ಔರಾದ್: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಬಾವಲಗಾಂವ್ ಗ್ರಾಮಸ್ಥರ ಬದುಕು ಬೀದಿಗೆ ಬಂದಿದೆ.
ಆ.18ರಂದು ರಾತ್ರಿ 300 ಮಿಲಿ ಮೀಟರ್‌ಗೂ ಅಧಿಕ ಹೆಚ್ಚು ಮಳೆ ಸುರಿದು ಬಾವಲಗಾಂವ್ ಗ್ರಾಮದಲ್ಲಿನ ಸಣ್ಣ ನೀರಾವರಿ ಇಲಾಖೆ ಕೆರೆಯ ಕೋಡಿ ಒಡೆದು ಇಡೀ ಊರಿಗೆ ಊರೇ ತತ್ತರಿಸಿ ಹೋಗುವಂತೆ ಮಾಡಿದೆ. ಕೆರೆ ಪಕ್ಕದಲ್ಲಿನ ಜ್ಞಾನೋಬಾ ಪಂಢರಿ ಹಾಗೂ ಜನಾರ್ದನ ಪಂಢರಿ ಎಂಬ ರೈತರ ಐದು ಎಕರೆ ಜಮೀನು ನಾಮಾವಶೇಷವಾಗಿದೆ..
ಈ ರೈತರು ತಮ್ಮ ಕುಟುಂಬದ ಜೀವೋಪಾಯಕ್ಕಾಗಿ ಈ ಜಮೀನಿನಲ್ಲಿ ಧಾನ್ಯ ಹಾಗೂ ತರಕಾರಿ ಬೆಳೆಯುತ್ತಿದ್ದರು. ಆದರೆ ಈ ಮೇಘಸ್ಫೋಟದಲ್ಲಿ ಕೃಷಿ ಭೂಮಿ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಈಗ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ರೈತ ಜ್ಞಾನೋಬಾ ಕಣ್ಣೀರು ಹಾಕುತ್ತಿದ್ದಾರೆ.
ಜ್ಞಾನೋಬಾ ಅವರಂತಹ ಅನೇಕ ರೈತರು ಸಂತ್ರಸ್ತರಾಗಿದ್ದಾರೆ. ಕೆರೆ ಕೋಡಿ ಒಡೆದು ನೀರು ಇಡೀ ಊರಿಗೆ ಸುತ್ತುವರೆದಿದೆ. ವಾರಗಟ್ಟಲೇ ನಾವು ಪ್ರವಾಹದ ಭೀತಿಯಲ್ಲಿ ಬದುಕಬೇಕಾಯಿತು ಎನ್ನುತ್ತಾರೆ ಬಾವಲಗಾಂವ್ ನಿವಾಸಿಗಳು.
ಬಾವಲಗಾಂವ್‌ನಲ್ಲಿ ಅಂದು ಸುರಿದ ಭಾರಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. 50 ಮನೆಗಳಿಗೆ ಹಾನಿಯಾಗಿದೆ. 30 ಮನೆಗಳಿಗೆ ಈಗಾಗಲೇ ಪರಿಹಾರ ಕೊಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೆರೆ ಕೋಡಿ ಒಡೆದು ಹಾನಿಯಾದ ರೈತರಿಗೆ ವಿಶೇಷ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಬೆಳೆ ಹಾನಿ ಸರ್ವೆ ನಡೆಯುತ್ತಿದ್ದು, ಹಾನಿಯಾದ ಎಲ್ಲ ರೈತರಿಗೆ ಪರಿಹಾರ ಕೊಡಿಸುತ್ತೇವೆ ಎಂದಿದ್ದಾರೆ.ಮಹೇಶ ಪಾಟೀಲ, ತಹಶೀಲ್ದಾರ್ ಮಹೇಶ
ಈ ಬಾರಿ ಸುರಿದ ಮಳೆಯಿಂದ ಬಾವಲಗಾಂವ್ ರೈತರು ಹೆಚ್ಚಿನ ತೊಂದರೆ ಎದುರಿಸಿದ್ದಾರೆ. ಕೆರೆ ಕೋಡಿ ಒಡೆದು ಭೂಮಿ ಕೊಚ್ಚಿಕೊಂಡು ಹೋಗಿದೆ. ಈ ಕುರಿತು ಸರ್ಕಾರಕ್ಕೂ ಮಾಹಿತಿ ನೀಡಿದ್ದೇವೆ.ಮಹೇಶ ಪಾಟೀಲ ತಹಶೀಲ್ದಾರ್ ಔರಾದ್
ಕೆರೆ ಕೋಡಿ ಒಡೆದು ನಮ್ಮ 5 ಎಕರೆ ಜಮೀನು ಮಣ್ಣಿನ ಜತೆ ಕೊಚ್ಚಿ ಹೋಗಿದೆ. ಕೃಷಿ ಮೇಲೆ ಬದುಕುತ್ತಿರುವ ನಮಗೆ ಈಗ ಏನು ಮಾಡಬೇಕು ಎಂದು ತೋಚದಾಗಿದೆ.ಜ್ಞಾನೋಬಾ ಬಾವಲಗಾಂವ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.