
ಬಂಧನ (ಸಾಂದರ್ಭಿಕ ಚಿತ್ರ)
ಬೀದರ್: ಹಣ ವಸೂಲಿಗೆ ಯತ್ನಿಸಿ, ಹಣ ಕೊಡದಿದ್ದಾಗ ಮೂವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬಳಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ ನಾಲ್ಕು ಜನರನ್ನು ಇಲ್ಲಿನ ಗಾಂಧಿ ಗಂಜ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಇಲ್ಲಿನ ವಿದ್ಯಾನಗರ ಕಾಲೊನಿಯ ಕೃಷ್ಣ, ನರೇಂದ್ರ ಅಲಿಯಾಸ್ ನರೇಶ್, ಕಿರಣ್ ಹಾಗೂ ನಿಖಿಲ್ ಬಂಧಿತರು. ಈ ನಾಲ್ವರು ಸೇರಿದಂತೆ ವಿದ್ಯಾನಗರದ ಸುಮಿತ್, ಅಮರ್ ಹಾಗೂ ಇತರೆ ಮೂವರ ವಿರುದ್ಧ ತಾಲ್ಲೂಕಿನ ಚಿಟ್ಟಾವಾಡಿ ನಿವಾಸಿ ಮಹೇಶ್ ಜಗದೀಶ್ ಬಿರಾದಾರ ಎಂಬುವರು ನೀಡಿದ ದೂರಿನ ಮೇರೆಗೆ ಶನಿವಾರ ಪ್ರಕರಣ ದಾಖಲಾಗಿತ್ತು.
ನಗರದ ಮೈಲೂರಿನ ಬಾಂಬೆ ಬಿಲ್ಡಿಂಗ್ ಸಮೀಪದ ‘ಗದಾ ಚೌಕ್’ ಬಳಿ ಮಹೇಶ್ ಜಗದೀಶ್ ಬಿರಾದಾರ ಎಂಬುವರಿಗೆ ಸೇರಿದ ಫೋಟೋ ಸ್ಟುಡಿಯೋ ಇದೆ. ಮಹೇಶ್, ಇವರ ಸಹೋದರ ಸಚಿನ್ ಹಾಗೂ ವಿಷ್ಣು ಚಂದ್ರಕಾಂತ್, ರೋಹಿತ್ ಮೈಕಲ್ ಕೂಡ ಅಲ್ಲಿಯೇ ಕೆಲಸ ನಿರ್ವಹಿಸುತ್ತಾರೆ.
ಶನಿವಾರ (ಫೆ.7) ಸಂಜೆ 4.15ರ ಸುಮಾರಿಗೆ ಬಂಧಿತರು ಸೇರಿದಂತೆ ಒಟ್ಟು ಒಂಬತ್ತು ಜನ, ಮಹೇಶ್ ಅವರ ಫೋಟೋ ಸ್ಟುಡಿಯೋ ಒಳಗೆ ಹೋಗಿ, ಶಿವರಾತ್ರಿ ಹಬ್ಬಕ್ಕೆ ಚಂದಾ ಪಟ್ಟಿ ಕೊಡಬೇಕೆಂದು ಕೇಳಿದ್ದಾರೆ. ‘ನನ್ನ ಅಣ್ಣ ಇಲ್ಲ. ಆಮೇಲೆ ಬನ್ನಿ’ ಎಂದು ಸ್ಟುಡಿಯೋದಲ್ಲಿದ್ದ ಸಚಿನ್ ಹೇಳಿದ್ದಾರೆ. ಇದರಿಂದ ಕೋಪೋದ್ರಿಕ್ತರಾಗಿ ಅವಾಚ್ಯ ಪದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಹೋದ ವಿಷ್ಣುವಿಗೂ ಹೊಡೆದಿದ್ದಾರೆ. ಬಳಿಕ ಸಚಿನ್ ಅವರು, ಮಹೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿ ಹಲ್ಲೆ ನಡೆಸಿದರನ್ನು ಮಹೇಶ್ ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ಮಹೇಶ್‌ಗೂ ಥಳಿಸಿ, ಚಾಕುವಿನಿಂದ ಕುತ್ತಿಗೆ ಹಿಂಭಾಗದಲ್ಲಿ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆನಂತರ ಜೀವ ಬೆದರಿಕೆ ಕೂಡ ಒಡ್ಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಮಹೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಗಾಂಧಿಗಂಜ್ ಠಾಣೆ ಪಿಐ ಆನಂದರಾವ್, ಪಿಎಸ್‌ಐ ದಶರಥ, ಸಿಬ್ಬಂದಿ ನವೀನ್, ಅನಿಲ್, ಇರ್ಫಾನ್, ಗಂಗಾಧರ್, ಸುಧಾಕರ್ ಅವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿದೆ. 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಯಾರೇ ಆಗಲಿ ಅಪರಾಧ ಕೃತ್ಯ ಎಸಗಿದರೆ ಸಹಿಸುವುದಿಲ್ಲ. ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು.–ಪ್ರದೀಪ್ ಗುಂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.