ADVERTISEMENT

ಮತ ಸೆಳೆಯಲು ಭಾವನಾತ್ಮಕ ತಂತ್ರ

ಮತದಾರರ ಎದುರು ಅಳುವ, ಬೇಡಿಕೊಳ್ಳುವ ಅಭ್ಯರ್ಥಿಗಳು

ಚಂದ್ರಕಾಂತ ಮಸಾನಿ
Published 5 ಏಪ್ರಿಲ್ 2021, 2:43 IST
Last Updated 5 ಏಪ್ರಿಲ್ 2021, 2:43 IST

ಬೀದರ್‌: ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಳ ಮೊರೆ ಹೋಗಿದ್ದಾರೆ. ಭಾವನಾತ್ಮಕ ತಂತ್ರ ಅನುಸರಿಸುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ನಾರಾಯಣರಾವ್‌ ಅವರು, ‘ಪತಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡರು. ಜನ ಸೇವೆ ಮಾಡಲು ಅವರಿಗೆ ಅವಕಾಶ ಸಿಗಲೇ ಇಲ್ಲ. ಪತಿಯ ಕನಸು ನನಸು ಮಾಡಲು ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಅನುಕಂಪದ ಅಲೆಯಲ್ಲಿ ಗೆಲ್ಲಬಹುದು ಎನ್ನುವ ವಿಶ್ವಾಸದಿಂದ ಕಾಂಗ್ರೆಸ್‌, ಮಾಲಾ ಅವರಿಗೆ ಟಿಕೆಟ್‌ ನೀಡಿ ಚುನಾವಣಾ ಕಣಕ್ಕೆ ಇಳಿಸಿದೆ. ‘ಮಹಿಳೆಯರ ಮತಗಳು ಬರಬಹುದು. ಆದರೆ, ಎಲ್ಲವೂ ಅಂದ್ಕೊಂಡಂತೆ ಆಗುವುದು ಕಷ್ಟ’ ಎಂಬ ಚರ್ಚೆ ಕಾಂಗ್ರೆಸ್‌ ಕಾರ್ಯಕರ್ತರ ವಲಯದಲ್ಲಿ ನಡೆಯುತ್ತಿದೆ.

ADVERTISEMENT

‘ನಾನೇನು ಹೊರಗಿನವನಲ್ಲ. ಕ್ಷೇತ್ರದ ಜನರ ಕಲ್ಯಾಣಕ್ಕೆ ಪ್ರಾಣವನ್ನಾದರೂ ಕೊಡಲು ಸಿದ್ಧ. ನಾನು ಮೃತಪಟ್ಟರೂ ಇದೇ ನೆಲದಲ್ಲೇ ಮಣ್ಣು ಮಾಡಬೇಕು’ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮತದಾರರಿಗೆ ಕೋರುತ್ತಿದ್ದಾರೆ. ಫಲಾಪೇಕ್ಷೆ ಬಯಸದೇ ಲಾಕ್‌ಡೌನ್‌ ಅವಧಿಯಲ್ಲಿ ಬಡವರಿಗೆ ಆಹಾರಧಾನ್ಯ ಹಂಚಿರುವುದನ್ನು ಸ್ಮರಿಸಿ ಕರುಣೆ ಪಡೆಯುವ ವಾತಾವರಣ ಸೃಷ್ಟಿಸುತ್ತಿದ್ದಾರೆ.

‘ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ವಿಶ್ವಾವಿಟ್ಟು ಜೆಡಿಎಸ್‌ನಲ್ಲಿ ಇದ್ದಾಗಲೇ ಬಿಜೆಪಿ ಸೇರಿದೆ. ಆದರೆ ಬಿಜೆಪಿ ವರಿಷ್ಠರು ಟಿಕೆಟ್‌ ತಪ್ಪಿಸಿ ನನಗೆ ವಂಚಿಸಿದರು. ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡಿ ನನಗೆ ಅನ್ಯಾಯ ಮಾಡಿದ್ದಾರೆ’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪ್ರಚಾರ ಸಭೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.

‘ಚುನಾವಣೆಯಲ್ಲಿ ನನ್ನ ಪರವಾಗಿ ಮತ ಚಲಾಯಿಸುವ ಮೂಲಕ ಕ್ಷೇತ್ರದ ಜನರೇ ನ್ಯಾಯ ದೊರಕಿಸಿಕೊಡಬೇಕು’ ಎಂದು ಅವರು ಕೋರಿಕೊಳ್ಳುತ್ತಿದ್ದಾರೆ.

‘15 ವರ್ಷ ಕಾಂಗ್ರೆಸ್‌ನಲ್ಲಿ ಇದ್ದರೂ ಮುಸ್ಲಿಮರಿಗೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್‌ ಮುಸ್ಲಿಮರನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿದೆ. ಇದು ಮನವರಿಕೆಯಾದ ನಂತರ ಜೆಡಿಎಸ್‌ ಮೂಲಕ ಸ್ಪರ್ಧಿಸಿದ್ದೇನೆ. ಅಲ್ಪಸಂಖ್ಯಾತರು ಬಸವಕಲ್ಯಾಣದಲ್ಲಿ ರಾಜಕೀಯವಾಗಿ ತಮ್ಮ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಗುವಂತೆ ಮತ ಕೊಡಬೇಕು’ ಎಂದು ಲಾರಿ ಉದ್ಯಮಿ ಯಸ್ರಬ್ ಅಲಿ ಖಾದ್ರಿ ಮನವಿ ಮಾಡುತ್ತಿದ್ದಾರೆ.

ಮತ್ತೆ ಬರಲಿದೆ ಮಖಂಡರ ದಂಡು

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಬಸವಕಲ್ಯಾಣದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಯುಗಾದಿಯ ಮೊದಲು ಇನ್ನೊಂದು ಸುತ್ತು ಕ್ಷೇತ್ರದಲ್ಲಿ ಪ್ರಚಾರ ಮಾಡಲು ರಾಜಕಾರಣಿಗಳ ದಂಡು ಜಿಲ್ಲೆಗೆ ಬರಲಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏಪ್ರಿಲ್ 7, 8 ಹಾಗೂ 12ರಂದು ಬಸವಕಲ್ಯಾಣಕ್ಕೆ ಬಂದು ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಕೈಗೊಳ್ಳುವರು. ಏಪ್ರಿಲ್ 9 ಹಾಗೂ 10 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರೂ ಪ್ರಚಾರಕ್ಕೆ ಬರುವರು ಎಂದು ಕಾಂಗ್ರೆಸ್‌ ತಿಳಿಸಿದೆ.

ಏಪ್ರಿಲ್‌ 12 ಅಥವಾ 13ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಚಾರಕ್ಕೆ ಬರುವರು. ಬಿಜೆಪಿ ತಾರಾ ಪ್ರಚಾರ ನೀಡಲು ಸಹ ಸಿದ್ಧತೆ ಮಾಡಿ ಕೊಂಡಿದೆ. ಚಲನಚಿತ್ರ ತಾರೆಯರಾದ ತಾರಾ ಹಾಗೂ ಶ್ರುತಿ ಅವರೂ ವಾರಾಂತ್ಯ ದಲ್ಲಿ ಬಸವಕಲ್ಯಾಣಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ 16 ಶಾಸಕರು ಏಪ್ರಿಲ್ 7ರಿಂದ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.