ADVERTISEMENT

ಕನ್ನಡ ಭಾಷೆಯಲ್ಲ, ಬದುಕಿನ ಮೂಲ ಬೇರು: ಹಾಸ್ಯ ಕಲಾವಿದ ಕೃಷ್ಣೇಗೌಡ

ನಿವೃತ್ತ ಪ್ರಾಚಾರ್ಯರೂ ಆದ ಹಾಸ್ಯ ಕಲಾವಿದ ಕೃಷ್ಣೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:30 IST
Last Updated 13 ಅಕ್ಟೋಬರ್ 2025, 5:30 IST
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಕೃಷ್ಣೇಗೌಡ ಅವರನ್ನು ಜಗನ್ನಾಥ ಹೆಬ್ಬಾಳೆ ಗೌರವಿಸಿದರು
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಕೃಷ್ಣೇಗೌಡ ಅವರನ್ನು ಜಗನ್ನಾಥ ಹೆಬ್ಬಾಳೆ ಗೌರವಿಸಿದರು   

ಬೀದರ್: ‘ಕನ್ನಡ ಬರೀ ಭಾಷೆಯಲ್ಲ, ಅದು ನಮ್ಮ ಬದುಕಿನ ಮೂಲ ಬೇರು’ ಎಂದು ನಿವೃತ್ತ ಪ್ರಾಚಾರ್ಯರೂ ಆದ ಹಾಸ್ಯ ಕಲಾವಿದ ಕೃಷ್ಣೇಗೌಡ ತಿಳಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿರುವ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ಭಾನುವಾರ ನಡೆದ ಸಾಹಿತಿಗಳ ಜೊತೆಗಿನ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

‘ಕನ್ನಡ ನಮ್ಮ ಸರ್ವಸ್ವ. ಅದರ ಪ್ರತಿಫಲ ಏನಾಗುತ್ತೊ ಅನ್ನುವುದಕ್ಕಿಂತ ಮುಖ್ಯವಾಗಿ ಅದನ್ನು ಮುಟ್ಟಿ ಬರಬೇಕು. ಅದು ನಮಗೆ ಎಲ್ಲವನ್ನೂ ಕೊಟ್ಟಿದೆ. ಕನ್ನಡ ಓದು ಹಾಗೂ ಚಿಂತನೆ ನಮ್ಮ ಬುದ್ದಿ ಹಾಗೂ ಕಣ್ಣುಗಳಿಗೆ ಭಾವನೆ ದೊರಕಿಸಿದೆ. ನಾನು ವಿದೇಶಕ್ಕೆ ತೆರಳಿದರೂ ಕನ್ನಡವನ್ನು ಆಸ್ವಾದಿಸುವ ಸಂದರ್ಭ ಒದಗಿ ಬಂದಿರುವುದು ಪುಣ್ಯ. ಅದು ನಮ್ಮ ಭಾವಕೋಶ ಹಾಗೂ ಬುದ್ದಿಕೋಶ ನಿಯುಕ್ತಿಗೊಳಿಸಿದೆ’ ಎಂದರು.

ADVERTISEMENT

‘ಎಐ ತಂತ್ರಜ್ಞಾನ ಮನುಷ್ಯನಿಗೆ ಹಲವಾರು ಮಾರ್ಗೋಪಾಯಗಳನ್ನು ಕಲ್ಪಿಸಿಕೊಡುತ್ತಿರುವ ಹಿನ್ನೆಲೆಯಲ್ಲಿ ಆತ ಸೋಮಾರಿಯಾಗುತ್ತಿದ್ದಾನೆ. ನಮ್ಮ ಬುದ್ದಿಮತ್ತೆಗೆ ಕೆಲಸ ಕೊಡದೇ ಎಲ್ಲವೂ ತಂತ್ರಜ್ಞಾನದ ಮೇಲೆ ನಿರ್ಭರವಾಗುತ್ತಿದ್ದೇವೆ. ಗೂಗಲ್ ಮ್ಯಾಪ್ ನಮಗೆ ಮರೆವು ಹೆಚ್ಚಿಸಿದೆ. ಅತಿಯಾದ ಮೊಬೈಲ್ ಬಳಕೆ ನಮ್ಮ ಮೊಬೈಲ್ ನಂಬರ್‌ಗಳನ್ನೇ ಮರೆತು ಹೋಗುವಂತೆ ಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತಿಗಳಾದ ಪ್ರೊ.ಪ್ರಭುಶೆಟ್ಟಿ ಮೂಲಗೆ, ಶಾಂತಕುಮಾರ ಪಾಟೀಲ, ವೀರಭದ್ರಪ್ಪ ಉಪ್ಪಿನ್, ಮಲ್ಲಿಕಾರ್ಜುನ ಪ್ರಭಾ, ಜಗನ್ನಾಥ ಪಾರಾ, ದೇವಿದಾಸ ಜೋಷಿ, ಸಾವಿತ್ರಿಬಾಯಿ ಹೆಬ್ಬಾಳೆ, ಶಾಂತಮ್ಮ ಬಲ್ಲೂರ, ಅಶೋಕ ಕೋರೆ, ಶಿವಶರಣಪ್ಪ ಗಣೇಶಪುರ ಹಾಗೂ ಪ್ರಕಾಶ ಕನ್ನಾಳೆ ಇದ್ದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಜನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಪ್ರಾಧ್ಯಾಪಕಿ ಸುನೀತಾ ಕೂಡ್ಲಿಕರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.