ADVERTISEMENT

ಔರಾದ್‌ ಕ್ಷೇತ್ರ ಸ್ಥಿತಿ–ಗತಿ| ಬಿಜೆಪಿ ಕೋಟೆ ಭೇದಿಸಲು ತಯಾರಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 19:30 IST
Last Updated 12 ಫೆಬ್ರುವರಿ 2023, 19:30 IST
ಔರಾದ್ ಮೀಸಲು ವಿಧಾನಸಭಾ ಕ್ಷೇತ್ರ
ಔರಾದ್ ಮೀಸಲು ವಿಧಾನಸಭಾ ಕ್ಷೇತ್ರ   

ಔರಾದ್: ಬೀದರ್‌ ಜಿಲ್ಲೆಯ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ ಔರಾದ್‌ನಲ್ಲಿ ಸದ್ಯ ಬಿಜೆಪಿಯದ್ದೇ ಪ್ರಾಬಲ್ಯ. ಬಿಜೆಪಿಯ ಈ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಾಲಿ ಶಾಸಕ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ತಿಂಗಳು ಇಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಭು ಚವಾಣ್ ಅವರಿಗೆ ಮತ್ತೆ ಆಶೀರ್ವಾದ ಮಾಡುವಂತೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಅವರೇ ಅಭ್ಯರ್ಥಿ ಎನ್ನುವುದನ್ನು ಪರೋ ಕ್ಷಗಾಗಿ ಘೋಷಿ ಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿ ಗಳ ಆಯ್ಕೆ ಅಂತಿ ಮಗೊಳಿಸಿಲ್ಲ. ಹಿಂದಿನ ಮೂರು ಚುನಾ ವಣೆಗಿಂತಲೂ ಈ ಬಾರಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಹೆಚ್ಚು ಪೈಪೋಟಿ ಇದೆ. ಟಿಕೆಟ್ ಬಯಸಿ 27 ನಾಯಕರು ಅರ್ಜಿ ಸಲ್ಲಿಸಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ 64,152 ಮತ ಪಡೆದ ವಿಜಯಕುಮಾರ ಕೌಡಾಳೆ ಅವರು ಈ ಬಾರಿಯೂ ದಾವೇದಾರರು. ಆದರೆ ಅವರ ಆರೋಗ್ಯ ಸರಿ ಇಲ್ಲದ ಕಾರಣ ಇತರೆ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಹಾಸ ನಡೆಸಿದ್ದಾರೆ. ಇದು ಮೀಸಲು ಕ್ಷೇತ್ರ ಇರುವುದರಿಂದ ಇಲ್ಲಿ ಪರಿಶಿಷ್ಟ ಜಾತಿ ಎಡ-ಬಲ ನಡುವೆಯೂ ಟಿಕೆಟ್ ಪೈಪೋಟಿ ಹೆಚ್ಚಿದೆ.

ADVERTISEMENT

ಪರಿಶಿಷ್ಟ ಜಾತಿ (ಬಲ)ದಿಂದ ಶಂಕರರಾವ್ ದೊಡ್ಡಿ, ಡಾ.ಭೀಮಸೇನರಾವ್ ಸಿಂಧೆ, ಕೆ.ಪುಂಡಲಿಕರಾವ್, ಲಕ್ಷ್ಮಣರಾವ್ ಬುಳ್ಳಾ, ಶಿವಮೂರ್ತಿ ಸುಬಾನೆ ಸೇರಿದಂತೆ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪರಿಶಿಷ್ಟ ಜಾತಿಯ (ಎಡ) ಡಾ. ಲಕ್ಷ್ಮಣರಾವ್ ಸೋ ರಳ್ಳಿಕರ್, ವಿಜಯ ಕುಮಾರ ಕೌಡಾಳೆ, ಬಂಟಿ ದರಬಾರೆ, ಗೋಪಿಕೃಷ್ಣ, ಸುಧಾಕರ ಕೊಳ್ಳೂರ್ ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಬಿ ನಡೆಸಿದ್ದಾರೆ.

ವಡೆಯರ್ ಸಮಾಜದ ರಾಮಣ್ಣ ವಡೆಯರ್, ಬಂಜಾರಾ ಸಮಾಜದ ಜೈಸಿಂಗ್ ರಾಠೋಡ್, ಸಿದ್ಧಾರ್ಥ ರಾಠೋಡ್ ಅವರು ಟಿಕೆಟ್ ಕೇಳುತ್ತಿದ್ದಾರೆ. ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಒತ್ತಡ ಹೆಚ್ಚಿದ್ದು, ವರಿಷ್ಠರಿಗೆ ಟಿಕೆಟ್ ಹಂಚಿಕೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿ ಎಲ್ಲರಿಗೂ ಟಿಕೆಟ್ ಕೊಡಲಾಗದು. ಒಬ್ಬ ರಿಗೆ ಕೊಡುತ್ತೇವೆ. ಎಲ್ಲರೂ ಸೇರಿ ಚುನಾವಣೆ ಎದುರಿಸಿ ಈ ಬಾರಿ ಪ್ರಭು ಚವಾಣ್ ಅವರನ್ನು ಸೋಲಿಸಬೇಕು ಎಂದು ಈಚೆಗೆ ನಡೆದ ಕಾಂಗ್ರೆಸ್ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕಾಂಕ್ಷಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಬಾರಿಯೂ ಗೆಲ್ಲಬೇಕು ಎನ್ನುವ ಛಲ ಹೊಂದಿರುವ ಸಚಿವ ಪ್ರಭು ಚವಾಣ್ ಹಳ್ಳಿಗಳಲ್ಲಿ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಹಿಡಿದುಕೊಂಡು ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠಾ ಮತ್ತು ಲಿಂಗಾಯತ ಮತ ಸೆಳೆಯುವ ನಿಟ್ಟಿನಲ್ಲೂ ಕಸರತ್ತು ನಡೆಸಿದ್ದಾರೆ. ಪ್ರಭು ಚವಾಣ್ ಅವರು ಈ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ, ಕೇಂದ್ರ ಸಚಿವ ಭಗವಂತ ಖೂಬಾ ಅವರ ನಡುವಿನ ವೈಮನಸ್ಸು, ಸ್ವಜಾತಿ ಪ್ರೇಮದ ಆರೋಪದಂತಹ ಅನೇಕ ಸಮಸ್ಯೆ ಸವಾಲು ಎದುರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.