ADVERTISEMENT

ಬಸವಕಲ್ಯಾಣ: ಕೋಟೆಯಲ್ಲಿ ಎಲ್ಲೆಲ್ಲೂ ಹುಲ್ಲು, ಗೋಡೆಗಳಲ್ಲಿ ಬಿರುಕು

ನಿರ್ಲಕ್ಷ ಮತ್ತು ಅನಾದರಕ್ಕೆ ಒಳಗಾದ ಐತಿಹಾಸಿಕ ಮಹತ್ವದ ಬಸವಕಲ್ಯಾಣದ ಸ್ಮಾರಕ

ಮಾಣಿಕ ಆರ್ ಭುರೆ
Published 9 ಮಾರ್ಚ್ 2025, 7:13 IST
Last Updated 9 ಮಾರ್ಚ್ 2025, 7:13 IST
<div class="paragraphs"><p>ಬಸವಕಲ್ಯಾಣದ ಕೋಟೆಯೊಳಗಿನ ನೃತ್ಯ ಸಭಾಂಗಣ ಹಾಗೂ ದರ್ಬಾರ ಹಾಲ್‌ನಲ್ಲಿ ಎಲ್ಲೆಡೆ ಹುಲ್ಲು ಮುಳ್ಳುಕಂಟಿ ಬೆಳೆದಿರುವುದು</p></div>

ಬಸವಕಲ್ಯಾಣದ ಕೋಟೆಯೊಳಗಿನ ನೃತ್ಯ ಸಭಾಂಗಣ ಹಾಗೂ ದರ್ಬಾರ ಹಾಲ್‌ನಲ್ಲಿ ಎಲ್ಲೆಡೆ ಹುಲ್ಲು ಮುಳ್ಳುಕಂಟಿ ಬೆಳೆದಿರುವುದು

   

ಬಸವಕಲ್ಯಾಣ: ನಗರದ ಐತಿಹಾಸಿಕ ಕೋಟೆಯೊಳಗೆ ಎಲ್ಲೆಡೆ ಆಳೆತ್ತರಕ್ಕೆ ಹುಲ್ಲು ಬೆಳೆದಿದ್ದು ಹಾವು, ಚೇಳಿನ ಕಾಟವಿದೆ. ಕೆಲ ಗೋಡೆಗಳಲ್ಲಿ ಗಿಡ, ಮುಳ್ಳುಕಂಟಿಗಳು ಬೆಳೆದು ಬಿರುಕು ಬಿಟ್ಟಿದ್ದರಿಂದ ದೂರದಿಂದ ಬರುವ ಶಾಲಾ ಮಕ್ಕಳು ಮತ್ತು ಪ್ರವಾಸಿಗರು ಭಯಗೊಂಡು ಒಳಗಿನ ಎಲ್ಲವನ್ನೂ ನೋಡದೆ ಹಿಂದಿರುಗುತ್ತಿದ್ದಾರೆ.

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿ ಈ ಕೋಟೆಯಲ್ಲಿಯೇ ಕಾರ್ಯಗೈದಿದ್ದರು. ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಸರ್ಕಾರದ ಪ್ರತಿ ಕಚೇರಿಯಲ್ಲೂ ಅವರ ಭಾವಚಿತ್ರ ಅಳವಡಿಸಲಾಗಿದೆ. ಆದರೆ ಅವರು ಆಸೀನರಾಗಿ ಜನಕಲ್ಯಾಣದ ಯೋಜನೆಗಳನ್ನು ಜಾರಿಗೆ ತಂದಿದ್ದ ಸ್ಥಳದ ಜೀರ್ಣೋದ್ಧಾರಕ್ಕೆ ಮಾತ್ರ ನಿರ್ಲಕ್ಷ ತೋರಲಾಗಿದೆ. ಈ ರೀತಿಯ ಅನಾದಾರ ಸರಿಯೇ ಎಂದು ಇಲ್ಲಿಗೆ ಬಂದವರೆಲ್ಲ ಪ್ರಶ್ನಿಸುವಂತಾಗಿದೆ.

ADVERTISEMENT

ಕೆಲಸಲ ಅದೂ ವರ್ಷಕ್ಕೊಮ್ಮೆ ಶ್ರಮದಾನದ ಮೂಲಕ ಕೋಟೆಯ ಸ್ವಚ್ಛತಾ ಕಾರ್ಯ ನಡೆದಿದೆ. ಆದರೆ ಇದಕ್ಕಾಗಿ ಕಾಯಂ ವ್ಯವಸ್ಥೆ ಆಗಿಲ್ಲ. ಪ್ರತಿದಿನವೂ ಕಸ ತೆಗೆಯುವುದಿಲ್ಲ. ಗಿಡ, ಮುಳ್ಳುಕಂಟೆಗಳನ್ನು ಕಡಿಯುವುದಿಲ್ಲ. ಹೀಗಾಗಿ ಅನೇಕ ಕಡೆ ಗೋಡೆಯ ಮಣ್ಣು, ಕಲ್ಲುಗಳು ಕುಸಿಯುತ್ತಿವೆ. ಅಲ್ಲಲ್ಲಿ ದೊಡ್ಡ ರಂಧ್ರಗಳು ಕಾಣುತ್ತಿವೆ. ಮುಂದೆ ಹೆಜ್ಜೆ ಇಟ್ಟರೆ ಏನಾಗುತ್ತದೋ, ಮೈಮೇಲೆ ಏನು ಬೀಳುತ್ತದೋ ಎಂದು ಪ್ರವಾಸಿಗರು ಹೆದರುವಂತಾಗಿದೆ.

