ADVERTISEMENT

ಕಮಲನಗರ | ಬರಡು ಭೂಮಿಗೆ ಹಸಿರು ಹೊದಿಕೆ

ಕೆರೆಯ ಸದುಪಯೋಗ ಪಡೆದ ಗ್ರಾಮಸ್ಥರು

ಚಂದ್ರಕಾಂತ ಮಸಾನಿ
Published 5 ಜೂನ್ 2020, 4:26 IST
Last Updated 5 ಜೂನ್ 2020, 4:26 IST
ಬೀದರ್‌ ಜಿಲ್ಲೆ ಕಮಲನಗರ ತಾಲ್ಲೂಕಿನ ಅಕನಾಪುರ ಶಿವಾರದಲ್ಲಿ ಬೆಳೆಸಲಾದ ಮರಗಳು
ಬೀದರ್‌ ಜಿಲ್ಲೆ ಕಮಲನಗರ ತಾಲ್ಲೂಕಿನ ಅಕನಾಪುರ ಶಿವಾರದಲ್ಲಿ ಬೆಳೆಸಲಾದ ಮರಗಳು   

ಬೀದರ್: ರಾಜ್ಯದ ಗಡಿಯಲ್ಲಿರುವ ಅಕನಾಪುರ, ಕಮಲನಗರ ತಾಲ್ಲೂಕಿನ ಒಂದು ಪುಟ್ಟಹಳ್ಳಿ. ಸುತ್ತಲೂ ಬರಡು ಭೂಮಿ ಇದ್ದ ಕಾರಣ 2008ರ ವರೆಗೂ ಇಲ್ಲಿ ನೀರಿನ ಸಮಸ್ಯೆ ಇತ್ತು. ಅಲ್ಲೊಂದು ಇಲ್ಲೊಂದು ಜಾಲಿ ಮರಗಳು ಮಾತ್ರ ಕಾಣಸಿಗುತ್ತಿದ್ದವು. ಪ್ರತಿ ವರ್ಷ ಮಳೆಗಾಲ ಮುಗಿದ ತಿಂಗಳಲ್ಲೇ ನೀರಿನ ಸಮಸ್ಯೆ ಕಾಡುತ್ತಿತ್ತು. ರೈತರೊಬ್ಬರಿಂದ ಪ್ರೇರಣೆ ಪಡೆದ ಗ್ರಾಮಸ್ಥರು ಗ್ರಾಮದ ಶಿವಾರದಲ್ಲಿ ಗಿಡ ಮರಗಳನ್ನು ಬೆಳೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಮೃದ್ಧ ಜೀವನ ಸಾಗಿಸಿದ್ದಾರೆ.

ಗ್ರಾಮಸ್ಥರು ಗ್ರಾಮದಿಂದ ಮೂರು ಕಿ.ಮೀ. ಅಂತರದಲ್ಲಿರುವ ಹೊಲದಲ್ಲಿನ ಬಾವಿಯಿಂದ ಕುಡಿಯುವ ನೀರು ಹೊತ್ತು ತರುತ್ತಿದ್ದರು. ಬೇಸಿಗೆ ಬಂದಾಗ ನರಕಯಾತನೆ ಶುರುವಾಗುತ್ತಿತ್ತು. ಇದನ್ನು ಮನಗಂಡು 2008ರಲ್ಲಿ ಅಂದಿನ ಔರಾದ್‌ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು ಗ್ರಾಮದ ಹೊರವಲಯದಲ್ಲಿ ಕೆರೆಯೊಂದನ್ನು ನಿರ್ಮಿಸಿದರು. ಎಂಟು ವರ್ಷಗಳ ವರೆಗೂ ನೀರಿನ ಸಮಸ್ಯೆಯಾಗಲಿಲ್ಲ. ಆದರೆ, ಕೃಷಿ, ತೋಟಗಾರಿಕೆಗೆ ಮಳೆಯನ್ನೇ ಆಶ್ರಯಿಸಬೇಕಾಗಿತ್ತು. ಅಂತರ್ಜಲಮಟ್ಟ ಬಹುಬೇಗ ಕುಸಿಯುತ್ತಿತ್ತು.

ಅಕನಾಪುರದ ಬನ್ನುದಾಸ ಪಾಟೀಲ 2016ರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೊಲದಲ್ಲಿ ಶ್ರೀಗಂಧ ಸಸಿಗಳನ್ನು ನೆಟ್ಟು ಕೆರೆಯ ನೀರನ್ನು ಹೊತ್ತು ತಂದು ಮರಗಳಿಗೆ ಹಾಕಿ ಬೆಳೆಸಿದರು. ಅವು ಚೆನ್ನಾಗಿ ಬೆಳೆದಾಗ ಮರು ವರ್ಷ ಮತ್ತಷ್ಟು ಗಿಡಗಳನ್ನು ಬೆಳೆಸಿದರು. ಈ ಮರಗಳ ಮಧ್ಯೆಯೇ ಗಾಳಿಯ ರಕ್ಷಣೆ ಬಳಸಿಕೊಂಡು ಪಪ್ಪಾಯ ಹಾಗೂ ಸೀತಾಫಲ ಸಸಿಗಳನ್ನೂ ಬೆಳೆಸಿದರು.

