ADVERTISEMENT

ಏಪ್ರಿಲ್ 2ರಿಂದ ‘ಜೀವನ ಮೌಲ್ಯಗಳು’ ಪ್ರವಚನ

ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯಿಂದ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 12:42 IST
Last Updated 29 ಮಾರ್ಚ್ 2023, 12:42 IST
ಸ್ವಾಮಿ ಜ್ಯೋತಿರ್ಮಯಾನಂದ
ಸ್ವಾಮಿ ಜ್ಯೋತಿರ್ಮಯಾನಂದ   

ಬೀದರ್‌: ರಾಮಕೃಷ್ಣ ವಿವೇಕಾನಂದ ಆಶ್ರಮದ ಆಶ್ರಯದಲ್ಲಿ ಏಪ್ರಿಲ್ 2ರಿಂದ 9ರ ವರೆಗೆ ಇಲ್ಲಿಯ ಆಶ್ರಮದ ಗೋಶಾಲೆ ಆವರಣದಲ್ಲಿ ‘ಜೀವನ ಮೌಲ್ಯಗಳು’ ಪ್ರವಚನ ಮಾಲಿಕೆ ನಡೆಯಲಿದೆ ಎಂದು ಸ್ವಾಮಿ ಜ್ಯೋತಿರ್ಮಯಾನಂದ ಹಾಗೂ ಪ್ರವಚನ ಸಮಿತಿ ಅಧ್ಯಕ್ಷ ಗುರುನಾಥ ಕೊಳ್ಳೂರ್ ತಿಳಿಸಿದರು.

ನಿತ್ಯ ಸಂಜೆ 6.45ರಿಂದ ರಾತ್ರಿ 8.30ರ ವರೆಗೆ ಗದಗ– ವಿಜಯಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಪ್ರವಚನ ನೀಡುವರು ಎಂದು ಆಶ್ರಮದ ಆವರಣದಲ್ಲಿ ಬುಧವಾರ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಮೊದಲ ದಿನ ಭಾನುವಾರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಬೀದರ್‌ನ ಚಿದಂಬರ ಆಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಉದ್ಘಾಟಿಸುವರು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸುವರು. ರಾಣೆಬೆನ್ನೂರಿನ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್, ಹೊಸಪೇಟೆಯ ಸ್ವಾಮಿ ಸುಮೇಧಾನಂದಜಿ ಮಹಾರಾಜ, ಬೆಂಗಳೂರಿನ ಸ್ವಾಮಿ ಅಭಯಾನಂದಜಿ ಮಹಾರಾಜ್‌ ಉಪಸ್ಥಿತರಿರುವರು ಎಂದು ತಿಳಿಸಿದರು.

ADVERTISEMENT

ನಿತ್ಯ ಸಂಜೆ 5.30ಕ್ಕೆ ಸಂಗೀತ ಹಾಗೂ ಭರತ ನಾಟ್ಯ, ನಂತರ ಸಂಜೆ 645ಕ್ಕೆ ಗೋವಾ ಸೇವಾ ಸದಸ್ಯರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಏ.2ರಂದು ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ, ಮಹೇಶ ಕುಂಬಾರ, 3 ರಂದು ಮಹೇಶ್ವರಿ ಪಾಂಚಾಳ, ಪೂರ್ಣಚಂದ್ರ ಮೈನಾಳೆ, 4 ರಂದು ಶಿವಕುಮಾರ ಪಂಚಾಳ, ಸಿದ್ದುಸಾಯಿ ನಾನಕೇರಿ, 5ರಂದು ಸರಸ್ವತಿ ಶೀಲವಂತ, ಪ್ರಭಾ ಕಮ್ಮಾರ, 6 ರಂದು ರೇಖಾ ಅಪ್ಪಾರಾವ್ ಸೌದಿ, 7ರಂದು ರಮೇಶ ಕೊಳಾರ, ಕುಮಾರ ರೋಷನ್‌ ಕೊಳಾರ, 8ರಂದು ಕೃಷ್ಣ ಮುಖೇಡಕರ್, 9 ರಂದು ಉಷಾ ಪ್ರಭಾಕರ ಹಾಗೂ ಪ್ರಭಾ ಕಮ್ಮಾರ ಕಾರ್ಯಕ್ರಮ ನೀಡುವರು ಎಂದರು.

