ADVERTISEMENT

ಬೀದರ್: ಮನೆಗಳಿಂದ ಹೊರಗೆ ಬರದ ಜನ, ನಾಲ್ಕನೇ ಹಂತದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 15:53 IST
Last Updated 16 ಜುಲೈ 2020, 15:53 IST
ಬೀದರ್‌ನಲ್ಲಿ ಗುರುವಾರ ಬಾಣಂತಿಯನ್ನು ಮನೆಗೆ ಸಾಗಿಸುತ್ತಿದ್ದ ಆಟೊರಿಕ್ಷಾಗೆ ಪೊಲೀಸರು ಅನುವು ಮಾಡಿಕೊಟ್ಟರು/ ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ನಲ್ಲಿ ಗುರುವಾರ ಬಾಣಂತಿಯನ್ನು ಮನೆಗೆ ಸಾಗಿಸುತ್ತಿದ್ದ ಆಟೊರಿಕ್ಷಾಗೆ ಪೊಲೀಸರು ಅನುವು ಮಾಡಿಕೊಟ್ಟರು/ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್: ಜಿಲ್ಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬಂದಿರುವ ನಾಲ್ಕನೇ ಹಂತದ ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ತಮ್ಮ ಮನೆಗಳಲ್ಲೇ ಉಳಿದುಕೊಂಡು ಲಾಕ್‌ಡೌನ್‌ಗೆ ಬೆಂಬಲ ನೀಡಿದರು.

ಬೆಳಿಗ್ಗೆ ಹಾಲು ಹಾಗೂ ದಿನಪತ್ರಿಕೆಗಳ ವಿತರಣೆಗೆ ಯಾವುದೇ ಸಮಸ್ಯೆಯಾಗಲಿಲ್ಲ. ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವ್ಯಾಪಾರಸ್ಥರು ಓಣಿ ಓಣಿಗಳಿಗೆ ತೆರಳಿ ಕೈಗಾಡಿಗಳ ಮೇಲೆ ಬಾಳೆಹಣ್ಣು, ದಾಳಿಂಬೆ ಮಾರಾಟ ಮಾಡಿದರು.
ನಗರದ ವಿವಿಧೆಡೆ ವ್ಯಾಪಾರಸ್ಥರು ತರಕಾರಿ ಮಾರಾಟಕ್ಕೆ ಕುಳಿತಿದ್ದರೂ ಗ್ರಾಹಕರು ಅವರತ್ತ ಸುಳಿಯಲಿಲ್ಲ. ಮಧ್ಯಾಹ್ನದ ವರೆಗೂ ಗ್ರಾಹಕರಿಗಾಗಿ ಕಾಯ್ದು ಬಿಸಿಲಿಗೆ ತರಕಾರಿ ಬಾಡಲು ಆರಂಭಿಸಿದ ನಂತರ ಮನೆಗಳಿಗೆ ತೆರಳಿದರು.

ಎಲೆಕ್ಟ್ರಾನಿಕ್‌, ಎಲೆಕ್ಟ್ರಿಕಲ್, ಬಟ್ಟೆ ಅಂಗಡಿ, ಬೇಕರಿ, ಕೂಲ್‌ಡ್ರಿಂಕ್ಸ್ ಇನ್ನಿತರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಟೀ ಸ್ಟಾಲ್‌, ಬೀದಿ ಬದಿಯ ಟಿಫನ್‌ ಸೆಂಟರ್‌ಗಳಿಗೂ ತೆರೆಯಲು ಅವಕಾಶ ಕಲ್ಪಿಸಿರಲಿಲ್ಲ. ದೊಡ್ಡ ಹೋಟೆಲ್‌ ಹಾಗೂ ಖಾನಾವಳಿಗಳಿಂದ ಪಾರ್ಸಲ್‌ ಒಯ್ಯಲು ಅವಕಾಶ ಮಾಡಿಕೊಡಲಾಗಿತ್ತು. ಸಂಜೆ ವೇಳೆಗೆ ಇವು ಸಹಿತ ಬಾಗಿಲು ಮುಚ್ಚಿದವು.

ADVERTISEMENT

ಆಸ್ಪತ್ರೆ, ರಕ್ತನಿಧಿ ಕೇಂದ್ರಗಳು, ರಕ್ತ ತಪಾಸಣೆ ಕೇಂದ್ರಗಳು, ಮೆಡಿಕಲ್‌ ಹಾಗೂ ಕಿರಾಣಿಗಳು ತೆರೆದುಕೊಂಡಿದ್ದವು.

