ADVERTISEMENT

ಬೀದರ್ | ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಿ

ನಿರ್ವಹಣಾ ಕ್ರಮಗಳ ಸಭೆಯಲ್ಲಿ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 16:53 IST
Last Updated 19 ಜೂನ್ 2020, 16:53 IST
ಕೋವಿಡ್ 19 ನಿರ್ವಹಣಾ ಕ್ರಮಗಳ ಕುರಿತು ಬೀದರ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು
ಕೋವಿಡ್ 19 ನಿರ್ವಹಣಾ ಕ್ರಮಗಳ ಕುರಿತು ಬೀದರ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು   

ಬೀದರ್: ಕೋವಿಡ್-19 ಚಿಕಿತ್ಸೆಗೆ ಕೊರತೆಯಾಗದಂತೆ ಔಷಧಿ ದಾಸ್ತಾನು ಮಾಡಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚಿಸಿದರು.

ಕೋವಿಡ್-19 ನಿರ್ವಹಣಾ ಕ್ರಮಗಳ ಕುರಿತು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇರಿಸಿ ಗಡಿಯಲ್ಲಿನ ಚೆಕ್‍ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಜನರಿಂದ ದೂರುಗಳು ಬಾರದ ಹಾಗೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರುವವರಿಗೆ ಗುಣಮಟ್ಟದ ಆಹಾರ ನೀಡಲು ಕ್ರಮ ವಹಿಸಬೇಕು ಎಂದು ಹೇಳಿದರು.

ADVERTISEMENT

ಸಂಸದ ಭಗವಂತ ಖೂಬಾ ಮಾತನಾಡಿ,‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕೊವಿಡ್ 19 ನಿರ್ವಹಣೆ ಕಾರ್ಯ ನಡೆಯಬೇಕು’ ಎಂದು ತಿಳಿಸಿದರು.

ಹುಮನಾಬಾದ್ ತಾಲ್ಲೂಕಿನಲ್ಲಿ 17 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಲ್ಲಿ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಶಾಸಕ ರಹೀಂ ಖಾನ್ ಮಾತನಾಡಿ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಬೀದರ್‌ನಲ್ಲಿ ಕೊವಿಡ್ 19 ಸೋಂಕು ಹರಡದ ಹಾಗೆ ಜಿಲ್ಲಾಡಳಿತ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿ,‘ಕೋವಿಡ್-19 ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಬೇಕು’ ಎಂದು ಹೇಳಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾತನಾಡಿ,‘ಜಿಲ್ಲೆಯಲ್ಲಿ ಇದುವರೆಗೆ 411 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 129 ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಮತ್ತು ಚಿಕಿತ್ಸೆ ಉತ್ತಮವಾಗಿ ನಡೆಯುತ್ತಿದೆ. ಮುಂದೆ ಎದುರಾಗಬಹುದಾದ ಸವಾಲುಗಳನ್ನು ಅರಿತು ಅದಕ್ಕೆ ಬೇಕಾದ ಮೂಲ ಆರೋಗ್ಯ ಸೌಕರ್ಯ, ಮಾನವ ಸಂಪನ್ಮೂಲ ಲಭ್ಯತೆ ಬಗ್ಗೆ ಯೋಜಿಸಲಾಗುತ್ತಿದೆ. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರಂತರ ತರಬೇತಿ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎನ್ನುವ ಸಂದೇಶ ತಲುಪಲು ಮಾಸ್ಕ್ ದಿನ ಆಚರಿಸಲಾಗಿದೆ. ಹೊರಗಿನಿಂದ ಬರುವವರಿಗೆ ಮೂರು ದಿನ ಸಾಂಸ್ಥಿಕ ಮತ್ತು ಏಳು ದಿನ ಹೋಮ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಿಗೆ ಜಿಲ್ಲೆಯ ಭಂಗೂರ, ಚಳಕಾಪುರ ಹಾಗೂ ಕಮಲನಗರ ಚೆಕ್ಪೋಸ್ಟ್‌ಗಳ ಮೂಲಕ ಬರಲು ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಜಿಲ್ಲೆಗೆ ಆಗಮಿಸುವವರ ಸಂಖ್ಯೆ ಈಗ ಕಡಿಮೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕ ಬಿ.ನಾರಾಯಣರಾವ್, ಸಿಇಓ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿ ಅಕ್ಷಯ್ ಶ್ರೀಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.