ADVERTISEMENT

Holi 2025 | ಬೀದರ್‌ನಲ್ಲಿ ಸಂಭ್ರಮದ ಹೋಳಿ: ಗುಲಾಲಿನಲ್ಲಿ ಮಿಂದೆದ್ದ ಜನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 11:59 IST
Last Updated 14 ಮಾರ್ಚ್ 2025, 11:59 IST
<div class="paragraphs"><p>ಸ್ವಗ್ರಾಮ ಬೋಂತಿ ತಾಂಡಾದಲ್ಲಿ ಲಂಬಾಣಿ ಸಾಂಪ್ರದಾಯಿಕ ದಿರಿಸು ಧರಿಸಿಕೊಂಡು ಬಂಜಾರ ಸಮಾಜದವರೊಂದಿಗೆ ಹೋಳಿ ರಂಗಿನಾಟವಾಡಿ ಸಂಭ್ರಮಿಸಿದ ಔರಾದ್‌ ಶಾಸಕ&nbsp;ಪ್ರಭು&nbsp;ಚವಾಣ್‌</p><p></p></div>

ಸ್ವಗ್ರಾಮ ಬೋಂತಿ ತಾಂಡಾದಲ್ಲಿ ಲಂಬಾಣಿ ಸಾಂಪ್ರದಾಯಿಕ ದಿರಿಸು ಧರಿಸಿಕೊಂಡು ಬಂಜಾರ ಸಮಾಜದವರೊಂದಿಗೆ ಹೋಳಿ ರಂಗಿನಾಟವಾಡಿ ಸಂಭ್ರಮಿಸಿದ ಔರಾದ್‌ ಶಾಸಕ ಪ್ರಭು ಚವಾಣ್‌

   

– ‍ಪ್ರಜಾವಾಣಿ ಚಿತ್ರ

ADVERTISEMENT

ಬೀದರ್‌: ಹೋಳಿ ಹಬ್ಬದ ಅಂಗವಾಗಿ ಜನ ರಂಗಿನಾಟವಾಡಿ ಶುಕ್ರವಾರ ಸಂಭ್ರಮಿಸಿದರು. ಪರಸ್ಪರ ವಿವಿಧ ವರ್ಣದ ಬಣ್ಣ ಎರಚಿಕೊಂಡು ಅದರಲ್ಲಿ ಮಿಂದೆದ್ದರು.

ಶುಕ್ರವಾರ ಬೆಳಿಗ್ಗೆಯಿಂದಲೇ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಚಿಣ್ಣರು ಮನೆ ಎದುರು ಗುಂಪು ಗುಂಪಾಗಿ ಸೇರಿಕೊಂಡು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡು ಬಂತು. ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನದ ವರೆಗೆ ಬಣ್ಣ ಮಾರಾಟವೂ ಜೋರಾಗಿ ನಡೆಯಿತು. ವಿವಿಧ ಪ್ರಕಾರದ ಬಣ್ಣ, ಪಿಚಕಾರಿ, ಗನ್‌ ಸೇರಿದಂತೆ ಬಗೆಬಗೆಯ ಬಣ್ಣದಾಟದ ವಸ್ತುಗಳನ್ನು ಖರೀದಿಸಿದರು.

ಪ್ರತಿಯೊಂದು ಬಡಾವಣೆ, ಮುಖ್ಯರಸ್ತೆ, ಅಪಾರ್ಟ್‌ಮೆಂಟ್‌ಗಳಲ್ಲಿ ಜನ ಗುಂಪು ಗುಂಪಾಗಿ ಸೇರಿದ್ದರು. ಎಲ್ಲೆಡೆ ಕಿವಿಗಡಚ್ಚಿಕ್ಕುವ ಸಂಗೀತದ ಸದ್ದು, ಅದಕ್ಕೆ ಪುರುಷರು ಮತ್ತು ಮಹಿಳೆಯರು ಎಂಬ ಭೇದಭಾವವಿಲ್ಲದೆ ಎಲ್ಲ ವಯೋಮಾನದವರು ಸಂಭ್ರಮದಿಂದ ಹೆಜ್ಜೆ ಹಾಕಿದರು.

‘ಹೋಳಿ ಹೈ’ ಎಂದು ಜೋರಾಗಿ ಕೂಗುತ್ತಲೇ ಗಾಳಿಯಲ್ಲಿ ಗುಲಾಲ್‌ ಎರಚುತ್ತ, ಬಣ್ಣ ಹಾಕಿ ಕುಣಿದರು. ಯುವಕ/ಯುವತಿಯರು ಬೈಕ್‌ಗಳಲ್ಲಿ ಗುಂಪು ಗುಂಪಾಗಿ ಸ್ನೇಹಿತರು, ಸಂಬಂಧಿಕರ ಮನೆಗೆ ತೆರಳಿ ಅವರ ಮೇಲೆ ಬಣ್ಣ ಹಾಕಿ, ಕೆಲಕಾಲ ಅವರೊಂದಿಗೆ ಬಣ್ಣದಾಟವಾಡಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸುತ್ತ ಮೋಜು ಮಾಡಿದರು.

