿದ್ದಾರೆ. ಆದರೆ ಕೆಳ ಹಂತದ ಅಧಿಕಾರಿಗಳು ಭೂಮಾಫಿಯಾ ಜತೆ ಸೇರಿ ಮೇಲಾಧಿಕಾರಿಗಳ ಕಾರಣ ಕೇಳಿ ನೋಟಿಸ್‌ಗೆ ಕಿಮ್ಮತ್ತು ಕೊಡದೇ ಸದರಿ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಸಹಕರಿಸಿದ್ದಾರೆ’ ಎಂದು ಆರೋಪಿಸಿದರು.
‘ಕಾನೂನು ಬಾಹಿರ ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೇಲಾಧಿಕಾರಿಗಳು ಆದೇಶ ಮಾಡಿದ್ದರೂ, ಕೆಳ ಹಂತದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅತಿಕ್ರಮಣ ಮಾಡಿದ ಭೂಮಾಫಿಯಾದರನ್ನು ತೆರವುಗೊಳಿಸಬೇಕು. ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
2005 ರಿಂದ ಕಾನೂನು ಹೋರಾಟ ನಡೆಸಿರುವ ನಮ್ಮ ಫಿರ್ಯಾದುದಾರ ಪಾಂಡುರಂಗ ಪಭತರಾವ್ ಪಾಟೀಲರಿಗೆ ನ್ಯಾಯ ಒದಗಿಸಿಕೊಡಬೇಕು. ತಪ್ಪಿದ್ದಲ್ಲಿ ಈ ಸ್ಥಳದಲ್ಲಿ ನಡೆಯುವ ಯಾವುದೇ ಅನಾಹುತಕ್ಕೆ ತಾವೇ ನೇರ ಜವಬ್ದಾರರಾಗುತ್ತೀರಿ ಎಂದು ಸರ್ಕಾರದ ಉನ್ನತಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.