ADVERTISEMENT

ಸಿರಿಧಾನ್ಯ ಬೆಳೆಯಲು ರೈತರ ಹಿಂದೇಟು: ಕೃಷಿಕರಿಗೆ ಉಚಿತ ಬೀಜ ವಿತರಣೆ

ಕೃಷಿ ಇಲಾಖೆಯಿಂದ ಕೃಷಿಕರಿಗೆ ಉಚಿತ ಬೀಜ ವಿತರಣೆ

ಚಂದ್ರಕಾಂತ ಮಸಾನಿ
Published 28 ಜೂನ್ 2021, 19:30 IST
Last Updated 28 ಜೂನ್ 2021, 19:30 IST
ಬೀದರ್‌ ತಾಲ್ಲೂಕಿನ ಜನವಾಡದಲ್ಲಿರುವ ಸಿರಿಧಾನ್ಯಗಳ ಸಂಸ್ಕರಣಾ ಘಟಕ
ಬೀದರ್‌ ತಾಲ್ಲೂಕಿನ ಜನವಾಡದಲ್ಲಿರುವ ಸಿರಿಧಾನ್ಯಗಳ ಸಂಸ್ಕರಣಾ ಘಟಕ   

ಬೀದರ್: ಕೃಷಿ ಇಲಾಖೆ ಜಿಲ್ಲೆಯ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರಚಾರ ಕೈಗೊಳ್ಳುತ್ತಲೇ ಇದೆ. ಆದರೆ, ಉತ್ತಮ ಬೆಲೆ ದೊರಕದ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸದ ಕಾರಣ ರೈತರು ಸಿರಿಧಾನ್ಯ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಆರೋಗ್ಯಕ್ಕೆ ಸಿರಿಧಾನ್ಯಗಳು ಒಳ್ಳೆಯವು. ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯಲು ಪೂರಕ ವಾತಾವರಣವೂ ಇದೆ. ಕೃಷಿ ವಸ್ತು ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿದೆ. ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕಗಳ ಸಮಸ್ಯೆಯಿಂದ ಕೆಲ ರೈತರು ಸಿರಿಧಾನ್ಯ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ.

ಸಿರಿಧಾನ್ಯ ಬೆಳೆದ ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನ ರೈತರು ಮಾರಾಟಕ್ಕೆ ಕಲಬುರ್ಗಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಉತ್ಪಾದನೆಗಿಂತ ಸಾಗಣೆ ವೆಚ್ಚವೇ ಅಧಿಕವಾಗುತ್ತಿದೆ. ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೃಷಿ ವಿಜ್ಞಾನ ಕೇಂದ್ರದವರು ಜನವಾಡದಲ್ಲಿ ಒಂದು ಸಂಸ್ಕರಣಾ ಘಟಕ ಸ್ಥಾಪಿಸಿದ್ದಾರೆ. ಇದರ ಸಾಮರ್ಥ್ಯ ಕಡಿಮೆ ಇದೆ. ಹೀಗಾಗಿ ಜನವಾಡ ಹೋಬಳಿಯ ರೈತರಿಗೆ ಮಾತ್ರ ಅನುಕೂಲವಾಗಿದೆ.

ಜನವಾಡ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹುಲಸೂರಿನ ಹುಲಸೂರು ಮಹಿಳಾ ಕಿಸಾನ್‌ ಸಿರಿಧಾನ್ಯ ಸಂಸ್ಕರಣ ಘಟಕದಲ್ಲಿ ಸಿರಿಧಾನ್ಯಗಳ ಸಂಸ್ಕರಣೆ ಮಾಡಲಾಗುತ್ತಿದೆ. ಹುಲಸೂರಿಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮಿಲೆಟ್ ರಿಸರ್ಚ್ ಉಚಿತ ಸಂಸ್ಕರಣ ಘಟಕ ಒದಗಿಸಿದೆ. ಈ ಘಟಕದಲ್ಲಿ ಸೀಮಿತ ಪ್ರಮಾಣದಲ್ಲಿ ಸಿರಿಧಾನ್ಯ ಸಂಸ್ಕರಣೆ ಮಾಡಲಾಗುತ್ತಿದೆ.

ADVERTISEMENT

‘ಕೆವಿಕೆ ಸಂಸ್ಕರಣಾ ಘಟಕದಲ್ಲಿ ಕಳೆದ ವರ್ಷ 8 ಕ್ವಿಂಟಲ್‌ ಸಿರಿಧಾನ್ಯ ಮಾತ್ರ ಸಂಸ್ಕರಣೆ ಮಾಡಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಸಂಸ್ಕರಣಾ‌ ಘಟಕ ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ. ಕಾರಣ, ಹೈದರಾಬಾದ್‌ನ ಕಂಪನಿಯೊಂದು ರೈತರಿಗೆ ಉಚಿತ ಸಿರಿಧಾನ್ಯ ಬೀಜಗಳನ್ನು ಕೊಡುತ್ತಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲ್‌ಕುಮಾರ ಎನ್‌.ಎಂ. ಹೇಳುತ್ತಾರೆ.

‘ಜಿಲ್ಲೆಯಲ್ಲಿ ರಾಗಿ, ಸಾವೆ, ನವಣೆ, ಅರಕು, ಬರಗು ಹಾಗೂ ಕೊರ್ಲೆ ಬೆಳೆಯಲು ಅವಕಾಶ ಇದೆ. ಮುಂಗಾರು ಹಾಗೂ ಹಿಂಗಾರಿನಲ್ಲೂ ಬೆಳೆಯಬಹುದಾಗಿದೆ. ಹೆಚ್ಚು ಬೆಲೆ ಸಿಗುವ ಕಾರಣ ರೈತರು ಸೋಯಾ ಹಾಗೂ ಕಬ್ಬು ಬೆಳೆಯುವುದಕ್ಕೇ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಸಿರಿಧಾನ್ಯ ಬೆಳೆದರೂ ಉತ್ತಮ ಆದಾಯ ಪಡೆಯಬಹುದಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

‘ಸಿರಿಧಾನ್ಯದ ಸಾಮಾನ್ಯ ತಳಿಯ ಉತ್ಪಾದನೆ ಕಡಿಮೆ. ಹೀಗಾಗಿ ರೈತರು ವಾಣಿಜ್ಯ ಬೆಳೆಗೆ ಒತ್ತ ಕೊಡುತ್ತಿದ್ದಾರೆ. ಸರ್ಕಾರ, ಸಿರಿಧಾನ್ಯದ ಸುಧಾರಿತ ತಳಿ ಪರಿಚಯಿಸಿ ಉತ್ತಮ ಬೆಲೆ ಕೊಡಬೇಕು. ಪ್ರತಿ ತಾಲ್ಲೂಕಿನಲ್ಲಿ ಸಂಸ್ಕರಣಾ ಘಟಕ ಸ್ಥಾಪನೆ ಮಾಡಬೇಕು. ಅಂದಾಗ ಮಾತ್ರ ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ತೋರಿಸಲಿದ್ದಾರೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.