ADVERTISEMENT

ಕನ್ನಡ ಶಾಲೆ ಉಳಿಸುವ ಇಚ್ಛಾಶಕ್ತಿ ಅಗತ್ಯ: ಸುರೇಶ ಚನಶೆಟ್ಟಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:38 IST
Last Updated 22 ನವೆಂಬರ್ 2025, 5:38 IST
ಬೀದರ್‌ನ ಗಾಂಧಿಗಂಜ್‍ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ವಚನ ಮಂಟಪ, ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿದರು
ಬೀದರ್‌ನ ಗಾಂಧಿಗಂಜ್‍ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ವಚನ ಮಂಟಪ, ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿದರು    

ಬೀದರ್: ‘ಕನ್ನಡ ಶಾಲೆ ಉಳಿಸಿ, ಬೆಳೆಸುವ ಇಚ್ಛಾಶಕ್ತಿ ರಾಜಕಾರಣಿಗಳಲ್ಲಿ ಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಎಂಟನೇ ವಚನ ಮಂಟಪ, ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಧಕರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಡಿ ಭಾಗದಲ್ಲಿ ಕನ್ನಡವನ್ನು ಸಮೃದ್ಧವಾಗಿ ಕಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಈ ಭಾಗದಲ್ಲಿ ಕನ್ನಡದ ಉಳಿವಿಗೆ ಚನ್ನಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ. ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡ ಕಾರ್ಯಗಳಿಗೆ ಸದಾ ಕಂಕಣಬದ್ಧವಾಗಿದೆ’ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಮಹಾಸಭಾ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿ ಹೆಚ್ಚಾಗಿದ್ದು, ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು’ ಎಂದು ಸಲಹೆ ಮಾಡಿದರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ‘ಪ್ರಸ್ತುತ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಮೊಬೈಲ್‍ನಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಉತ್ತಮ ಪ್ರಜೆಗಳಾಗಿ ರೂಪಿಸಬೇಕಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಸದ್ಯ ಹೆಚ್ಚಿನವರು ಕನ್ನಡ ಮಾತನಾಡುವಾಗ ಇಂಗ್ಲಿಷ್ ಪದ ಹೆಚ್ಚು ಬಳಸುತ್ತಿದ್ದಾರೆ. ಅಚ್ಚ ಕನ್ನಡದಲ್ಲಿ ಮಾತನಾಡಿದಾಗ ಮಾತ್ರ ಕನ್ನಡ ಉಳಿಯುತ್ತದೆ. ಕನ್ನಡ ಉಳಿದರೆ ವಚನಗಳು ಉಳಿಯುತ್ತವೆ’ ಎಂದು ಹೇಳಿದರು.

ಸಾಹಿತಿ ರೇಣುಕಾ ಎಂ. ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ, ಅಬ್ದುಲ್ ಖದೀರ್, ಪತ್ರಕರ್ತ ಸದಾನಂದ ಜೋಶಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧನರಾಜ ದಶರಥ, ಶ್ರೀಕಾಂತ ಭವಾನಿ, ಬಸವಚೇತನ ವೈಜಿನಾಥ, ಸಿದ್ರಾಮ ಶಂಕರೆಪ್ಪ, ಸೈಯದ್ ಮುಜೀಬ್ ಅಹಮ್ಮದ್, ಶಿವಕುಮಾರ ತುಂಗಾ, ಲೋಕೇಶ ಪ್ರಭುಶೆಟ್ಟಿ, ಸ್ವರೂಪರಾಣಿ ಪಾಟೀಲ, ಸುನೀತಾ ಕೂಡ್ಲಿಕರ್, ಶ್ರೇಯಾ ಮಹೇಂದ್ರಕರ್, ಮಲ್ಲಮ್ಮ ಮಾಧವರಾವ್, ರಾಮಯ್ಯ ರಾಮಚಂದ್ರ, ಬಸಪ್ಪ ಭದಾಡೆ, ಅರ್ಜುನರಾವ್ ಕಾಂಚೆ, ಅನಿಲಕುಮಾರ ದೇಶಮುಖ, ಶ್ರಾವಣಕುಮಾರ ಮೇತ್ರೆ ಅವರನ್ನು ಸನ್ಮಾನಿಸಲಾಯಿತು.

ಎಂಜಿನಿಯರ್‌ ವೀರಶೆಟ್ಟಿ ಮಣಗೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ವಚನ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಶಿವಶಂಕರ ಟೋಕರೆ, ರಾಷ್ಟ್ರೀಯ ಬಸವ ದಳದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ಪಾಟೀಲ ಮರಕಲ್, ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ಉಷಾ ಮಿರ್ಚೆ, ವೀರಭದ್ರಪ್ಪ ಬುಯ್ಯಾ, ವಿಜಯಕುಮಾರ ಸೋನಾರೆ ಉಪಸ್ಥಿತರಿದ್ದರು.

ಕಲಾವಿದ ಶಿವಕುಮಾರ ಪಾಂಚಾಳ ನಾಡಗೀತೆ ಹಾಡಿದರು. ಬಾಬುರಾವ್ ದಾನಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಜಯದೇವಿ ಯದಲಾಪುರೆ ವಂದಿಸಿದರು. ಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷೆ ಶಾಂತಾ ಜೈರಾಜ ಖಂಡ್ರೆ ಭಕ್ತಿ ದಾಸೋಹಗೈದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.