ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಆಶ್ವಾಸನೆ ಮೇರೆಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕಳೆದ ಏಳು ದಿನಗಳಿಂದ ನಗರದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ರೈತರು ಶನಿವಾರ ರಾತ್ರಿ ಕೈಬಿಟ್ಟಿದ್ದಾರೆ.
ನಗರದಲ್ಲಿನ ಉಸ್ತುವಾರಿ ಸಚಿವರ ಕಚೇರಿ ಮುಂಭಾಗದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಬೀದರ್ ಜಿಲ್ಲೆ ಹಸಿ ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿ ಪ್ರತಿ ಎಕರೆಗೆ ₹30 ಸಾವಿರಗಳಂತೆ ಪ್ರತಿ ಹೆಕ್ಟೇರ್‌ಗೆ ₹60 ಸಾವಿರ ಪರಿಹಾರ ನೀಡಬೇಕು. ರೈತರ ಎಲ್ಲ ತರಹದ ಬ್ಯಾಂಕುಗಳ ಸಾಲ ಮನ್ನಾ ಮಾಡುವುದು ಸೇರಿದಂತೆ ಒಟ್ಟು 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ, ಕಾರ್ಮಿಕ, ಕನ್ನಡ, ದಲಿತಪರ ಸಂಘಟನೆಗಳ ಬೆಂಬಲದೊಂದಿಗೆ ಅ.12ರಿಂದ ಧರಣಿ ನಡೆಸುತ್ತಿದ್ದರು. ಶನಿವಾರ ಸಚಿವ ಈಶ್ವರ ಖಂಡ್ರೆ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹಾರದ ಒದಗಿಸುವ ಭರವಸೆ ನೀಡಿದರು.
ʼಸರ್ಕಾರ ಈಗಾಗಲೇ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ನಿಗದಿಯಾಗಿದ್ದ ₹8,500 ಬದಲಿಗೆ ₹17 ಸಾವಿರ, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ನಿಗದಿಯಾಗಿರುವ ₹17 ಸಾವಿರ ಬದಲಿಗೆ ₹25,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ನಿಗದಿಯಾಗಿದ್ದ ₹22,500 ಬದಲಿಗೆ ₹31 ಸಾವಿರ ಪರಿಹಾರವನ್ನು ಅ.30ರ ಒಳಗಾಗಿ ರೈತರ ಖಾತೆಗೆ ಪಾವತಿಸಲಾಗುವುದು ಎಂದರು.
ರೈತರ ಸಾಲ ಮನ್ನಾ ಕುರಿತು ಸಿಎಂ ಅವರೊಂದಿಗೆ ಚರ್ಚಿಸಬೇಕು. ದೀಪಾವಳಿ ನಂತರ ನಿಯೋಗದೊಂದಿಗೆ ಬಂದರೆ ಮುಖ್ಯಮಂತ್ರಿಗಳೊಂದಿಗೆ ಭೇಟಿ ಮಾಡಿಸುವೆ, ಅವರೊಂದಿಗೆ ಜಿಲ್ಲೆಯ ರೈತರ ಎಲ್ಲ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸೋಣ. 60 ವರ್ಷ ಪೂರೈಸಿದ ರೈತ ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ ₹10 ಸಾವಿರ ಗೌರವ ಧನ ನೀಡಲು ಬಜೆಟ್‌ನಲ್ಲಿ ಅನುದಾನ ಒದಗಿಸಬೇಕಾಗುತ್ತದೆ. ನವೆಂಬರ್-ಡಿಸೆಂಬರ್‌ನಲ್ಲಿ ಬಜೆಟ್ ಚರ್ಚಿಸುವ ವೇಳೆ ಬಂದರೆ ಈ ಭರವಸೆ ಈಡೇರಿಸಲಾಗುವುದು ಎಂದು ತಿಳಿಸಿದರು.
ಕಬ್ಬಿನ ದರ ನಿಗದಿ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಲಾಗುವುದು, ಕಬ್ಬಿನ ಎಫ್‌ಆರ್‌ಪಿ ಪರಿಶೀಲಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರ್ ಆರಂಭ ಬೇಡಿಕೆ ಸದ್ಯಕ್ಕೆ ಅಸಾಧ್ಯ ಎಂದ ಸಚಿವರು ಬಗರ್ ಹುಕಂ ಅರ್ಜಿಗಳ ವಿಲೇವಾರಿ ಮಾಡಿ ಮತ್ತು ಹಕ್ಕು ಪತ್ರ ವಿತರಣೆ ಕುರಿತು ಕಂದಾಯ ಇಲಾಖೆಗೆ ತಿಳಿಸುವೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ್ ಹೊನ್ನಾ, ಕಾಸಿಂ ಅಲಿ, ರುದ್ರಯ್ಯಾ ಸ್ವಾಮಿ, ವೀರಾರೆಡ್ಡಿ ಪಾಟೀಲ್, ನಜೀರ್ ಅಹಮ್ಮದ್ ಚೊಂಡಿ, ವಿಠ್ಠಲ ರೆಡ್ಡಿ, ಸುಭಾಷ ಇಟಗೆ, ಶಾಂತಮ್ಮ ಮೂಲಗೆ, ಕಮಲಬಾಯಿ ಮಡ್ಡೆ, ಕೋಂಡಿಬಾರಾವ್ ಪಾಂಡ್ರೆ, ಎಂ.ಡಿ.ಶಫಾಯತ್ ಅಲಿ, ಶೀಲಾ ಸಾಗರ್, ವಿಜಯಕುಮಾರ್ ಬಾವಗೆ, ಗುಂಡೇರಾವ್ ಕುಲಕರ್ಣಿ, ನಾಗಶೆಟ್ಟಪ್ಪ ಲಂಜವಾಡೆ, ಬಸವರಾಜ ಅಷ್ಟೂರ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.