ADVERTISEMENT

ಬೀದರ್: ನ್ಯೂ ಆದರ್ಶ್‌ ಕಾಲೊನಿಗೆ ಚತುಷ್ಪಥ ‘ಭಾಗ್ಯ’

ಹಳೆ ಆರ್‌ಟಿಒ ಕಚೇರಿಯಿಂದ ಏರ್‌ಪೋರ್ಟ್‌ಗೆ ನೇರ ಸಂಪರ್ಕ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಡಿಸೆಂಬರ್ 2025, 5:57 IST
Last Updated 14 ಡಿಸೆಂಬರ್ 2025, 5:57 IST
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬೀದರ್‌ನ ನ್ಯೂ ಆದರ್ಶ್‌ ಕಾಲೊನಿಯ ಮುಖ್ಯರಸ್ತೆಯನ್ನು ಪರಿಶೀಲಿಸಿದರು. ಪಿಡಬ್ಲ್ಯೂಡಿ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಕಾಮಶೆಟ್ಟಿ ಮತ್ತಿತರರು ಇದ್ದಾರೆ
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬೀದರ್‌ನ ನ್ಯೂ ಆದರ್ಶ್‌ ಕಾಲೊನಿಯ ಮುಖ್ಯರಸ್ತೆಯನ್ನು ಪರಿಶೀಲಿಸಿದರು. ಪಿಡಬ್ಲ್ಯೂಡಿ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಕಾಮಶೆಟ್ಟಿ ಮತ್ತಿತರರು ಇದ್ದಾರೆ   

ಬೀದರ್: ನಗರದ ನ್ಯೂ ಆದರ್ಶ್‌ ಕಾಲೊನಿಗೆ ಚತುಷ್ಪಥ ‘ಭಾಗ್ಯ’ ಒಲಿಯಲಿದೆ.

ನ್ಯೂ ಆದರ್ಶ್‌ ಕಾಲೊನಿ ರಸ್ತೆಯು ನಗರದ ಗುಂಪಾ– ಚಿದ್ರಿ ರಿಂಗ್‌ರೋಡ್‌ನಿಂದ ಶಿವನಗರದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಈ ಭಾಗ ಈಗ ಸಾಕಷ್ಟು ಬೆಳೆದಿದೆ. ಕಲ್ಯಾಣ ಮಂಟಪ, ಶಾಲಾ–ಕಾಲೇಜು, ಮನೆ, ಮಳಿಗೆ, ಹೋಟೆಲ್‌ಗಳು ತಲೆ ಎತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ರಸ್ತೆಯು ಬೀದರ್‌ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹಗಲು–ರಾತ್ರಿ ವಾಹನ ದಟ್ಟಣೆ ಇರುತ್ತದೆ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕೆನ್ನುವುದು ಸ್ಥಳೀಯರ ಬೇಡಿಕೆಯಾಗಿತ್ತು. ಅದಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ.

ADVERTISEMENT

ಶುಕ್ರವಾರ ನ್ಯೂ ಆದರ್ಶ್‌ ಕಾಲೊನಿಯ ಹಾಳಾದ ರಸ್ತೆಯನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದ್ದಾರೆ. ಇದರ ಅಭಿವೃದ್ಧಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಪಾಲಿಕೆಗೆ ₹9 ಕೋಟಿ: ನ್ಯೂ ಆದರ್ಶ್‌ ಕಾಲೊನಿಯ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ ₹9 ಕೋಟಿ ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದ ಗೇಟ್‌ನಿಂದ ಹಳೆ ಆರ್‌ಟಿಒ ಕಚೇರಿಯ ಮುಖ್ಯರಸ್ತೆಗೆ ನೇರ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಇದಕ್ಕಾಗಿ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ರಸ್ತೆ ವಿಭಜಕದೊಂದಿಗೆ ಚತುಷ್ಪಥ ನಿರ್ಮಿಸಿ, ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.

