ಮರಕಲ್(ಜನವಾಡ): ರೇಷ್ಮೆ ಕೃಷಿಯಿಂದ ರೈತರು ಉತ್ತಮ ಆದಾಯ ಪಡೆಯಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ರಾಜೇಂದ್ರಕುಮಾರ ಬಿ. ದೇವದುರ್ಗ ಹೇಳಿದರು.
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ರೇಷ್ಮೆ ಬೆಳೆಗಾರ ಮಹಮ್ಮದ್ ಸಲಾವೊದ್ದಿನ್ ಅವರ ಹಿಪ್ಪುನೇರಳೆ ತೋಟದಲ್ಲಿ ಗುರುವಾರ ನಡೆದ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎರಡು ಎಕರೆ ಹಿಪ್ಪುನೇರಳೆ ತೋಟ ಸ್ಥಾಪಿಸಿ, ವರ್ಷದಲ್ಲಿ 8 ರಿಂದ 10 ಬೆಳೆ ಬೆಳೆದು ₹6 ಲಕ್ಷದಿಂದ ₹7 ಲಕ್ಷ ಗಳಿಸಬಹುದು ಎಂದು ತಿಳಿಸಿದರು.
ರೇಷ್ಮೆ ಬೆಳೆಯಲು ಇಲಾಖೆಯಿಂದ ಸಿಗುವ ಪ್ರೋತ್ಸಾಹ ಧನ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನೆರವಿನ ಬಗ್ಗೆಯೂ ಮಾಹಿತಿ ನೀಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ಬಿ.ಜಿ. ಶೆಳಕೆ ಮಾತನಾಡಿ, ಬೇರೆ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಪಡೆಯಬಹುದಾದ ಬೆಳೆಯಾಗಿದೆ. ಪ್ರಸ್ತುತ ರೇಷ್ಮೆ ದ್ವಿತಳಿ ಗೂಡಿಗೆ ಕೆ.ಜಿ.ಗೆ. ₹650 ರಿಂದ ₹750 ಧಾರಣೆ ಇದೆ ಎಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ಬೀದರ್ ಕಚೇರಿ ವಿಜ್ಞಾನಿಗಳಾದ ಡಾ. ಶ್ರೀನಿವಾಸ್, ನಿರಂಜನ್ ಮೂರ್ತಿ ಅವರು ಹಿಪ್ಪುನೇರಳೆ ತೋಟದ ನಿರ್ವಹಣೆ, ರೋಗ ನಿಯಂತ್ರಣ ಕುರಿತು ವಿವರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಮ್ಮ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಇಲಾಖೆಯ ಅಧಿಕಾರಿ ಕಿರಣ ಬಲ್ಲೂರೆ, ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಕರೆಪ್ಪ ಪಾರಾ, ಗ್ರಾಮ ಘಟಕದ ಅಧ್ಯಕ್ಷ ಬಸಪ್ಪ, ಮುಖಂಡ ಎಂ.ಡಿ.ಲೈಕೊದ್ದಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.