ADVERTISEMENT

ಮುಂದಿನ ಪಶು ಮೇಳ ಶಿವಮೊಗ್ಗದಲ್ಲಿ

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 15:23 IST
Last Updated 9 ಫೆಬ್ರುವರಿ 2020, 15:23 IST
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಆವರಣದಲ್ಲಿ ಭಾನುವಾರ ನಡೆದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಗಾಯಕ ಹಣಮಂತ ಅವರ ಹಾಡಿಗೆ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೆಜ್ಜೆ ಹಾಕಿದರು
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಆವರಣದಲ್ಲಿ ಭಾನುವಾರ ನಡೆದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಗಾಯಕ ಹಣಮಂತ ಅವರ ಹಾಡಿಗೆ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೆಜ್ಜೆ ಹಾಕಿದರು   

ಜನವಾಡ: ‘ಮುಂದಿನ ವರ್ಷದ ರಾಜ್ಯಮಟ್ಟದ ಪಶು ಮೇಳವನ್ನು ಶಿವಮೊಗ್ಗದಲ್ಲಿ ನಡೆಸಲಾಗುವುದು’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.

ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ಮೂರು ದಿನಗಳ ರಾಜ್ಯಮಟ್ಟದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯಮಟ್ಟದ ಮೂರನೆಯ ಪಶು ಮೇಳ ಯಶಸ್ವಿಯಾಗಿದೆ. ಮೇಳದ ಯಶಸ್ಸಿಗೆ ಸಹಕರಿಸಿದ ಎಲ್ಲ ಇಲಾಖೆಗಳು, ರೈತರು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಅರ್ಪಿಸುವೆ’ ಎಂದು ತಿಳಿಸಿದರು.

ADVERTISEMENT

‘ಬೀದರ್ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿಯ ಹವಾಗುಣ ಪಶು ಪಾಲನೆಗೆ ಹೇಳಿ ಮಾಡಿಸಿದಂತಿದೆ. ಪಶು ಪಾಲನೆ ಲಾಭದಾಯಕ ಉಪ ಕಸುಬು ಕೂಡ ಆಗಿದೆ. ಈ ಕುರಿತು ರೈತರಿಗೆ ಮಾಹಿತಿ ಒದಗಿಸಲು ರಾಜ್ಯಮಟ್ಟದ ಪಶು ಮೇಳ ಆಯೋಜಿಸಲಾಗಿತ್ತು’ ಎಂದು ಹೇಳಿದರು.

‘ಮೇಳದಲ್ಲಿ ರೈತರಿಗೆ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಮೊಲ, ಕೋಳಿ ಸಾಕಣೆ ಮತ್ತು ನಿರ್ವಹಣೆಯ ಮಾಹಿತಿ ಒದಗಿಸಲಾಗಿದೆ. ಜಾನುವಾರು ಲಸಿಕೆ, ರೋಗ ಪತ್ತೆ ಸಾಧನ, ಔಷಧ, ಹಾಲು, ಮಾಂಸ, ಉಣ್ಣೆ ಉತ್ಪನ್ನಗಳ ಮಾಹಿತಿ ಕೊಡಲಾಗಿದೆ’ ಎಂದು ತಿಳಿಸಿದರು.

‘ಗಡಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೇಳ ಆಯೋಜಿಸುವುದು ತ್ರಾಸದಾಯಕ ಕೆಲಸವಾಗಿತ್ತು. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಗೊಳಿಸಲಾಗಿದೆ. ಎಲ್ಲರ ಶ್ರಮದಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು.
ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಬೀದರ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮಲು, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತ ಎಸ್.ಆರ್. ನಟೇಶ, ನಿರ್ದೇಶಕ ಡಾ. ಎಂ.ಟಿ. ಮಂಜುನಾಥ, ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಡಿ. ನಾರಾಯಣಸ್ವಾಮಿ ಇದ್ದರು.

ಸಚಿವ, ಸಂಸದರಿಗೂ ಚುಟು ಚುಟು...

ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹಾಗೂ ಸಂಸದ ಭಗವಂತ ಖೂಬಾ ಅವರು ‘ಚುಟು ಚುಟು ಅಂತೈತಿ...ಮಾವ... ಚುಮುಚುಮು ಆಗತೈತಿ... ಹಾಡಿಗೆ ಹೆಜ್ಜೆ ಹಾಕಿದರು.

ಗಾಯಕ ಹಣಮಂತ ಅವರೊಂದಿಗೆ ‘ಚುಟು ಚುಟು ಅಂತೈತಿ...ಮಾವ... ಚುಮುಚುಮು ಆಗತೈತಿ...’ ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೆರೆದವರನ್ನು ಪುಳಕಿತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.