ADVERTISEMENT

ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ

ದಲಿತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 13:47 IST
Last Updated 13 ಅಕ್ಟೋಬರ್ 2020, 13:47 IST
ಬೀದರ್‌ನಲ್ಲಿ ಮಂಗಳವಾರ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘಟನೆಗಳ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿಪತ್ರ ಸಲ್ಲಿಸಿದರು
ಬೀದರ್‌ನಲ್ಲಿ ಮಂಗಳವಾರ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘಟನೆಗಳ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿಪತ್ರ ಸಲ್ಲಿಸಿದರು   

ಬೀದರ್: ಉತ್ತರಪ್ರದೇಶದಲ್ಲಿ ಇಬ್ಬರು ಯುವತಿಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಹಾಗೂ ಅಲ್ಲಿನ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಷ್ಟ್ರಪತಿ ಅವರಿಗೆ ಬರೆದ ಮನವಿಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

‘ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವಲ್ಲಿ, ಯುವತಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಉತ್ತರಪ್ರದೇಶ ಸರ್ಕಾರ ಸಂತ್ರಸ್ತ ಕುಟುಂಬಕ್ಕೆ ಗೌರವಯುತವಾಗಿ ಯುವತಿಯ ಅಂತ್ಯಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಪೊಲೀಸರೇ ಶವವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷ್ಯ ನಾಶಪಡಿಸಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಸಂತ್ರಸ್ತ ಕುಟುಂಬಕ್ಕೆ ₹10 ಕೋಟಿ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯರ ಕುಟುಂಬಗಳಿಗೆ ರಕ್ಷಣೆ ಕೊಡಬೇಕು. ಇಂಡಿಯಾ ಟುಡೆ (ಆಜ್‍ತಕ್) ವರದಿಗಾರ್ತಿ ತನುಶ್ರೀ ಅವರಿಗೆ ಪೊಲೀಸ್‌ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಅಶೋಕ ಗಾಯಕವಾಡ, ಅರುಣ ಪಟೇಲ್, ಮಾರುತಿ ಬೌದ್ಧೆ, ವಾಮನ್ ಮೈಸಲಗೆ, ಶಿವರಾಜ ತಡಪಳ್ಳಿ, ಮನೋಹರ ಹೊಸಮನಿ, ದಯಾಸಾಗರ ಭೆಂಡೆ, ದಿಲೀಪ ಮರಪಳ್ಳಿ, ರಮೇಶ ಬೆಲ್ದಾರ್, ಸಿಪಿಐಎಂನ ಆರ್.ಪಿ. ರಾಜಾ, ಹರಳಯ್ಯ ಸಮಾಜದ ಮುಖಂಡ ಸುಭಾಷ ಹಮಿಲಾಪುರ, ರಾಜಕುಮಾರ ವಾಘಮಾರೆ, ಮಾದಿಗ ದಂಡೋರಾ ಹೋರಾಟ ಸಮಿತಿಯ ಪ್ರದೀಪ ಹೆಗಡೆ, ಮೂವ್‍ಮೆಂಟ್ ಆಫ್ ಜಸ್ಟಿಸ್ ಸರ್ಫರಾಜ್ ಹಾಶ್ಮಿ, ಕರ್ನಾಟಕ ಮಾದಿಗ ಮಹಾಸಭಾದ ಅಭಿ ಕಾಳೆ, ಅನ್ವರ್ ಷಾ, ಸಾಯಿ ಸಿಂಧೆ, ಅಲಿ ಅಹ್ಮದ್ ಖಾನ್, ಭರತ ಕಾಂಬಳೆ, ಗೌತಮ ಮುತ್ತಂಗಿಕರ್, ಸುಬ್ಬಣ್ಣ ಕರಕನಳ್ಳಿ ಹಾಗೂ ನರಸಿಂಗ್ ಮೇಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.