ADVERTISEMENT

ಹುಮನಾಬಾದ್‌ | ಬಿಗುವಿನ ವಾತಾವರಣ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:11 IST
Last Updated 6 ಜನವರಿ 2026, 4:11 IST
ಹುಮನಾಬಾದ್ ಪಟ್ಟಣದ ಭೀಮರಾವ್ ಪಾಟೀಲ ಅವರ ಮನೆ ಎದುರು ಪೊಲೀಸರು ಬಂದೋಬಸ್ತ್ ಮಾಡಿರುವುದು
ಹುಮನಾಬಾದ್ ಪಟ್ಟಣದ ಭೀಮರಾವ್ ಪಾಟೀಲ ಅವರ ಮನೆ ಎದುರು ಪೊಲೀಸರು ಬಂದೋಬಸ್ತ್ ಮಾಡಿರುವುದು   

ಹುಮನಾಬಾದ್: ಬೀದರ್‌ನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಮಧ್ಯೆ ವಾಗ್ವದ ನಡೆದಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಮಾಡುವ ಮೂಲಕ ನಿಷೇಧಾಜ್ಞಾನೆ ಮಾಡಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಲಾಗಿದೆ.

ಬಸ್ ನಿಲ್ದಾಣದ ಹತ್ತಿರವಿರುವ ಭೀಮರಾವ ಪಾಟೀಲ ಹಾಗೂ ಸರ್ಕಾರಿ ಪದವಿ ಕಾಲೇಜಿನ ಹತ್ತಿರವಿರುವ ಸಿದ್ದಲಿಂಗಪ್ಪ ಪಾಟೀಲ ಅವರ ನಿವಾಸದ ಹತ್ತಿರ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಟ್ಟಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇಬ್ಬರು ಶಾಸಕರು ಪಟ್ಟಣದ ತಮ್ಮ ನಿವಾಸಕ್ಕೆ ಬರುವುದಕ್ಕೂ ಮುಂಚಿತವಾಗಿ ಎರಡು ಮನೆಗಳ ಹತ್ತಿರ ಜಮಾಯಿಸಿದ ಜನರನ್ನು ಪೊಲೀಸರು ಚದುರಿಸಿದರು. ಪಟ್ಟಣದ ಅನೇಕರು ಪೊಲೀಸರನ್ನು ಕಂಡು ಏನಾಗಿದೆ ಎಂದು ಕೆಲ ಹೊತ್ತು ಯೋಚಿಸುವಂತೆ ಮಾಡಿತ್ತು.

ADVERTISEMENT

ಎಲ್ಲಡೆ ಪೊಲೀಸ್ ವಾಹನಗಳ ಸೈರನ್ ಮೊಳಗಿತು. ಆಯಾ ಕಟ್ಟಿನ ಸ್ಥಳಗಳಲ್ಲೂ ಪೊಲೀಸರನ್ನು ನಿಯೋಜಿಸಲಾಯಿತು. ಬಂದೋಬಸ್‌ನಲ್ಲಿ ತೊಡಗಿದ್ದ ಪೊಲೀಸರು, ಆಟೋ ಹಾಗೂ ಪೊಲೀಸ್ ವಾಹನಗಳಲ್ಲಿ ಧ್ವನಿವರ್ಧಕ ಮೂಲಕ ಅಂಗಡಿಗಳನ್ನು ಮುಚ್ಚಿಸಿದರು. ಮದ್ಯಾಹ್ನದ ನಂತರ ಮೆಡಿಕಲ್ ಹೊರತು ಪಡಿಸಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು ಮುಚ್ಚಿಸಲಾಯಿತು.

ಅವಾಚ್ಯ ನಿಂದನೆಯಿಂದ ಗಲಾಟೆ: ಕೆಡಿಪಿ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಏಕವಚನದಲ್ಲಿ ವಿಪ ಸದಸ್ಯ ಭೀಮರಾವ ಪಾಟೀಲ ಅವರಿಗೆ ನಿಂದಿಸಿದ ಹಿನ್ನೆಲೆ ಗಲಾಟೆ ಸಂಭವಿಸಿದೆ ಎಂದು ವಿಪ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನಿವೊಂದರ ವಿಷಯದ ಕುರಿತು ಚರ್ಚೆ ಮಾಡುತ್ತಿರುವ ವೇಳೆ ನಿಂದನೆ ಮಾಡಿದ್ದಾರೆ. ಆರೋಪ ಪ್ರತ್ಯಾರೋಪ ನಡೆಯಲಿ ಆದರೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯವಾಗಿದೆ ಎಂದರು.

