ADVERTISEMENT

ಬೀದರ್‌: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹಲವರ ಪೈಪೋಟಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ಜುಲೈ 2025, 6:18 IST
Last Updated 10 ಜುಲೈ 2025, 6:18 IST
   

ಬೀದರ್‌: ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಚಾಲನೆ ಕೊಟ್ಟಿದ್ದು, ಹಲವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಜಿಲ್ಲೆಗೆ ಮೂವರು ವೀಕ್ಷಕರನ್ನು ನೇಮಕ ಮಾಡಿದ ನಂತರ ಪಕ್ಷದ ಅನೇಕ ಮುಖಂಡರು ಸಕ್ರಿಯಗೊಂಡಿದ್ದಾರೆ. ಗೋಪ್ಯವಾಗಿ ತಮಗೆ ಹತ್ತಿರವಾದವರನ್ನು ಕರೆಸಿ, ಸಭೆಗಳನ್ನು ನಡೆಸುತ್ತಿದ್ದಾರೆ. ರಾಜ್ಯದ ಮುಖಂಡರನ್ನು ಭೇಟಿ ಮಾಡಿ, ಅವರ ಎದುರು ಬೇಡಿಕೆ ಇರಿಸಿದ್ದಾರೆ ಎಂದು ತಿಳಿದು ಬಂದಿದೆ.

2017ರಿಂದಲೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಬಸವರಾಜ ಜಾಬಶೆಟ್ಟಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಆಪ್ತರಾಗಿರುವ ಅವರು, ಅವರ ಬೆಂಬಲದಿಂದ ಎಂಟು ವರ್ಷಗಳಿಂದ ಆ ಸ್ಥಾನದಲ್ಲಿದ್ದಾರೆ. ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದಾರೆ. ಒಬ್ಬರಿಗೆ ಎರಡೆರಡು ಸ್ಥಾನಗಳನ್ನು ಕೊಟ್ಟಿರುವುದಕ್ಕೆ ಈಗಾಗಲೇ ಜಿಲ್ಲೆಯ ಅಸಮಾಧಾನಿತ ಕಾಂಗ್ರೆಸ್‌ ಮುಖಂಡರು ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ಅವರನ್ನು ಪುನಃ ಮುಂದುವರೆಸುವುದು ಅನುಮಾನ ಎಂದು ಹೇಳಲಾಗುತ್ತಿದೆ.

ADVERTISEMENT

ಈ ವಿಷಯ ಖಾತ್ರಿಯಾಗುತ್ತಿದ್ದಂತೆ ಹಲವರು ಸಕ್ರಿಯರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಒಳಗೊಳಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಲಿಂಗಾಯತರಲ್ಲಿ ಹಾಲಿ ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ್‌ ಹುಮನಾಬಾದ್‌, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ ಅವರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಎಂಟು ವರ್ಷಗಳಿಂದ ಲಿಂಗಾಯತ ಸಮುದಾಯದ ಬಸವರಾಜ ಜಾಬಶೆಟ್ಟಿ ಅವರು ಅಧ್ಯಕ್ಷರಾಗಿರುವುದರಿಂದ ಪುನಃ ಆ ಸಮುದಾಯಕ್ಕೆ ಮಣೆ ಹಾಕುವುದು ಅನುಮಾನ.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಂದ ನಂತರ ಪರಿಶಿಷ್ಟ ಜಾತಿಯವರಿಗೆ ಜಿಲ್ಲೆಯಲ್ಲಿ ಪ್ರಮುಖವಾದ ಸ್ಥಾನಮಾನ ಸಿಕ್ಕಿಲ್ಲ. ಈ ಸಲ ಪರಿಶಿಷ್ಟರಿಗೆ ಮಣೆ ಹಾಕಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಪರಿಶಿಷ್ಟ ಜಾತಿಯಿಂದ ಮಾಜಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮುಖಂಡರಾದ ಶಿವರಾಜ ಹಾಸನಕರ, ಲಕ್ಷ್ಮಣರಾವ್‌ ಬುಳ್ಳಾ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಅರಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಕಟರಾಗಿದ್ದು, ಅವರು ಅಧ್ಯಕ್ಷ ಸ್ಥಾನದ ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರ ಪುತ್ರ, ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯ್‌ ಸಿಂಗ್‌ ಕೂಡ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎಂದು ಗೊತ್ತಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಆರ್ಥಿಕವಾಗಿ ಸದೃಢರಾಗಿದ್ದು, ತಮ್ಮದೇ ಪ್ರಭಾವ ಹೊಂದಿದ್ದಾರೆ. ಕುರುಬ ಸಮುದಾಯದಿಂದ ಹಿರಿಯ ಮುಖಂಡ ಮುರಳೀಧರ ಏಕಲಾರಕರ, ಮುಸ್ಲಿಂ ಸಮುದಾಯದಿಂದ ಕೆಪಿಸಿಸಿ ಸಂಯೋಜಕ ಅಬ್ದುಲ್‌ ಮನ್ನಾನ್‌ ಸೇಠ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಸಮಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