ವಿದ್ಯಾನಗರ, ಶಿವನಗರ, ಮೈಲೂರ, ಗುಂಪಾ, ಚಿದ್ರಿ, ಮೋಹನ್‌ ಮಾರ್ಕೆಟ್‌, ಕೆಎಚ್‌ಬಿ ಕಾಲೊನಿ, ಹೌಸಿಂಗ್‌ ಬೋರ್ಡ್‌ ಕಾಲೊನಿ, ಕುಂಬಾರವಾಡ, ಮಂಗಲಪೇಟ್‌, ಚೌಬಾರ, ಹಾರೂರಗೇರಿ, ನಾವದಗೇರಿ, ನೌಬಾದ್‌, ಸಾಯಿ ನಗರ ಹೀಗೆ ಎಲ್ಲೆಡೆ ಸಂಭ್ರಮದ ವಾತಾವರಣ ಇತ್ತು.

ಕೆಲವು ಬಡಾವಣೆಗಳಲ್ಲಿ ಬಯಲಲ್ಲಿ ಬಣ್ಣದಾಟಕ್ಕೆ ವ್ಯವಸ್ಥೆ ಮಾಡಿದ್ದರೆ, ಕೆಲವೆಡೆ ಉದ್ಯಾನದ ಒಂದು ಮೂಲೆಯಲ್ಲಿ ಶಾಮಿಯಾನ ಹಾಕಿ ರಂಗಿನಾಟವಾಡಿದರು. ಬೆಳಿಗ್ಗೆ ಬಾದಾಮಿ ಹಾಲು, ಜ್ಯೂಸ್‌, ಹಣ್ಣು, ಉಪಾಹಾರ, ಮಧ್ಯಾಹ್ನ ಪುಲಾವ್‌, ಸಾಂಬಾರ್‌, ಮಜ್ಜಿಗೆ, ಹಪ್ಪಳದ ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬೆಳಿಗ್ಗೆ 8ಗಂಟೆಗೆ ಆರಂಭಗೊಂಡ ಹೋಳಿ ಬಣ್ಣದಾಟದ ಸಂಭ್ರಮ ಮಧ್ಯಾಹ್ನ 1 ಗಂಟೆಯ ವರೆಗೆ ಇತ್ತು.

ನಗರದ ಗಣೇಶ ಮೈದಾನದಲ್ಲಿ ದಹಿ ಹಂಡಿ ಒಡೆದು ಸಂಭ್ರಮಿಸಿದರು. ನಾ, ನೀ ಎಂದು ಸ್ಪರ್ಧೆಗೆ ಬಿದ್ದವರಂತೆ ಹಂಡಿ ಒಡೆಯಲು ಮುಂದಾದರು. ಅನೇಕ ಜನ ಅದನ್ನು ಕಣ್ತುಂಬಿಕೊಂಡು ಖುಷಿ ಪಟ್ಟರು. ಬಣ್ಣದಿಂದ ಜನರ ಚಹರೆಗಳೇ ಗುರುತು ಸಿಗದಂತಾಗಿತ್ತು. ಅಷ್ಟರಮಟ್ಟಿಗೆ ಬಣ್ಣಗಳಲ್ಲಿ ಮಿಂದೆದ್ದರು. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇದೇ ಸಂಭ್ರಮ ಮನೆ ಮಾಡಿತ್ತು.

ಬಣ್ಣದಾಟವಾಡಿ ಜನ ಮಧ್ಯಾಹ್ನ ಮನೆ ಸೇರಿದ್ದರಿಂದ ನಗರದ ಪ್ರಮುಖ ರಸ್ತೆಗಳು ಮಧ್ಯಾಹ್ನ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಜನ ನಿಧಾನವಾಗಿ ಹೊರಬಂದರು.

ಗುರುವಾರ ರಾತ್ರಿ ಕಾಮದಹನ

ಹೋಳಿ ಹಬ್ಬದ ಮುನ್ನ ಹುಣ್ಣಿಮೆಯ ದಿನವಾದ ಗುರುವಾರ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಕಾಮ ದಹನ ಕಾರ್ಯಕ್ರಮ ನಡೆಯಿತು. ಚಿಣ್ಣರು ಸೇರಿದಂತೆ ಎಲ್ಲ ವಯೋಮಾನದವರು ಅದಕ್ಕೆ ಸಾಕ್ಷಿಯಾದರು. ಕಾಮದಹನದ ವೇಳೆ ಬೊಬ್ಬೆ ಹೊಡೆದರು.

ತೀವ್ರ ಕಟ್ಟೆಚ್ಚರ

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲಾ ಪೊಲೀಸರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದ್ದರು. ಬೀದರ್‌ ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಎಲ್ಲೆಡೆ ಗಸ್ತು ತಿರುಗಿದರು. ಹೆಚ್ಚು ಜನ ಸೇರಿಕೊಂಡು ರಂಗಿನಾಟವಾಡುವ ಸ್ಥಳಗಳ ಮೇಲೆ ಹೆಚ್ಚು ನಿಗಾ ವಹಿಸಿದ್ದರು.

ತೋಟದಲ್ಲೂ ಹೋಳಿ

ಕೆಲ ಶಾಸಕರು, ಮಾಜಿ ಶಾಸಕರು, ಗಣ್ಯರು ಅವರ ತೋಟಗಳಲ್ಲಿ ಹೋಳಿ ಆಚರಿಸಿದರು. ಕುಟುಂಬ ಸದಸ್ಯರೊಂದಿಗೆ ಮಧ್ಯಾಹ್ನದ ವರೆಗೆ ರಂಗಿನಾಟವಾಡಿ, ದಿನವಿಡೀ ಅಲ್ಲಿಯೇ ಕಾಲ ಕಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.