ADVERTISEMENT

ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 16:48 IST
Last Updated 8 ಡಿಸೆಂಬರ್ 2025, 16:48 IST
<div class="paragraphs"><p>ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ</p></div>

ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ

   

ಬೀದರ್‌: ‘ಅರ್ಜಿಯಾ ಸಾರಿ ಚೆಹರೇ‌ಪೇ ಲಿಖ್ ಕೇ ಲಾಯಾ ಹೂಂ’, ‘ತೇರೆ ಪಾಸ್ ಹೀ ಮೈ ಆ ರಹಾ ಹೂಂ...’

ಮೈನಡುಗುವ ಚಳಿಯ ನಡುವೆ ಬಾಲಿವುಡ್‌ ಗಾಯಕ ಜಾವೇದ್‌ ಅಲಿ ಅವರು ಹಿಂದಿ ಭಾಷೆಯಲ್ಲಿ ಮೇಲಿನ ಸಾಲುಗಳನ್ನು ಹಾಡುತ್ತಿದ್ದಂತೆಯೇ ಸಭಿಕರಲ್ಲಿ ವಿದ್ಯುತ್‌ ಸಂಚಾರ ಉಂಟಾಗಿ ಚಳಿ ಮೈಮರೆಸುವಂತೆ ಮಾಡಿತು.

ADVERTISEMENT

ನಗರದ ಗುರುನಾನಕ್‌ ಪಬ್ಲಿಕ್‌ ಶಾಲೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಮೈಲೂರನಲ್ಲಿರುವ ಗುರುನಾನಕ್‌ ದೇವ್‌ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ‍್ಯಕ್ರಮದಲ್ಲಿ ಜಾವೇದ್‌ ಅಲಿ ಅವರ ಗಾಯನವೂ ಸಭಿಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಭಕ್ತಿಗೀತೆ, ದೇಶಭಕ್ತಿ, ಸೂಫಿಯಾನಾ ಗೀತೆಗಳನ್ನು ಹಾಡಿ ರಂಜಿಸಿದರು. ಜನ ಅವರು ಕುಳಿತ ಸ್ಥಳದಲ್ಲಿಯೇ ಎದ್ದು ನಿಂತು ಮೈಮರೆತು ಕುಣಿದರು. ಸ್ಥಳೀಯ ಪ್ರತಿಭೆ, ಗಾಯಕಿ ದಿಶಾ ಮುದ್ದಾ ಅವರೊಂದಿಗೆ ಹಾಡಿದ ‘ಕಜರಾರೇ ಕಜರಾರೇ’ ಹಾಡು ಮತ್ತಷ್ಟು ಜೋಶ್‌ ತರಿಸಿತು. ‘ಚಾಂದ್‌ ಛೂಪಾ ಬಾದಲ್‌ ಮೇ’ ಹಾಡು ‘ಹಮ್‌ ದಿಲ್‌ ದೇ ಚುಕೇ’ ಸಿನಿಮಾದ ಪ್ರೇಮ್‌ ಕಹಾನಿ ನೆನಪಿಸಿತು.

ಇದಕ್ಕೂ ಮುನ್ನ ಗುರುನಾನಕ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಗುರುನಾನಕ್‌ ಶಾಲೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ವರ್ಷವಿಡೀ ವಿವಿಧ ರೀತಿಯ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್, ನಾರಿ ಶಕ್ತಿ ಪ್ರಶಸ್ತಿ, ಸಸಿ ನೆಡುವ ಕಾರ‍್ಯಕ್ರಮ, ಯೋಗ ದಿನ, ಹಳೆ ವಿದ್ಯಾರ್ಥಿಗಳ ಮಿಲನ ಹಮ್ಮಿಕೊಳ್ಳಲಾಗಿತ್ತು ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್.ಬಲಬೀರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌, ಗುರುನಾನಕ್‌ ಶಾಲಾ, ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.