ಪ್ರಮುಖ ಆಕರ್ಷಣೀಯ ಕಟ್ಟಡಗಳಾದ ದರ್ಬಾರ್ ಹಾಲ್, ರಂಗೀನ್ ಮಹಲ್, ನೃತ್ಯ ಸಭಾಂಗಣ, ರಾಜ್ ಮಹಲ್, ರಾಣಿ ಮಹಲ್, ನೌಗಜ್ ತೋಫ್ ಬುರೂಜ್, ಕಡಕ್ ಬಿಜಲಿ ತೋಫ್ ಬುರೂಜ್, ಮೋಟ್ ಕಿ ಬಾವಡಿ ಸ್ಥಳಗಳಲ್ಲಿ ಹುಲ್ಲು ಬೆಳೆದಿದೆ. ಇಲ್ಲೆಲ್ಲ ಹೋಗುವುದಕ್ಕೆ ಇರುವ ದಾರಿಗಳಲ್ಲೂ ಹುಲ್ಲು, ಮುಳ್ಳು ಕಂಟಿಗಳಿವೆ. ಆದರೂ, ಸಂಬಂಧಿತರು ಕಣ್ಣೆತ್ತಿ ನೋಡುತ್ತಿಲ್ಲ.

ಕೋಟೆಯನ್ನು 11 ನೇ ಶತಮಾನದಲ್ಲಿ ಚಾಲುಕ್ಯರು ಕಟ್ಟಿದ್ದಾರೆ. ಯುದ್ಧಗಳು ಸಂಭವಿಸಿ ಅನೇಕ ಸಲ ಇದರ ಪುನರ್ ನಿರ್ಮಾಣವಾಗಿರುವುದು ಬದಲಾದ ಗೋಡೆಗಳ ರಚನೆ ನೋಡಿದಾಗ ಗೊತ್ತಾಗುತ್ತದೆ. ಮೂರು ಸುತ್ತಿನ ಕೋಟೆ ಇದಾಗಿದೆ. ದಕ್ಷಿಣಾಭಿಮುಖವಾದ ಭವ್ಯ ಪ್ರವೇಶ ದ್ವಾರದಿಂದ ಪ್ರವೇಶಿಸಿ ಕಂದಕದಲ್ಲಿನ ಚಿಕ್ಕ ದ್ವಾರದಿಂದ ಮೇಲಕ್ಕೆ ಏರುತ್ತ ಹೋದಂತೆ ವಿವಿಧ ಕಟ್ಟಡಗಳು, ಮಹಲುಗಳು ಎದುರಾಗುತ್ತವೆ. ಸುತ್ತು ಬಳಸಿ ಆರು ಒಳದ್ವಾರಗಳಿಂದ ಹಾದು ಹೋದಾಗ ಇದರ ನೆತ್ತಿ ತಲುಪಬಹುದು. ಇಲ್ಲಿ ಎರಡು ವರ್ಷದ ಹಿಂದೆ 100 ಅಡಿ ಎತ್ತರದ ಕಂಬ ನಿಲ್ಲಿಸಿ ರಾಷ್ಟ್ರಧ್ವಜವನ್ನು ನಿರಂತರವಾಗಿ ಹಾರಾಡಿಸಲಾಗುತ್ತಿದೆ. ಧ್ವಜ ಕಟ್ಟೆಯ ಅಕ್ಕಪಕ್ಕದಲ್ಲೂ ಹುಲ್ಲು ಇದೆ.

