ADVERTISEMENT

ಹುಲಸೂರ ತಾಲ್ಲೂಕಿಗಿಲ್ಲ ಬಿಇಒ ಕಚೇರಿ ಭಾಗ್ಯ

ನೂತನ ತಾಲ್ಲೂಕಿನಲ್ಲಿ ಬಿಇಒ ಕಚೇರಿ ತೆರೆಯುವ ಪ್ರಸ್ತಾಪ ನನೆಗುದಿಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:24 IST
Last Updated 18 ಆಗಸ್ಟ್ 2025, 6:24 IST
ಹುಲಸೂರ ಪಟ್ಟಣದ ಸರ್ಕಾರಿ ಬಡಾವಣೆ ಶಾಲೆಯಲ್ಲಿ ಈ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎಂದು ನಾಮಫಲಕ ಅಳವಡಿಸಿರುವುದು
ಹುಲಸೂರ ಪಟ್ಟಣದ ಸರ್ಕಾರಿ ಬಡಾವಣೆ ಶಾಲೆಯಲ್ಲಿ ಈ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎಂದು ನಾಮಫಲಕ ಅಳವಡಿಸಿರುವುದು   

ಹುಲಸೂರ: ತಾಲ್ಲೂಕಿಗೆ ಅವಶ್ಯವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಿಸುವ ಯೋಚನೆ ಪ್ರಸ್ತಾಪ ತಾಲೂಕು ರಚನೆಗೊಂಡು 8 ವರ್ಷಗಳ ನಂತರವೂ ಮತ್ತೆ ನನೆಗುದಿಗೆ ಬಿದ್ದಿದೆ.

ಕಲಬುರಗಿ ವಿಭಾಗದಲ್ಲಿ ನೂತನ 14 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಾಪನೆಗೆ ಶಿಕ್ಷಣ ಇಲಾಖೆ ಅಂಕಿತ ಹಾಕಿದೆ. ಜಿಲ್ಲೆಯ ನೂತನ ತಾಲ್ಲೂಕಗಳಾದ ಕಮಲನಗರ ಹಾಗೂ ಚಿಟಗುಪ್ಪದಲ್ಲಿ ಬಿಇಒ ಕಚೇರಿ ತೆರೆಯುವುದಕ್ಕೆ ಅನುಮತಿ ಸಿಕ್ಕಿದ್ದು, ಹುಲಸೂರಗೆ ಭಾಗ್ಯ ನೀಡದೆ ಹಳೆಯ ತಾಲ್ಲೂಕಿನ ಬಿಇಒ ಕಚೇರಿಗೆ ಹೊಂದಾಣಿಕೆ ಮಾಡಿ ಕೈ ತೊಳೆದುಕೊಂಡಿದೆ.

ಹುಲಸೂರಿಗೆ ಮಲತಾಯಿ ಧೋರಣೆ ತೋರಲಾಗಿದೆ ಎಂಬ ಮಾತು ಕೇಳಿಬಂದಿವೆ.

ADVERTISEMENT

ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಆಯುಕ್ತರ ಕಚೇರಿಯ ಶಿಫಾರಸಿನ ಅನ್ವಯ ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆಗೆ ಅನುಮತಿ ನೀಡಿದ್ದಾರೆ. ಹುಲಸೂರ ತಾಲ್ಲೂಕನ್ನು ಕೈ ಬಿಟ್ಟಿರುವ ಜನಪ್ರತಿನಿಧಿಗಳ ಹಾಗೂ ಶಿಕ್ಷಣ ಇಲಾಖೆ ನಡೆಗೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ಬಿಇಒ ಕಚೇರಿ ಆರಂಭವಾಗದ ಕಾರಣ ಅಗತ್ಯ ಕೆಲಸಕ್ಕಾಗಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ವಿವಿಧ ದಾಖಲೆ ಪರಿಶೀಲನೆ ದಾಖಲಾತಿ ಮೊಹರುಗಾಗಿ ಪಕ್ಕದ 22 ಕಿ.ಮೀ. ದೂರದ ಬಸವಕಲ್ಯಾಣ ತಾಲ್ಲೂಕು ಅವಲಂಬಿಸುವಂತಾಗಿದೆ.

ಈ ಹಿಂದೆ ಶಿಕ್ಷಕರ, ವಿದ್ಯಾರ್ಥಿಗಳ ಒತ್ತಡದ ಮೇರೆಗೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಬಡಾವಣೆ ಶಾಲೆಯಲ್ಲಿ ತಾತ್ಕಾಲಿಕ ಬಿಇಒ ಕಚೇರಿ ಆರಂಭಮಾಡಲಾಗಿತ್ತು. ಆದರೆ ಇಲ್ಲಿನ ತಾತ್ಕಾಲಿಕ ಬಿಇಒ ಅಧಿಕಾರಿ ಮಾಡುವ ಸಹಿ
ಅಧಿಕೃತವಲ್ಲ ಎಂಬ ಕಾರಣಕ್ಕೆ ತಾತ್ಕಾಲಿಕ ಬಿಇಒ ಕಚೇರಿ ಬಂದ್ ಮಾಡಲಾಗಿದೆ. 

ಹುಲಸೂರಿನಲ್ಲಿ ಬಿಇಒ ಕಚೇರಿ ತೆರೆಯಲು ಜನಪ್ರತಿನಿಧಿಗಳು ಕೂಡಲೇ ಗಮನಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕಿದೆ ಎಂದು ಹುಲಸೂರ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೊಳೆ ಹೇಳುತ್ತಾರೆ.