ಇದಲ್ಲದೇ ಏಪ್ರಿಲ್‌ 3ರಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 5ರಂದು ಬ್ರೀಮ್ಸ್‌ ಕಾಲೇಜಿನಲ್ಲಿ, 6ರಂದು ಜ್ಞಾನಸುಧಾ ವಿದ್ಯಾಲಯ ಹಾಗೂ 7ರಂದು ಗುರುನಾನಕ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ವಿಶೇಷ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಜಯಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಜ್ಯೋತಿರ್ಮಯಾನಂದಜಿ ತಿಳಿಸಿದರು.

ವಸಂತ–ವಿಹಾರ 2023:

ಏಪ್ರಿಲ್ 1ರಿಂದ 9ರ ವರೆಗೆ ವಸಂತ–ವಿಹಾರ 2023 ಬೇಸಿಗೆ ವಸತಿ ಶಿಬಿರ ನಡೆಯಲಿದೆ. 3ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ವಿವರಗಳಿಗೆ 9449274246 ಸಂಪರ್ಕಿಸಬಹುದು.

ವಸಂತ–ವಿಹಾರದಲ್ಲಿ ಯೋಗಾಸನ ಪ್ರಾಣಾಯಾಮ, ಧ್ಯಾನ, ವ್ಯಕ್ತಿತ್ವ ವಿಕಸನ ದೇಶಭಕ್ತಿ, ಚಲನಚಿತ್ರ ಪ್ರದರ್ಶನ, ಭಾಷಣ ಕಲೆ, ಆಟೋಟ, ಬೆಟ್ಟ ಚಾರಣ, ಸ್ವ ಶಿಸ್ತಿನ ಪರಿಚಯ, ಮಹಾನ್‌ ವ್ಯಕ್ತಿಗಳ ಜೀವನ ದರ್ಶನ ಮಾಡಿಸಲಾಗುವುದು.

10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ಏಪ್ರಿಲ್ 1ರಿಂದ ಮೇ 30ರ ವರೆಗೆ ಗಣಿತ, ವಿಜ್ಞಾನ, ಇಂಗ್ಲಿಷ್, ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ 2 ತಿಂಗಳ ಅವಧಿ ಕನ್ನಡ, ಇಂಗ್ಲಿಷ್‌ನಲಿ ಬೋಧನೆ ಮಾಡಲಾಗುವುದು. ವಸತಿ ಹಾಗೂ ವಸತಿ ರಹಿತ ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವವರು ಮೊಬೈಲ್‌ ಸಂಖ್ಯೆ 97416 93266ಗೆ ಸಂಪರ್ಕಿಸಬಹುದು.

ರಾಮಕೃಷ್ಣ ಪರಮಹಂಸ ಉದ್ಯಾನ ಕಾಮಗಾರಿಗೆ ಚಾಲನೆ:

ಶಿವನಗರದ ರಾಮಕೃಷ್ಣ ಉದ್ಯಾನಕ್ಕೆ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಚಾಲನೆ ನೀಡಿದರು.

ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪ್ರಯುಕ್ತ ನಗರದಲ್ಲಿನ ಒಟ್ಟು 75 ಉದ್ಯಾನಗಳಿಗೆ ಮಹಾ ಪುರುಷರ ಹೆಸರು ಇಡಲಾಗಿದೆ. 15 ಉದ್ಯಾನಗಳ ಅಭಿವೃದ್ಧಿಗೆ ಆಡಳಿತಾತ್ಮಕ ಒಪ್ಪಿಗೆ ದೊರಕಿದೆ. ರಾಮಕೃಷ್ಣ ಉದ್ಯಾನದ ಅಭಿವೃದ್ಧಿಗೆ ಬುಡಾದಿಂದ ₹ 10 ಲಕ್ಷ ಮಂಜೂರು ಮಾಡಲಾಗಿದೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ವಾಲಿ ತಿಳಿಸಿದರು.

ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಬಿ.ಜಿ.ಮೂಲಿಮನಿ, ವಿರೂಪಾಕ್ಷ ಗಾದಗಿ, ಕಾಮಶೆಟ್ಟಿ ಚಿಕ್ಕಬಸೆ, ಹಾವಶೆಟ್ಟಿ ಪಾಟೀಲ, ಜ್ಞಾನೇಶ್ವರ, ನಿಜಪ್ಪ ಪತ್ರಿ, ಪ್ರಕಾಶ ಪೋತದಾರ, ಸುಧೀರ ಕುಲಕರ್ಣಿ, ಸಂತೋಷಕುಮಾರ, ಬಸವರಾಜ ಕೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.