ADVERTISEMENT

ಕಮಲನಗರ | ಉದಗೀರನಲ್ಲಿ ಅದ್ಧೂರಿ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:21 IST
Last Updated 6 ಜನವರಿ 2026, 4:21 IST
ಮಹಾರಾಷ್ಟ್ರದ ಉದಗೀರ ಪಟ್ಟಣದ ಅಗ್ಗಿ ಬಸವಣ್ಣ ಮೈದಾನದಲ್ಲಿ ಸೋಮವಾರ ಹಾವಗೀಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದರು
ಮಹಾರಾಷ್ಟ್ರದ ಉದಗೀರ ಪಟ್ಟಣದ ಅಗ್ಗಿ ಬಸವಣ್ಣ ಮೈದಾನದಲ್ಲಿ ಸೋಮವಾರ ಹಾವಗೀಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದರು   

ಕಮಲನಗರ: ಮಹಾರಾಷ್ಟ್ರದ ಉದಗೀರ ಪಟ್ಟಣದಲ್ಲಿ ಸೋಮವಾರ ನಸುಕಿನ ಜಾವ 2ಕ್ಕೆ ಹಾವಗೀಸ್ವಾಮಿ ಅವರ ಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು.

ಮೆರವಣಿಗೆ ಹಾವಗೀಸ್ವಾಮಿ ಮಠದಿಂದ ಆರಂಭಗೊಂಡು ಅಗ್ಗಿ ಬಸವಣ್ಣ ಮೈದಾನದವರೆಗೆ ಅದ್ಧೂರಿಯಾಗಿ ಸಾಗಿತು. ಉತ್ಸವ ಸಾಗುವ ರಸ್ತೆಗಳು ವಿದ್ಯುತ್‌ದೀಪ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಕಂಗೋಳಿಸುತ್ತಿದ್ದವು.

ಹಾವಗೀಸ್ವಾಮಿ ಅವರ ಪಲ್ಲಕ್ಕಿ ಉತ್ಸವ ಬರುತ್ತಿದ್ದಂತೆ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯ ಅವರ ಪಾದಪೂಜೆ ಮಾಡಿ ಹಾವಗೀಸ್ವಾಮಿ ಅವರ ಮೂರ್ತಿಯ ದರ್ಶನ ಪಡೆದು ಭಕ್ತಿ ಮೆರೆದರು. ಬಾಜಾ-ಭಜಂತ್ರಿಗಳ ಸದ್ದು, ಭಜನೆ ಗಮನಸೆಳೆಯಿತು.

ADVERTISEMENT

ಅಗ್ನಿ ಪೂಜೆ: ಹಾವಗೀಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಅಗ್ಗಿ ಬಸವಣ್ಣ ಮೈದಾನದಲ್ಲಿ ಸೋಮವಾರ ನಸುಕಿನ ಜಾವ 5ಕ್ಕೆ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದರು.

ಸಹಸ್ರಾರು ಭಕ್ತರು ಅಗ್ನಿ ದೇವತೆಗೆ ಪೂಜೆ ಸಲ್ಲಿಸಿದರು. ನಂತರ ಕಾಯಿ-ಕರ್ಪೂರ, ಪುಷ್ಪಮಾಲೆ ಹಿಡಿದುಕೊಂಡು ಸರತಿಯಲ್ಲಿ ನಿಂತು ದೇಗುಲ ಪ್ರವೇಶಿಸಿ ಹಾವಗೀಸ್ವಾಮಿ ದರ್ಶನ ಪಡೆದರು.

ಶಂಕರಲಿಂಗ ಶಿವಾಚಾರ್ಯ ಹಣೇಗಾಂವ, ಬಸವಲಿಂಗ ಶಿವಾಚಾರ್ಯರು ಕವಳಾಸ, ಉಮಾಕಾಂತ ದೇಶಿ ಕೇಂದ್ರ ಸ್ವಾಮಿಜಿ ಹಾಗೂ ಭಜನೆ ಮಂಡಳಿಯವರು, ಮಹಿಳೆಯರು, ಯುವಕರು, ಮಕ್ಕಳು, ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಮಹಾರಾಷ್ಟ್ರ, ಕರ್ನಾಟಕ ಹಾಗೂ ತೇಲಂಗಾಣದಿಂದ ಭಕ್ತರು ಆಗಮಿಸಿ ಹಾವಗೀಸ್ವಾಮಿ ದರ್ಶನ ಪಡೆದು ಪುನೀತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.