ಬಿಇಒ ಕಚೇರಿ ಆರಂಭಿಸುವಂತೆ ಶಾಸಕರಿಗೆ ಮನವಿ:

ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ತಾಲ್ಲೂಕಿನ ಶಿಕ್ಷಕರು ವಿದ್ಯಾರ್ಥಿಗಳು ವಿವಿಧ ದಾಖಲಾತಿಗೆ ಬಸವಕಲ್ಯಾಣಕ್ಕೆ ಅಲೆದಾಡುತ್ತಿದ್ದಾರೆನಾಗರಾಜ ಹಾವಣ್ಣ ಸರ್ಕಾರಿ ನೌಕರರ ಸಂಘದ ಹುಲಸೂರ ತಾಲ್ಲೂಕು ಅಧ್ಯಕ್ಷ  ಕಲಬುರಗಿ ಶಿಕ್ಷಣ ಇಲಾಖೆಯ ಕಮಿಷನರ್‌ ಅವರು ನಮಗೆ ಸಭೆಯಲ್ಲಿ ಮಾನದಂಡ ನಿಯಮದ ಪ್ರಕಾರ 750 ಶಿಕ್ಷಕರು 150 ಶಾಲೆಗಳು 15 ಸಾವಿರ ವಿದ್ಯಾರ್ಥಿಗಳು ಹುಲಸೂರ ತಾಲ್ಲೂಕಿಗೆ ಇರಲಾರದ ಕಾರಣ ನೂತನ ತಾಲ್ಲೂಕು ಕೇಂದ್ರ ಶಿಕ್ಷಣ ಇಲಾಖೆ ನಿಯಮದಲ್ಲಿ ಕೂಡುತ್ತಿಲ್ಲ. ಇದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.ಸಿದ್ದವೀರಯ್ಯ ರುದನೂರಕ್ಷೇತ್ರ ಶಿಕ್ಷಣಾಧಿಕಾರಿ ಬಸವಕಲ್ಯಾಣ-ಹುಲಸೂರ ಜಿಲ್ಲೆಯ ನೂತನ 3 ತಾಲ್ಲೂಕುಗಳನ್ನು ಶೈಕ್ಷಣಿಕ ಪ್ರಗತಿಯತ್ತ ಕೊಂಡೊಯ್ಯಲುಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪ್ರಾರಂಭ ಮಾಡಲು ಶಿಕ್ಷಣ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೇನೆಎಂ. ಜಿ. ಮುಳೆ ವಿಧಾನ ಪರಿಷತ್ ಸದಸ್ಯ ನೂತನ ತಾಲ್ಲೂಕಿನಲ್ಲಿ ಬಿಇಒ ಕಚೇರಿ ಸೇರಿ ಹಲವು ಇಲಾಖೆಗಳ ಕಚೇರಿಗಳು ಇಲ್ಲದೆ ಮಕ್ಕಳು ಶಿಕ್ಷಕರು ಪರದಾಡುತ್ತಿದ್ದು ಕೂಡಲೇ ನೂತನ ತಾಲ್ಲೂಕಿಗೆ ಹೆಚ್ಚಿನ ಅನುದಾನ ಕಲ್ಪಿಸಲು ಹಾಗೂ ತಾಲ್ಲೂಕಿನ ಅಭಿವೃದ್ಧಿಗಾಗಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ.ಶರಣು ಸಲಗರ ಶಾಸಕ ಬಸವಕಲ್ಯಾಣ

ಆದೇಶ ಬಂದಿಲ್ಲ: ಬಿಇಒ 

ಹುಲಸೂರ ತಾಲ್ಲೂಕಿನಲ್ಲಿ ಅಂದಾಜು 9000 ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಲಿಯುತ್ತಿದ್ದು 76 ಶಾಲೆಗಳು ಮಾತ್ರ ಇವೆ. ಈ ಪೈಕಿ 400 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಬಿಇಒ ಕಚೇರಿ ತೆರೆಯಲು ಅಗತ್ಯವಾಗಿ ಬೇಕಿರುವ ಸೌಲಭ್ಯ ಇದ್ದು ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ‘ಹೊಸ ಬಿಇಒ ಕಚೇರಿ ಹುಲಸೂರಿನಲ್ಲಿ ತೆರೆಯಲು ಅಗತ್ಯವಿರುವ ಸಿದ್ಧತೆಗಳನ್ನು ಈ ಹಿಂದೆ ಇದ್ದ ಬಿಇಒ ಕೈಗೊಂಡು ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಇದು ಬಿಟ್ಟರೆ ಇದೀಗ ಕಚೇರಿ ತೆರೆಯುವ ಆದೇಶ ಹಿರಿಯ ಅಧಿಕಾರಿಗಳಿಂದ ಇದುವರೆಗೂ ಬಂದಿಲ್ಲ. ಹಾಲಿ ನಿರ್ದೇಶನದಂತೆ ಹಳೆಯ ತಾಲ್ಲೂಕಾದ ಬಸವಕಲ್ಯಾಣ ಕಚೇರಿಯಿಂದಲೇ ಹೆಚ್ಚುವರಿಯಾಗಿ ಹುಲಸೂರ ತಾಲ್ಲೂಕಿನ ಶೈಕ್ಷಣಿಕ ಆಡಳಿತವನ್ನು ನಿರ್ವಹಿಸುತ್ತಿದ್ದೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.