ADVERTISEMENT

ಬನ್ನುದಾಸ ಪಾಟೀಲರಿಂದ ಪ್ರೇರಣೆ ಪಡೆದ ಗ್ರಾಮದ ಅನೇಕ ಜನರು ತಮ್ಮ ಹೊಲಗಳ ಬದು, ಬರಡು ಜಮೀನು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಗಿಡ ಮರಗಳನ್ನು ಬೆಳೆಸಿದರು. ಹೀಗಾಗಿ ಇಂದು ಗ್ರಾಮಕ್ಕೆ ಹಸಿರಿನ ಹೊದಿಕೆ ಬಿದ್ದಿದೆ. ಹೆಬ್ಬೇವು ಬೆಳೆಸಿರುವ ಕಾರಣ ಹೊಲಕ್ಕೆ ಗೊಬ್ಬರ, ಜಾನುವಾರುಗಳಿಗೆ ಮೇವು ಕೂಡ ದೊರಕಿದೆ. ಗ್ರಾಮಸ್ಥರು ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.

‘ಅಕನಾಪುರದ 12 ಎಕರೆ ಪ್ರದೇಶದಲ್ಲಿ ಶ್ರೀಗಂಧ, 15 ಎಕರೆ ಪ್ರದೇಶದಲ್ಲಿ ಪಪ್ಪಾಯ, ಬೇವು, ಹೆಬ್ಬೇವು, ಸೀತಾಫಲ ಸೇರಿ ಒಟ್ಟು 30 ಎಕರೆ ಪ್ರದೇಶದಲ್ಲಿ ಮರಗಳನ್ನು ಬೆಳೆಯಲಾಗಿದೆ. ಗಡಿಯಾಚೆಯ ಮಹಾರಾಷ್ಟ್ರದಲ್ಲೂ 30 ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆಸಿದ್ದೇವೆ’ ಎಂದು ರೈತ ಭಾನುದಾಸ ಪಾಟೀಲ ಹೇಳುತ್ತಾರೆ.

‘ಮಹಾರಾಷ್ಟ್ರದ ಗಡಿಯಿಂದ ಕೇವಲ ಒಂದು ಕಿಲೋ ಮೀಟರ್‌ ಅಂತರದಲ್ಲಿರುವ ಗ್ರಾಮದಲ್ಲಿ 40 ಮನೆಗಳಿವೆ. ಗ್ರಾಮದ ಜನಸಂಖ್ಯೆ 250, ಮತದಾರರ ಸಂಖ್ಯೆ 175 ಇದೆ. ಗ್ರಾಮದಲ್ಲಿ ನಿರ್ಮಿಸಿದ ಒಂದು ಕೆರೆ ಹಾಗೂ ರೈತ ಬನ್ನುದಾಸ ಪಾಟೀಲರ ಪ್ರೇರಣೆಯಿಂದ ಗ್ರಾಮದ ತುಂಬ ಗಿಡ ಮರಗಳನ್ನು ಕಾಣಬಹುದಾಗಿದೆ’ ಎಂದು ದಾಬಕಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಚವಾಣ್ ಹೇಳುತ್ತಾರೆ.

12 ವರ್ಷಗಳ ಹಿಂದೆ ಗ್ರಾಮಸ್ಥರು ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿರುವ ತೆರೆದ ಬಾವಿಯಿಂದ ನೀರು ಹೊತ್ತು ತರುತ್ತಿದ್ದರು. ಸರ್ಕಾರ ನಿರ್ಮಿಸಿದ ಕೆರೆ ಹಾಗೂ ಗ್ರಾಮಸ್ಥರು ಸಸಿ ನೆಟ್ಟು ತೋರಿಸಿದ ಪರಿಸರ ಕಾಳಜಿಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಗ್ರಾಮಸ್ಥರು 2016ರಿಂದ ಗೋಧಿ, ಕಡಲೆ ಇನ್ನಿತರ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

ಅಕನಾಪುರದ ಕೆರೆಯಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಉದ್ಯೋಗ ಖಾತರಿ ಯೋಜನೆಯಡಿ 171 ಕಾರ್ಮಿಕರ ನೆರವಿನಿಂದ ಹೂಳೆತ್ತಲಾಗುತ್ತಿದೆ. ಈ ವರ್ಷ ಪ್ರತಿ ಮನೆಗೆ ಎರಡು ಗಿಡಗಳನ್ನು ನೆಟ್ಟು ಅದನ್ನು ಬೆಳೆಸುವ ಸಂಕಲ್ಪ ಮಾಡಿ ಪರಿಸರ ಸಂರಕ್ಷಣೆಗೆ ಪಣ ತೊಡಲಾಗಿದೆ ಎಂದು ಕೃಷ್ಣಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.