ಹುಮನಾಬಾದ್ ವಿಧಾನಸಭೆ ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ನಾನು ಸೇರಿದಂತೆ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ರಾಜಶೇಖರ ಪಾಟೀಲ ಎಂದು ರಾಜಕೀಯ ಮಾಡುವುದಿಲ್ಲ. ಆದರೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಉದ್ದೇಶ ಪೂರ್ವಕವಾಗಿ ಪ್ರಚೋದನೆ ಮಾತು ಮಾತನಾಡಿದ್ದಾರೆ. ಸಭೆ ಸಮಾರಂಭಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದರು.

ಕ್ಷೇತ್ರದಲ್ಲಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಾಗಿರುವುದರ ಬಗ್ಗೆ, ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಂದ ಜನರಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ‌ಪ್ರಸ್ತಾಪ ಮಾಡುತ್ತಿರುವುದಕ್ಕೆ ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.‌

ವೀರಣ್ಣ ಪಾಟೀಲ, ಲಕ್ಷ್ಮಣರಾವ ಬುಳ್ಳಾ, ಓಂಕಾರ ತುಂಬಾ, ಅಫ್ಸರಮಿಯ್ಯಾ ಸೇರಿದಂತೆ ಇತರರು ಇದ್ದರು.‌

ಹುಮನಾಬಾದ್ ಪಟ್ಟಣದಲ್ಲಿ ಅಂಗಡಿಗಳು ಬಂದ್ ಆಗಿರುವುದು
ಹುಮನಾಬಾದ್ ಪಟ್ಟಣಕ್ಕೆ ಡಿಐಜಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು
ಹುಮನಾಬಾದ್ ತಾಲ್ಲೂಕಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದು ಸರಿಯಲ್ಲ.‌ ತಕ್ಷಣ ತೆರವು ಮಾಡಬೇಕು. ರಾಜಕೀಯದಲ್ಲಿ ಸಣ್ಣಪುಟ್ಟ ಗಲಾಟೆ ಸಹಜ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಮುಖಂಡರು ಶಾಂತತೆಯಿಂದ ಇರಬೇಕು.
ಡಾ.ಸಿದ್ದಲಿಂಗಪ್ಪ ಪಾಟೀಲಶಾಸಕ
ರಾಜಕೀಯದಲ್ಲಿ ಸಣ್ಣಪುಟ್ಟ ಗಲಾಟೆ ಸಹಜ. ಇದನ್ನು ಯಾರು ಸಹ ಗಂಭೀರವಾಗಿ ಪರಿಗಣಿಸದೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಶಾಂತವಾಗಿ ಇರಬೇಕು
ಭೀಮರಾವ್ ಪಾಟೀಲ ವಿಧಾನ ಪರಿಷತ್ ಸದಸ್ಯ

ನನ್ನ ಮೇಲೆ ಹಲ್ಲೆಗೆ ಯತ್ನ: ಸಿದ್ದಲಿಂಗಪ್ಪ ಪಾಟೀಲ ಹುಮನಾಬಾದ್: ಬೀದರ್ ನಗರದಲ್ಲಿ ನಿವೇಶನವೊಂದರ ನಿರ್ಮಾಣ ಹಾಗೂ ಹುಮನಾಬಾದ್ ಪಟ್ಟಣದ 204-205 ಸರ್ವೇ ನಂಬರ್ ಜಮೀನು ವಿಷಯ ಪ್ರಸ್ತಾಪಿಸಿದಾಗ ವಿಧಾನ ಪರಿಷತ್ ಸದಸ್ಯ ಭೀಮಾರಾವ ಪಾಟೀಲ ಅವರು ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಲು ಬಂದಿದ್ದರು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದ್ದಾರೆ. ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿವೇಶನ ಅಕ್ರಮವಾಗಿ ನಡೆಯುತ್ತಿದೆ ಎಂಬುವುದರ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಿದ್ದೆ. ಅಷ್ಟೇರಲ್ಲೇ ವಿಪ ಸದಸ್ಯ ಭೀಮಾರಾವ ಪಾಟೀಲ ಮಧ್ಯ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆಗೆ ಯತ್ನಿಸುತ್ತಿದ್ದಂತೆ ಪೊಲೀಸರು ಬಂದು ತಡೆದಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ಈ ರೀತಿ ಗೂಂಡಾ ವರ್ತನೆ ಮಾಡಿದ್ದಾರೆ. ಇದನ್ನು ಜಿಲ್ಲೆಯ ಜನರು ಗಮನಿಸಿದ್ದಾರೆ. ಒಬ್ಬ ಶಾಸಕರ ಮೇಲೆ ಈ ರೀತಿ ಹಲ್ಲೆ ಮಾಡುತ್ತಿದ್ದಾಗ ಇನ್ನೂ ಜನ ಸಾಮಾನ್ಯರ ಪರಿಸ್ಥಿತಿ ಏನಿದೆ ಹೇಳಿ. ಇವರ ಈ ಗುಂಡಾ ವರ್ತನೆ ತಾಳಲಾರದೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.