ADVERTISEMENT

ಪಶು ವೈದ್ಯಕೀಯ ವಿವಿ 15ನೇ ಘಟಿಕೋತ್ಸವ; 86 ಚಿನ್ನದ ಪದಕ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 11:55 IST
Last Updated 26 ಫೆಬ್ರುವರಿ 2026, 11:55 IST
<div class="paragraphs"><p>ಘಟಿಕೋತ್ಸವದ ಮಾಹಿತಿ ಹಂಚಿಕೊಂಡ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ</p></div>

ಘಟಿಕೋತ್ಸವದ ಮಾಹಿತಿ ಹಂಚಿಕೊಂಡ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ

   

ಬೀದರ್‌: ಇಲ್ಲಿನ ನಂದಿನಗರದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ಶುಕ್ರವಾರ (ಫೆ.27) ಬೆಳಿಗ್ಗೆ 11ಕ್ಕೆ ವಿವಿ ಸಭಾಂಗಣದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ. ಹೈದರಾಬಾದ್‌ ಐಸಿಆರ್‌ಐಎಸ್‌ಎಟಿ ಪ್ರಧಾನ ನಿರ್ದೇಶಕ ಡಾ. ಹಿಮಾಂಶು ಪಾಠಕ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ADVERTISEMENT

ವಿವಿಯಲ್ಲಿ ಕುಲಪತಿ ಪ್ರೊ .ಕೆ.ಸಿ. ವೀರಣ್ಣ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. 2023–24ನೇ ಸಾಲಿನ ಸ್ನಾತಕ ಪದವಿಯಲ್ಲಿ ತೇರ್ಗಡೆ ಹೊಂದಿದ 17 ವಿದ್ಯಾರ್ಥಿಗಳಿಗೆ 49 ಚಿನ್ನದ, 2024–25ನೇ ಸಾಲಿನ ಬಿಎಫ್‌ಎಸ್‌ಸಿಯಲ್ಲಿ 3 ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿದ ಇಬ್ಬರಿಗೆ ಎರಡು ಚಿನ್ನದ ಪದಕಗಳು, 2023–24ನೇ ಸಾಲಿನ ಸ್ನಾತಕೋತ್ತರ ಪದವಿಯಲ್ಲಿ 15 ವಿದ್ಯಾರ್ಥಿಗಳಿಗೆ 30 ಚಿನ್ನದ ಪದಕಗಳು, ಇಬ್ಬರಿಗೆ ಡಾಕ್ಟರೇಟ್‌ ಪದವಿ ಜೊತೆಗೆ ಎರಡು ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ. ಒಟ್ಟು 576 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು. ಇದರಲ್ಲಿ 455 ಸ್ನಾತಕ, 107 ಸ್ನಾತಕೋತ್ತರ ಹಾಗೂ 14 ಡಾಕ್ಟರೇಟ್‌ ಪದವೀಧರರು ಸೇರಿದ್ಧಾರೆ ಎಂದು ವಿವರಿಸಿದರು.

ವಿಶ್ವವಿದ್ಯಾಲಯವು 18 ವಿಷಯಗಳಲ್ಲಿ ಸ್ನಾತಕೋತ್ತರ, 14 ವಿಷಯಗಳಲ್ಲಿ ಡಾಕ್ಟರೇಟ್‌ ಪದವಿ ಕೊಡುತ್ತಿದೆ. ಮೀನುಗಾರಿಕೆ ವಿಜ್ಞಾನದ 6 ವಿಷಯಗಳಲ್ಲಿ ಸ್ನಾತಕೋತ್ತರ, 5 ವಿಷಯಗಳಲ್ಲಿ ಡಾಕ್ಟರೇಟ್‌ ಪದವಿ, ಹೈನುಗಾರಿಕೆ ವಿಜ್ಞಾನದ 4 ವಿಷಯಗಳಲ್ಲಿ ಸ್ನಾತಕೋತ್ತರ, 3 ವಿಷಯಗಳಲ್ಲಿ ಡಾಕ್ಟರೇಟ್‌ ಪದವಿ, ಆಹಾರ ಮತ್ತು ಹೈನುಗಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಸ್ವ ಅನುದಾನ ಆಧಾರಿತ ಎಮ್‌ಬಿಎ ಪದವಿ ಸಹ ನೀಡುತ್ತಿದೆ ಎಂದು ಹೇಳಿದರು.

ಪಶು ವೈದ್ಯಕೀಯ, ಮೀನುಗಾರಿಕೆ ಮತ್ತು ಹೈನು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿವಿ ವ್ಯಾಪ್ತಿಯ ಎಂಟು ಆವರಣಗಳ ಒಂಬತ್ತು ಕಾಲೇಜುಗಳಲ್ಲಿ ಕೋರ್ಸ್‌ ನಡೆಸಲಾಗುತ್ತಿದೆ. ಬೀದರ್‌, ಬೆಂಗಳೂರು, ಶಿವಮೊಗ್ಗ, ಹಾಸನ, ಗದಗ, ಅಥಣಿ, ಬೆಂಗಳೂರು, ಕಲಬುರಗಿಯ ಮಹಾಗಾಂವ್‌, ಮಂಗಳೂರು ಸೇರಿದೆ. ತುಮಕೂರಿನ ಕೊನೇಹಳ್ಳಿ, ಹಾವೇರಿಯ ಕುನ್ನೂರು, ಚಾಮರಾಜನಗರದ ಬರಗಿ, ಹಾಸನದ ಕೋರವಂಗಲ, ಯಾದಗಿರಿಯ ದೋರನಹಳ್ಳಿಯಲ್ಲಿ ಐದು ಪಶು ಸಂಗೋಪನಾ ಪಾಲಿಟೆಕ್ನಿಕ್‌ ನಡೆಸಲಾಗುತ್ತಿದೆ. ಪುತ್ತೂರಿನಲ್ಲಿ ನೂತನ ಪಶು ವೈದ್ಯಕೀಯ ಕಾಲೇಜಿನ ಕೆಲಸ ಪ್ರಗತಿಯಲ್ಲಿದೆ. ಇದಲ್ಲದೇ ಹತ್ತು ಸಂಶೋಧನೆ ಮತ್ತು ಮಾಹಿತಿ ಕೇಂದ್ರಗಳು ಕೂಡಾ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಪಿ.ಟಿ ರಮೇಶ್, ಡಾ. ಮಂಜುನಾಥ್, ರಾಮಚಂದ್ರ ನಾಯಕ್‌, ಶಿವಪ್ರಕಾಶ್, ಆಡಳಿತ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಮತ್ತಿತರರು ಇದ್ದರು.