ಹಾಗೆ ನೋಡಿದರೆ, ದಕ್ಷಿಣ ಭಾರತದಲ್ಲಿನ ಆಳರಸರ ಕೇಂದ್ರಬಿಂದು ಇದಾಗಿತ್ತು. ಅನೇಕ ರಾಜ ಮನೆತನದವರು ಇದನ್ನು ವಶಕ್ಕೆ ಪಡೆದು ಆಳ್ವಿಕೆ ನಡೆಸಿದ್ದಾರೆ. ಆದರೂ, ಭಾರತ ಸ್ವಾತಂತ್ರ್ಯದ ನಂತರದಲ್ಲಿ ಈ ಕೋಟೆ ಅಜ್ಞಾತವಾಗಿಯೇ ಉಳಿದಿದೆ. ಸಂಬಂಧಿತರ ಅವಕೃಪೆಯ ಕಾರಣ ಇಲ್ಲಿನ ಕೆಲ ಮಹತ್ವದ ಅವಶೇಷಗಳು ಮಣ್ಣಿನಲ್ಲಿ ಹೂತಿವೆ. ಕೆಲವೆಡೆ ಗೋಡೆ ಕುಸಿತದಿಂದ ಹಾನಿಯೂ ಆಗಿದೆ. ಪ್ರಾಚ್ಯವಸ್ತು ಇಲಾಖೆಯವರಾಗಲಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರಾಗಲಿ ಈ ಕಡೆ ಹೆಚ್ಚಿನ ಗಮನ ನೀಡಿಲ್ಲ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮಹತ್ವದ ಸ್ಮಾರಕ ಹೇಳಹೆಸರಿಲ್ಲದಂತಾಗುವುದು ನಿಶ್ಚಿತ.

ಬಸವಕಲ್ಯಾಣವು ಐತಿಹಾಸಿಕ ಸ್ಥಳವಾಗಿದ್ದು ಶರಣರ ನಾಡು ಎಂದೇ ಗುರುತಿಸಲ್ಪಡುತ್ತದೆ. ಇಲ್ಲಿನ ಬಸವಾದಿ ಶರಣರ ಸ್ಮಾರಕಗಳ ಹಾಗೂ ಮತ್ತಿತರೆ ಮಹತ್ವದ ಸ್ಥಳಗಳ ಪರಿಸ್ಥಿತಿ, ಸಮಸ್ಯೆಯನ್ನು ಅವಲೋಕಿಸುವ `ಕಲ್ಯಾಣ ನಾಡು- ಸ್ಥಿತಿಗತಿ' ಸರಣಿ ಅಂಕಣ ಪ್ರಜಾವಾಣಿಯಲ್ಲಿ ಇಂದಿನಿಂದ ಪ್ರಕಟ ಆಗಲಿದೆ. ಅಂಕಣದ ಪ್ರಥಮ ಬರಹ ಇಲ್ಲಿದೆ.
ಬಸವಕಲ್ಯಾಣದ ಕೋಟೆಯ ಗೋಡೆಗಳಲ್ಲಿ ಹುಲ್ಲು ಮತ್ತು ಗಿಡಕಂಟಿಗಳು ಬೆಳೆದಿರುವುದು
ಬಸವಕಲ್ಯಾಣದ ಕೋಟೆಯ ಗೋಡೆಗಳಲ್ಲಿ ಹುಲ್ಲು ಮತ್ತು ಗಿಡಕಂಟೆಗಳು ಬೆಳೆದಿರುವುದು
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಧ್ವನಿ-ಬೆಳಕಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಜೀರ್ಣೋದ್ಧಾರ ಮತ್ತಿತರೆ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಮಂಜೂರಾಗಿಲ್ಲ.
-ಜಗನ್ನಾಥರೆಡ್ಡಿ ಆಯುಕ್ತ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ ಅವರು ಮಹಾಮಂತ್ರಿಯಾಗಿ ಕಾರ್ಯಗೈದಿದ್ದ ಕೋಟೆಯ ಸಂರಕ್ಷಣೆ ಸರ್ಕಾರದ ಪ್ರಥಮ ಕರ್ತವ್ಯವಾಗಿದೆ.
ಗುರುನಾಥ ಗಡ್ಡೆ ಅಧ್ಯಕ್ಷ ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು
ಕೋಟೆ ವೀಕ್ಷಣೆಗೆ ಬರುವ ದೂರದೂರದ ಶಾಲಾ ಮಕ್ಕಳು ಒಳಗೆ ಎಲ್ಲೆಂದರಲ್ಲಿ ಹುಲ್ಲು ಇರುವುದರಿಂದ ಮತ್ತು ಹಾವು ಚೇಳಿನ ಕಾಟದಿಂದ ಭಯಪಡುತ್ತಿದ್ದಾರೆ
ದಿಲೀಪಗಿರಿ ಗೋಸಾವಿ ಅಧ್ಯಕ್ಷ ಗೋಕುಳ ಶಿಕ್ಷಣ ಸಂಸ್ಥೆ
ಸಂಶೋಧನೆ ಮತ್ತು ಉತ್ಖನನ ಕೈಗೊಂಡು ಬಸವಣ್ಣನವರು ಆಸೀನರಾಗುತ್ತಿದ್ದ ಸ್ಥಳ ಪತ್ತೆ ಹಚ್ಚಬೇಕಾಗಿದೆ. ಐತಿಹಾಸಿಕ ಸ್ಮಾರಕ ಹಾಳಾಗುವುದನ್ನು ತಡೆಯಬೇಕು
ಪ್ರೇಮಸಾಗರ ಪಾಟೀಲ ಕುಲಸಚಿವ ಬಿಇಟಿ ಎಂಜಿನಿಯರಿಂಗ್ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.