ADVERTISEMENT

ಕೋಲಿ ಸಮಾಜ ಜನಜಾಗೃತಿ ಸಮಾವೇಶ 28ಕ್ಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:39 IST
Last Updated 26 ಅಕ್ಟೋಬರ್ 2025, 7:39 IST
ಬಸವಕಲ್ಯಾಣ ತಾಲ್ಲೂಕಿನ ಘೋಟಾಳ ಗ್ರಾಮದಲ್ಲಿ ಶನಿವಾರ ಕೋಲಿ ಸಮಾಜ ಜನಜಾಗೃತಿ ಸಮಾವೇಶದ ಭಿತ್ತಿಪತ್ರಗಳನ್ನು ವಿತರಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಘೋಟಾಳ ಗ್ರಾಮದಲ್ಲಿ ಶನಿವಾರ ಕೋಲಿ ಸಮಾಜ ಜನಜಾಗೃತಿ ಸಮಾವೇಶದ ಭಿತ್ತಿಪತ್ರಗಳನ್ನು ವಿತರಿಸಲಾಯಿತು   

ಬಸವಕಲ್ಯಾಣ: ‘ತಾಲ್ಲೂಕು ಮಟ್ಟದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕೋಲಿ ಸಮಾಜ ಜನಜಾಗೃತಿ ಸಮಾವೇಶ ಅಕ್ಟೋಬರ್ 28ಕ್ಕೆ ನಗರದ ತ್ರಿಪುರಾಂತ ವಾಲ್ಮೀಕಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಮುಖಂಡ ಗೋವಿಂದ ಚಾಮಾಲೆ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಅಂದು ಬೆಳಿಗ್ಗೆ 11.30 ಗಂಟೆಗೆ ಮಹಾತ್ಮಗಾಂಧಿ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರಂಭ ನಡೆಯುವುದು. ತಾಲ್ಲೂಕು ಟೋಕರಿ ಕೋಲಿ ಸಮಾಜ ಸಂಘ, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ ಮತ್ತು ಭಾರತಮಾತಾ ಫೌಂಡೇಶನ್, ಮಹರ್ಷಿ ವಾಲ್ಮೀಕಿ ನವತರುಣ ಸಂಘ, ಜೈಭವಾನಿ ಸುಧಾರಣಾ ಸಮಿತಿ, ಟೋಕರಿ ಕೋಲಿ ಸಮಾಜ ಸರ್ಕಾರಿ ನೌಕರರ ಸಂಘ ಮತ್ತು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಯುವ ಸೇವಾ ಸಮಿತಿ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದ ರತ್ನಾಕಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸಸ್ತಾಪುರ ಮಹಾದೇವಿತಾಯಿ, ಹುಡಗಿ ರಾಜಶೇಖರ ಸ್ವಾಮೀಜಿ ನೇತೃತ್ವ ವಹಿಸುವರು. ಪೌರಾಡಳಿತ ಸಚಿವ ರಹೀಂಖಾನ್, ಸಂಸದ ಸಾಗರ ಖಂಡ್ರೆ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮ್ಮಕನೂರು ಮತ್ತಿತರರು ಉಪಸ್ಥಿತರಿರುವರು. ತಾಲ್ಲೂಕಿನ 30 ಗ್ರಾಮಗಳಲ್ಲಿ ಈಗಾಗಲೇ ಪ್ರಚಾರ ಸಭೆ ನಡೆಸಲಾಗಿದೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷರಾದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ದತ್ತು ಪದ್ಮೆ, ಕೋಲಿ ಸಮಾಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಬೊಕ್ಕೆ, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ಅಧ್ಯಕ್ಷ ನಾಗನಾಥ ಚಾಮಾಲೆ, ನೌಕರರ ಸಂಘದ ಅಧ್ಯಕ್ಷ ಚನ್ನವೀರ ಜಮಾದಾರ, ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ವಾಲ್ಮೀಕಿ ಮುಡಬಿ, ಸಹ ಕಾರ್ಯದರ್ಶಿ ರಾಜಕುಮಾರ ಗುಂಡೆ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ, ಪೋಪಟ್ ಜಮಾದಾರ, ರಾಜಕುಮಾರ ಇರ್ಲೆ, ಪ್ರಕಾಶ ನಾಗೂರೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.