‘ಖುಷಿ’ಗೆ 16 ಚಿನ್ನದ ಪದಕಗಳು...

ಉಡುಪಿಯ ಮಂದಾರ್ತಿ ಗ್ರಾಮದ ಖುಷಿ ಅವರು ‘ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌ ಅಂಡ್‌ ಅನಿಮಲ್‌ ಹಸ್ಬೆಂಡ್ರಿ’ (ಬಿವಿಎಸ್‌ಸಿ ಅಂಡ್‌ ಎಎಚ್‌) ಸ್ನಾತಕ ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023–24ನೇ ಬ್ಯಾಚಿನ ವಿದ್ಯಾರ್ಥಿನಿ ಖುಷಿ. 2024–25ನೇ ಸಾಲಿಗೆ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ ಬಿಟೆಕ್‌ (ಹೈನು ತಂತ್ರಜ್ಞಾನ) ಸ್ನಾತಕ ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್‌. ಮತ್ತು ವಿಜಯಕುಮಾರ್‌ ಎಂ.ಸಿ. ಅವರು 2023–24ನೇ ಸಾಲಿನ ಎಂವಿಎಸ್‌ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ತಲಾ ಆರು ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.

ಇಬ್ಬರು ಕ್ರಮವಾಗಿ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳಂಬೆಳ್ಳ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿಯವರು. ಇನ್ನು, ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕು ಅರಳಗುಂಡಗಿ ಗ್ರಾಮದ ದೇವರಾಜ್‌ ಅವರು 2023–24ನೇ ಸಾಲಿನ ಬಿವಿಎಸ್‌ಸಿ ಅಂಡ್‌ ಎಎಚ್‌ ಕೋರ್ಸ್‌ನಲ್ಲಿ 4 ಚಿನ್ನದ ಪದಕ ಗಳಿಸಿದ್ದಾರೆ. ಇವರು ಬೀದರ್‌ ಪಶು ವಿವಿಯಲ್ಲಿ ಓದಿದ್ದಾರೆ.

ಎನ್‌ಎಬಿಎಲ್‌ ಮಾನ್ಯತೆ; ಸಂಶೋಧನೆಯಲ್ಲಿ ಯಶಸ್ಸು

‘ಪಶು ಆರೋಗ್ಯ ಮತ್ತು ಜೈವಿಕ ಉತ್ಪಾದನಾ ಸಂಸ್ಥೆಗೆ ಹೊಸ ಲಸಿಕಾ ಉತ್ಪಾದನಾ ಪರವಾಗಿ ಮತ್ತು 23 ವಿಭಿನ್ನ ಪರೀಕ್ಷೆಗಳಿಗೆ ಎನ್‌ಎಬಿಎಲ್‌ ಮಾನ್ಯತೆ ಪಡೆದಿರುವುದು ವಿವಿ ಹೆಗ್ಗಳಿಕೆ’ ಎಂದು ಕುಲಪತಿ ಪ್ರೊ. ಕೆ.ಸಿ. ವೀರಣ್ಣ ತಿಳಿಸಿದರು.

ಮಾನವ ಮತ್ತು ಪ್ರಾಣಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಬ್ರುಸಲೋಸಿಸ್‌, ರೇಬಿಸ್‌, ಎವಿಯನ್‌ ಇನ್‌ಫ್ಲುಯೆಂಜಾ, ಅಂತ್ರಾಕ್ಸ್‌ ಮತ್ತು ಕೆಎಫ್‌ಡಿ ಮೇಲೆ ಹೊಸ ಸಂಶೋಧನಾ ಯೋಜನೆಗಳನ್ನು ಪಡೆಯಲು ಪಶು ವೈದ್ಯಕೀಯ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಭಾರತದ ಗೋವು ಪ್ರಜಾತಿ ಗುರುತಿಸುವ ಅಪ್ಲಿಕೇಶನ್‌ ಕಾಪಿರೈಟ್‌ ಸಿಕ್ಕಿದೆ. ‘ರೆಡಿ ಟು ಕುಕ್‌ ನ್ಯುಟ್ರಾಸ್ಯೂಟಿಕಲ್ಸ್‌’ಗೆ ಪೇಟೆಂಟ್‌ ಸಿಕ್ಕಿದೆ. ಡ್ರೈ ರೆಡಿ ಟು ಈಟ್‌ ಪನೀರ್‌ ತಯಾರಿಸುವ ಮತ್ತು ಸಂರಕ್ಷಿಸುವ ತಂತ್ರಜ್ಞಾನಕ್ಕೂ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.