ಜನ ಮನೆಗಳಿಂದ ಹೊರಗೆ ಬರಲಿಲ್ಲ. ಹೀಗಾಗಿ ನಗರದ ಜನನಿಬಿಡ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಡಾ.ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಹರಳಯ್ಯ ವೃತ್ತ, ಮಡಿವಾಳ ವೃತ್ತ, ಮೈಲೂರ್‌ ಕ್ರಾಸ್‌, ಚಿದ್ರಿ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಪೊಲೀಸ್‌ ವಾಹನಗಳು ನಗರದಲ್ಲಿ ಗಸ್ತು ತಿರುಗುತ್ತಿದ್ದರಿಂದ ಜನರು ಮನೆಗಳಿಂದ ಹೊರಗೆ ಬರಲು ಹಿಂಜರಿದರು.

ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಕೆಲ ಯುವಕರು ಬೈಕ್‌ಗಳ ಮೇಲೆ ನಗರದಲ್ಲಿ ಸುತ್ತಾಡಿದರು. ಪೊಲೀಸರು ಕೆಲವರಿಗೆ ಬೆತ್ತದ ರುಚಿ ತೋರಿಸಿದರು. ಆಸ್ಪತ್ರೆಯಿಂದ ಆಟೊರಿಕ್ಷಾದಲ್ಲಿ ಮನೆಗೆ ಹೊರಟಿದ್ದ ಬಾಣಂತಿಗೆ ಪೊಲೀಸರು ಅನುವು ಮಾಡಿಕೊಟ್ಟರು.

ಗಡಿಯಲ್ಲಿ ಬಂದೋಬಸ್ತ್

ಅಂತರ ರಾಜ್ಯ ಗಡಿಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಅನುಮತಿ ಪಡೆಯದೇ ಜಿಲ್ಲೆಯೊಳಗೆ ಬರುತ್ತಿದ್ದ ನೆರೆಯ ರಾಜ್ಯಗಳ ವಾಹನಗಳನ್ನು ಮರಳಿ ಕಳಿಸಲಾಯಿತು. ಅಗತ್ಯ ಹಾಗೂ ವೈದ್ಯಕೀಯ ಕಾರಣಗಳಿಗೆ ಬಂದವರಿಗೆ ಪ್ರವೇಶ ಕಲ್ಪಿಸಲಾಯಿತು. ಇದಕ್ಕೂ ಮೊದಲು ಅವರ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ ಪೂರ್ಣ ಮಾಹಿತಿ ಪಡೆಯಲಾಯಿತು.

ಬಾರದ ಪ್ರಯಾಣಿಕರು

ಬೀದರ್–ಕಲಬುರ್ಗಿ ನಡುವೆ ಗುರುವಾರ ಕೇವಲ ನಾಲ್ಕು ಬಸ್‌ಗಳು ಸಂಚರಿಸಿದವು. ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಕಚೇರಿಯಲ್ಲಿ ಕೆಲಸ ಇದ್ದವರು ಮಾತ್ರ ಪ್ರಯಾಣ ಮಾಡಿದರು. ಬೀದರ್‌ ನಗರದಲ್ಲಿ ನಗರ ಸಾರಿಗೆಯ ಬಸ್‌ ನಾಲ್ಕು ಟ್ರಿಪ್ ಹೋಗಿ ಬಂದವು. ಪ್ರಯಾಣಿಕರ ಕೊರತೆಯಿಂದಾಗಿ ಸಂಜೆ ನಗರ ಸಾರಿಗೆ ಸೇವೆಯನ್ನು ನಿಲ್ಲಿಸಲಾಯಿತು.

ಬೆಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ದೂರದ ನಗರಗಳಿಗೆ ತೆರಳುವ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಚಾಲಕರು ಹಾಗೂ ನಿರ್ವಾಹಕರು ಬೆಳಿಗ್ಗೆಯೇ ಬಸ್‌ ನಿಲ್ದಾಣದಲ್ಲಿ ಸೇರಿದ್ದರು. ಪ್ರಯಾಣಿಕರು ಬಾರದ ಕಾರಣ ಅನೇಕ ಊರುಗಳಿಗೆ ಬಸ್‌ಗಳು ಹೊರಡಲಿಲ್ಲ.

‘ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಜಿಲ್ಲಾಡಳಿತ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಪ್ರಯಾಣಿಕರು ಬಾರದ ಕಾರಣ ಅನೇಕ ಮಾರ್ಗಗಳ ಬಸ್‌ ಸಂಚಾರ ಸ್ಥಗಿತಗೊಳಿಸಬೇಕಾಯಿತು’ ಎಂದು ಎನ್‌ಇಕೆಆರ್‌ಟಿಸಿ ಬೀದರ್‌ ವಿಭಾಗೀಯ ಸಂಚಾಲಕ ಚಂದ್ರಕಾಂತ ಫುಲೇಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.