ADVERTISEMENT

ಶಿಕ್ಷಣವೇ ಮಹಿಳೆಯರ ಪ್ರಗತಿಯ ದಾರಿ: ಡಾ.ನಾಗಲಕ್ಷ್ಮಿ ಚೌಧರಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:02 IST
Last Updated 3 ಡಿಸೆಂಬರ್ 2025, 7:02 IST
ಹುಲಸೂರ ಪಟ್ಟಣದ ಅಲ್ಲಮಪ್ರಭು ಶೂನ್ಯಪೀಠ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವ ಕಾರ್ಯಕ್ರಮದಲ್ಲಿ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ವೈರಾಗ್ಯ ನಿಧಿ ಅಕ್ಕಮಹಾದೇವಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ₹ 25000 ನಗದು ಒಳಗೊಂಡಿದೆ
ಹುಲಸೂರ ಪಟ್ಟಣದ ಅಲ್ಲಮಪ್ರಭು ಶೂನ್ಯಪೀಠ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವ ಕಾರ್ಯಕ್ರಮದಲ್ಲಿ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ವೈರಾಗ್ಯ ನಿಧಿ ಅಕ್ಕಮಹಾದೇವಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ₹ 25000 ನಗದು ಒಳಗೊಂಡಿದೆ   

ಹುಲಸೂರ: ‘ಮಹಿಳೆಗೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ. ಶಿಕ್ಷಣವೇ ಮಹಿಳೆಯರ ಪಾಲಿನ ಪ್ರಗತಿಯ ದಾರಿ.ಮಹಿಳೆಯರ ಮನಸ್ಥಿತಿ ಬದಲಾಗುವವರೆಗೆ ಸಾಮಾಜಿಕ ಪರಿವರ್ತನೆ ಅಸಾಧ್ಯ.ಮಹಿಳೆಯರು ಶಿಕ್ಷಣವಂತರಾಗಿ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ನಿಮ್ಮ ಹಕ್ಕುಗಳಿಗಾಗಿ ನೀವೆ ಹೋರಾಟ ಮಾಡಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಪಟ್ಟಣದ ಅಲ್ಲಮಪ್ರಭು ಶೂನ್ಯ ಮಂಟಪದಲ್ಲಿ ಶಿವಾನಂದ ಸ್ವಾಮೀಜಿ ಅವರ ಜನ್ಮದಿನ ನಿಮಿತ್ತ ಹಮ್ಮಿಕೊಂಡಿರುವ ಎರಡನೇ ದಿನದ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವದ ಕಾರ್ಯಕ್ರಮದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಕೆಲವು ಹೆಣ್ಣು ಮಕ್ಕಳು ಆಧುನಿಕ ತಂತ್ರಜ್ಞಾನಗಳ ಮೂಲಕ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವ ಮೂಲಕ ತನ್ನ ತಾನು ಶೋಷಣೆಗೆ ಸಿಲುಕಿಕೊಳ್ಳುವ ಮೂಲಕ ಜೀವ ಭಯದಲ್ಲೇ ಜೀವ ಕಳೆದುಕೊಂಡಿದ್ದಾರೆ. ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ವಿಡಿಯೊ ಹಂಚಿಕೊಂಡು ನಂತರ ತಾನು ನಂಬಿದವರಿಂದ ಬ್ಲಾಕ್ ಮೇಲ್ ತಂತ್ರವನು ಎದುರಿಸುತ್ತಿರುವಂತ ಸಂದರ್ಭ ಬಂದಾಗ ಒಂದು ಸಲ ವೈರಾಗ್ಯ ನಿಧಿ ಅಕ್ಕ ಮಹಾದೇವಿ ಅವರ ಜೀವನ ನೆನಪು ಮಾಡಿಕೊಳ್ಳಿ. ಬಡತನದ ನೆಪವೊಡ್ಡಿ ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಉತ್ತರ ಕರ್ನಾಟಕದಲ್ಲಿ ಬಾಲ್ಯವಿವಾಹ ಸಂಖ್ಯೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶರಣು ಸಲಗರ, ‘ಲಕ್ಷಾಂತರ ಮರಗಳನ್ನು ನಮ್ಮ ನಾಡಿಗೆ ನೀಡಿದ ಆದರ್ಶ ತಾಯಿ ಸಾಲುಮರದ ತಿಮ್ಮಕ್ಕ, ಶರಣೆಯರಾದ ಅಕ್ಕ ನಾಗಮ್ಮ, ಗಂಗಾಂಬಿಕೆ, ನಿಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಜೀಜಾಬಾಯಿ ಸೇರಿದಂತೆ ಜಗತ್ತಿನ ಸಾಧಕರಿಗೆ ಮಹಾತ್ಮರಿಗೆ ಜನ್ಮನೀಡಿದ ತಾಯಂದಿರು ನಮ್ಮ ದೇಶದ ನಾರಿಯರಿಗೆ ಆದರ್ಶರು’ ಎಂದರು.

ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ,ಬಸವ ಕೇಂದ್ರದ ಜಿಲ್ಲಾ ಅಧ್ಯಕ್ಷ ಶರಣಪ್ಪ ಮಿಠಾರೆ ಶರಣರ ವಿಚಾರಗಳನ್ನು ಕುರಿತು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶಟ್ಟಿ ಸ್ವಾಗತ ಕೋರಿದರು.