ಇದರೊಂದಿಗೆ ಆಶಾ ಫಂಕ್ಷನ್‌ ಹಾಲ್‌ನಿಂದ ಚಿದ್ರಿ ರಿಂಗ್‌ ರೋಡ್‌ ವರೆಗಿನ ರಸ್ತೆ ಕೂಡ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈ ಸಂಬಂಧ ಯೋಜನಾ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ. ವರದಿ ಕೈಸೇರಿದ ನಂತರ ಟೆಂಡರ್‌ ಕರೆದು ಕೆಲಸ ಆರಂಭಿಸಲು ಉದ್ದೇಶಿಸಲಾಗಿದೆ.

‘ಕಾಲೊನಿಯ ಮನೆಗಳಿಂದ ನೀರು ಹರಿದು ಬಂದು ರಸ್ತೆ ಮೇಲೆ ಜಮಾಯಿಸುತ್ತಿರುವ ಕಾರಣ ಹಾಳಾಗಿದೆ. ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಒದಗಿಸುವುದು ಇದರ ಮುಖ್ಯ ಉದ್ದೇಶ. ಮಹಾನಗರ ಪಾಲಿಕೆಗೆ ಸೇರಿದ ರಸ್ತೆಯಿದು. ಆದರೆ, ಜಿಲ್ಲಾಧಿಕಾರಿ ಅವರು ಪಾಲಿಕೆಯೊಂದಿಗೆ ಸೇರಿಕೊಂಡು ಅಭಿವೃದ್ಧಿಪಡಿಸಬೇಕೆಂದು ಪಿಡಬ್ಲ್ಯೂಡಿಗೆ ಸೂಚನೆ ಕೊಟ್ಟಿದ್ದಾರೆ. ಎರಡೂ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ನಡೆಯಲಿದೆ’ ಎಂದು ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಕಾಮಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನ್ಯೂ ಆದರ್ಶ್‌ ಕಾಲೊನಿಯ ರಸ್ತೆ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಪಡಿಸಲು ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ. ಡಿಪಿಆರ್‌ಗೆ ಒಪ್ಪಿಗೆ ಸಿಕ್ಕ ನಂತರ ಕೆಲಸ ಆರಂಭವಾಗಲಿದೆ
ಶಿವಶಂಕರ್‌ ಕಾಮಶೆಟ್ಟಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿಡಬ್ಲ್ಯೂಡಿ

ಗುಂಪಾ ರಿಂಗ್‌ರೋಡ್‌ ತೆರವು ಯಾವಾಗ?

ನಗರದ ಗುಂಪಾ ರಿಂಗ್‌ರೋಡ್‌ನ ಸಿದ್ದಾರೂಢ ವೃತ್ತದಿಂದ ಹಡಪದ ಅಪ್ಪಣ್ಣ ವೃತ್ತದ ವರೆಗಿನ ರಸ್ತೆಯ ಒಂದು ಭಾಗ ಅತಿಕ್ರಮಣವಾಗಿದ್ದು ಇದರ ತೆರವು ಯಾವಾಗ ನಡೆಯುತ್ತದೆ? ವಾಹನಗಳ ಸುಗಮ ಸಂಚಾರ ಯಾವಾಗ ಸಾಧ್ಯವಾಗುತ್ತದೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಸ್ಥಳೀಯರ ಕೋರಿಕೆಯ ಮೇರೆಗೆ ಇತ್ತೀಚೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. 17ರಿಂದ 18 ವರ್ಷಗಳ ಹಿಂದೆ ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೀದರ್‌ ನಗರದಾದ್ಯಂತ ಅತಿಕ್ರಮಣ ತೆರವು ಕೈಗೆತ್ತಿಕೊಳ್ಳಲಾಗಿತ್ತು. ಗುಂಪಾ ರಿಂಗ್‌ರೋಡ್‌ನಲ್ಲೂ ತೆರವಿಗೆ ಮಾರ್ಕಿಂಗ್‌ ಮಾಡಲಾಗಿತ್ತು. ಈ ವೇಳೆ ಅವರು ವರ್ಗಾವಣೆಗೊಂಡಿದ್ದರು. ಬಳಿಕ ಆನಂತರ ಬಂದ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸದ ಕಾರಣ ನನೆಗುದಿಗೆ ಬಿದ್ದಿದೆ.