ADVERTISEMENT

ಸಾಲಿನ್ಸ್ ಆಸ್ಪತ್ರೆಯಲ್ಲಿ ನೇತ್ರ ತಪಾಸಣೆ, 60 ಜನರಿಗೆ ಕನ್ನಡಕ ಉಚಿತ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:16 IST
Last Updated 4 ಡಿಸೆಂಬರ್ 2020, 13:16 IST
ಬೀದರ್‌ನ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಮಾತನಾಡಿದರು
ಬೀದರ್‌ನ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಮಾತನಾಡಿದರು   

ಬೀದರ್: ಇಲ್ಲಿಯ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 110 ಆಟೊ ಚಾಲಕರ ಉಚಿತ ನೇತ್ರ ತಪಾಸಣೆ ನಡೆಸಲಾಯಿತು.

ದೃಷ್ಟಿದೋಷ ಕಂಡು ಬಂದ 60 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಕೆಲವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ಸಹ ನೀಡಲಾಯಿತು.

ಡಾ. ವೀರೇಂದ್ರ ಪಾಟೀಲ, ಇಮ್ಯಾನುವೆಲ್ ಡಿ, ಸುನೀಲ್ ಎಂ.ಕೆ., ಪ್ರದೀಪ ಎಂ, ಸವಿತಾ, ಸುನೀತಾ, ರವಿತಾ, ವಿದ್ಯಾವತಿ, ಜಗನ್ನಾಥ, ತುಳಜಪ್ಪ, ಜೋಸೆಫ್, ಸಿಮೋನ್ ಹಾಗೂ ಶಾಂತಕುಮಾರ ಮರೂರ ಅವರನ್ನು ಒಳಗೊಂಡ ತಂಡ ನೇತ್ರ ತಪಾಸಣೆ ನಡೆಸಿತು.

ADVERTISEMENT

ಜಿಲ್ಲೆಯ ಆಟೊ ಚಾಲಕರಿಗೆ ನೆರವಾಗಲು ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಹೇಳಿದರು.

ತಮ್ಮ ಕಾಯಕದ ಮೂಲಕವೇ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಆಟೊ ಚಾಲಕರು ಕಣ್ಣುಗಳ ಆರೋಗ್ಯ ಕಾಪಾಡಲು ಒತ್ತು ಕೊಡಬೇಕು. ಸಾಮಾನ್ಯ ದೃಷ್ಟಿದೋಷ, ಪೊರೆ, ನೇತ್ರವಾಯು ಮೊದಲಾದ ಸಮಸ್ಯೆಗಳು ಕಂಡು ಬಂದರೆ ಕೂಡಲೇ ನೇತ್ರ ತಜ್ಞರನ್ನು ಕಾಣಬೇಕು ಎಂದು ಸಲಹೆ ಮಾಡಿದರು.

ಡಾ. ಸಾಲಿನ್ಸ್ ಆಸ್ಪತ್ರೆಯು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯಲ್ಲಿ ಅಂಧತ್ವ ನಿವಾರಣೆಗೆ ಪ್ರಯತ್ನಿಸುತ್ತಿದೆ. ಬಡ ಜನರ ಅನುಕೂಲಕ್ಕಾಗಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿದೆ ಎಂದು ಹೇಳಿದರು.

ಡಾ. ಸಾಲಿನ್ಸ್ ಆಸ್ಪತ್ರೆಯು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದೆ. ಅಂಧತ್ವ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಅಧಿಕಾರಿ ಡಾ. ಮಹೇಶ ಬಿರಾದಾರ ನುಡಿದರು.

ಸಾಲಿನ್ಸ್ ನೇತ್ರ ಆಸ್ಪತ್ರೆ ವೈದ್ಯಕೀಯ ಸೇವೆ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ನಿರತವಾಗಿದೆ. ಬಡ, ಅನಾಥ ಮಕ್ಕಳು, ಕುಷ್ಠರೋಗಿಗಳಿಗೆ ಸಹಾಯಹಸ್ತ ಚಾಚುತ್ತಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಫಿಲೋಮನ್‍ರಾಜ್ ಪ್ರಸಾದ್ ಹೇಳಿದರು.

ಆಸ್ಪತ್ರೆಯಿಂದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಆರೋಗ್ಯದ ಕುರಿತು ಅರಿವು ಮೂಡಿಸಲಾಗುತ್ತಿದೆ.

ಶೇ 70 ರಷ್ಟು ನೇತ್ರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬ್ರಿಮ್ಸ್ ಆಸ್ಪತ್ರೆಯ ಡಾ. ರೋಧೆ ಮೆಟ್ಟಗೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಸಂಯೋಜಕಿ ಡಾ. ಪೂಜಾ, ಡಾ. ವೀರೇಂದ್ರ ಪಾಟೀಲ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಂಜು ಇದ್ದರು. ಕಾರ್ಯಕ್ರಮ ಸಂಯೋಜಕ ಪುಟ್ಟರಾಜ ಬಲ್ಲೂರಕರ್ ನಿರೂಪಿಸಿದರು. ಸುದೇಶ ಪ್ರೇಮ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.