ಶಿವಾನಂದ ಸ್ವಾಮೀಜಿ ಅವರ 74ನೇ ಜನ್ಮದಿನಾಚರಣೆ ಪ್ರಯುಕ್ತ ಶಿಕ್ಷಣ,ಸಾಮಾಜ ಸೇವೆ, ಸಾಹಿತ್ಯ, ಸೈನಿಕ ಸೇವೆ ಸೇರಿದಂತೆ ವಿವಿಧ ರೀತಿಯ ಕ್ಷೇತ್ರದಲ್ಲಿ ಸಾಧನೆ ಸೇವೆ ಸಲ್ಲಿಸಿದ 74 ಜನರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಥಣಿ ಮಠದ ಮಲ್ಲಿಕಾರ್ಜುನ್ ಸ್ವಾಮೀಜಿ, ಸಾಯಗಾಂವ್ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಗೋರಟಾದ ಲಿಂಗಾಯತ ಮಹಾಮಠದ ಪ್ರಭು ದೇವರು, ಸಾಯಗಾಂವ ಮಠದ ಶಿವಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಸೋನಾಲ ವಿಜಯ ಸಿಂಗ್, ಸುಧೀರ ಕಾಡಾದಿ, ಲತಾ ಹಾರಕೂಡೆ, ಸಿಪಿಐ ಅಲಿಸಾಬ, ಲಕ್ಷ್ಮೀ ಬಾವಗೆ, ಉಲ್ಲಾಸಿನಿ ಮುದಾಳೆ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನವಲಿಂಗ ಪಾಟೀಲ್ ನಿರೂಪಿಸಿದರು.

ತರಾಟೆಗೆ: ವೈರಾಗ್ಯ ನಿಧಿ ಅಕ್ಕಮಹಾದೇವಿ ಪ್ರಶಸ್ತಿ ಪಡೆದ ಬಳಿಕ ಸಾರ್ವಜನಿಕ ಅಹವಾಲು ಸ್ವೀಕರಿಸಿ ಸ್ಥಳೀಯ ಮಹಿಳೆಯರು ತಮ್ಮ ಕುಂದು ಕೊರತೆಗಳು ಅವರ ಬಳಿ ಹೇಳಿಕೊಳ್ಳುವ ವೇಳೆ ಸಮಸ್ಯೆಗೆ ಸ್ಪಂದಿಸುವ ಸಿಡಿಪಿಒ ಅವರು ಸ್ಥಳದಲ್ಲಿ ಇಲ್ಲದ್ದರಿಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು

ಬಳಿಕ ಕೂಡಲೇ ಸ್ಥಳೀಯವಾಗಿ ಸಮಸ್ಯೆಗೆ ಸ್ಪಂದಿಸಿ, ಮಹಿಳೆಯರಿಂದ ದೂರು ಸ್ವೀಕರಿಸಿದರು. ಈ ವೇಳೆ ವಿದ್ಯಾರ್ಥಿನಿಯರು ಅಧ್ಯಕ್ಷೆಯ ಬಳಿಗೆ ಆಗಮಿಸಿ ಸೆಲ್ಫಿ ತೆಗೆದುಕೊಂಡು ಖುಷಿ ಹಂಚಿಕೊಂಡರು.

ಭಕ್ತಾದಿಗಳು ಹಾಗೂ ಮಹಿಳೆಯರು ವಚನ ಸಾಹಿತ್ಯದ ಹೊತ್ತಿಗೆಗಳ ರಥ ಎಳೆದರು

ವಚನ ಸಾಹಿತ್ಯ ರಥ ಮೆರವಣಿಗೆ ವಚನ ಸಾಹಿತ್ಯದ ಹೊತ್ತಿಗೆಗಳನ್ನು ಹೊತ್ತ ರಥಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹಾಗೂ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವಾನಂದ ಸ್ವಾಮೀಜಿ ಮಾತನಾಡಿ ಜೀವನ ರೂಪಿಸಿಕೊಳ್ಳಲು ಯುವಕರಿಗೆ ಗೊಂದಲ ಉಂಟಾಗಿದೆ. ಇದಕ್ಕೆ ಶರಣರ ವಚನದಲ್ಲಿ ಪರಿಹಾರ ಇದೆ ಎಂದು ತಿಳಿಸಿದರು. ವೈದಿಕರು ವಚನ ಸಾಹಿತ್ಯದ ಹೊತ್ತಿಗೆಗಳನ್ನು ಸುಟ್ಟ ಕಾರಣ 23 ಸಾವಿರ ವಚನಗಳು ಮಾತ್ರ ದೊರೆತಿವೆ. ವಿರಕ್ತ ಮಠಗಳು ಸ್ವಾಮೀಜಿಗಳು ವಚನ ಸಾಹಿತ್ಯದಲ್ಲಿರುವ ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದರು. ಈ ಸಂದರ್ಭದಲ್ಲಿ ಶಶಿಕಲಾ ಪಟಣೆ ಶ್ರೀದೇವಿ ನಿಡೋದೆ ಪ್ರಭಾವತಿ ಧಬಾಲೆ ಪೂಜಾ ಖಪ್ಲೇ ರೇಖಾ ಕಾಡಾದಿ ಸಂಗೀತ ಸ್ವಾಮಿ ರಾಜಕುಮಾರ ನಿಡೋದೆ ಮಲ್ಲಪ್ಪಾ ದಭಾಲೆ ಗುರುನಾಥ್ ಬಲಕುಂದೆ ಚಂದ್ರಕಾಂತ ದೆಟ್ನೆ ಓಂಕಾರ ಪಟನೆ ರಮೇಶ ತೋಟದ ಸೇರಿ ಹಲವು ಗ್ರಾಮದ ಮಹಿಳೆಯರು ವಚನ ಸಾಹಿತ್ಯದ ಹೊತ್ತಿಗೆಗಳ ರಥ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.