ADVERTISEMENT

ಕೇಂದ್ರದಲ್ಲಿ ಹಿಟ್ಲರ್‌ ಸರ್ಕಾರ

ಶಾಸಕ ಎಂ.ಬಿ.ಪಾಟೀಲ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 15:28 IST
Last Updated 21 ಡಿಸೆಂಬರ್ 2019, 15:28 IST
ಎಂ.ಬಿ ಪಾಟೀಲ
ಎಂ.ಬಿ ಪಾಟೀಲ   

ಬೀದರ್‌: ‘ಕೇಂದ್ರದಲ್ಲಿರುವುದು ಹಿಟ್ಲರ್ ಸರ್ಕಾರ, ರಾಜ್ಯಗಳ ಅಭಿಪ್ರಾಯ ಪಡೆಯದೆ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಹೊರಟಿದೆ’ ಎಂದು ಶಾಸಕ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

‘ಬಿಜೆಪಿ ಸರ್ಕಾರದ ಉದ್ದೇಶ ಸರಿಯಾಗಿದ್ದರೆ ಸಂಸತ್ತಿನಲ್ಲಿ ಏಕೆ ಚರ್ಚೆ ಮಾಡಲಿಲ್ಲ. ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ಏಕೆ ನಡೆಸಲಿಲ್ಲ. ಚರ್ಚೆ ಮಾಡದೆ ಕಾಯ್ದೆ ಜಾರಿಗೊಳಿಸುತ್ತಿದೆ. ನೋಟ್‌ ಬ್ಯಾನ್‌ ಮಾಡಿದಂತೆ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇಬ್ಬರು ಯುವಕರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಅಲ್ಲಿಗೆ ಮುಖ್ಯಮಂತ್ರಿ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಗೋಲಿಬಾರ್ ಪ್ರಕರಣಕ್ಕೆ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಪೊಲೀಸ್‌ ಆಯುಕ್ತರು ಹೊಣೆಯಾದರೆ, ದೇಶದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಕಾರಣವಾಗಿದ್ದಾರೆ’ ಎಂದು ಆರೋಪ ಮಾಡಿದರು.

‘ಯಾವುದೇ ಅಹಿತಕರ ಘಟನೆ ನಡೆದಾಗ ಪೊಲೀಸರು ಮೊದಲು ಅಶ್ರುವಾಯು ಸಿಡಿಸಿ ಜನರನ್ನು ಚದುರಿಸಬೇಕು. ಕೊನೆಯ ಅಸ್ತ್ರವಾಗಿ ಗೋಲಿಬಾರ್‌ ಮಾಡಬೇಕು. ಆದರೆ ಮಂಗಳೂರಿನಲ್ಲಿ ನೇರವಾಗಿ ಗೋಲಿಬಾರ್‌ ಮಾಡಲಾಗಿದೆ’ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.