‘ಈ ಸಲ ಬೀದರ್‌ ಜಿಲ್ಲಾ ಕಾಂಗ್ರೆಸ್‌ಗೆ ಹೊಸಬರು ಅಧ್ಯಕ್ಷರಾಗುವುದು ನೂರಕ್ಕೆ ನೂರು ಖಚಿತ. ಆದರೆ, ರಬ್ಬರ್‌ ಸ್ಟ್ಯಾಂಪ್‌ ಅಧ್ಯಕ್ಷರು ಇರುವುದಿಲ್ಲ. ವರಿಷ್ಠರು ಪಕ್ಷ ಸಂಘಟನೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷ ನಿಷ್ಠಾವಂತರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ’ ಎಂದು ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಯಾರ್‍ಯಾರು?

ಲಿಂಗಾಯತ ಸಮುದಾಯದಿಂದ ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ್‌ ಹುಮನಾಬಾದ್‌, ಹಾಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ, ಪರಿಶಿಷ್ಟ ಜಾತಿಯಿಂದ ಮಾಜಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಶಿವರಾಜ ಹಾಸನಕರ, ಲಕ್ಷ್ಮಣರಾವ್‌ ಬುಳ್ಳಾ, ರಜಪೂತ್‌ ಸಮುದಾಯದಿಂದ ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯ್‌ ಸಿಂಗ್‌, ಕುರುಬ ಸಮುದಾಯದಿಂದ ಮುರಳೀಧರ ಏಕಲಾರಕರ, ಮುಸ್ಲಿಂ ಸಮುದಾಯದಿಂದ ಹಾಲಿ ಕೆಪಿಸಿಸಿ ಸಂಯೋಜಕ ಅಬ್ದುಲ್‌ ಮನ್ನಾನ್‌ ಸೇಠ್‌ ಹಾಗೂ ಹಾಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಸಮಿ ಅವರು ಬೀದರ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿರುವ ಪ್ರಮುಖರು ಎಂದು ತಿಳಿದು ಬಂದಿದೆ.

ವಾರದೊಳಗೆ ವೀಕ್ಷಕರ ಆಗಮನ
ಬೀದರ್‌ ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಚುರುಕುಗೊಂಡಿದ್ದು, ಕೆಪಿಸಿಸಿ ನಿಯೋಜಿಸಿರುವ ವೀಕ್ಷಕರು ಈ ವಾರದೊಳಗೆ ಜಿಲ್ಲೆಗೆ ಬರುವ ಸಾಧ್ಯತೆ ಹೆಚ್ಚಿದೆ.

ವಿಧಾನ ಪರಿಷತ್‌ ಸದಸ್ಯರಾದ ತಿಪ್ಪಣ್ಣ ಕಮಕನೂರು, ಸುನೀಲಗೌಡ ಪಾಟೀಲ್‌ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಒಬೇದುಲ್ಲಾ ಷರೀಫ್‌ ಅವರನ್ನು ಪಕ್ಷವು ವೀಕ್ಷಕರಾಗಿ ನೇಮಕ ಮಾಡಿದೆ. ಜುಲೈ 17ರೊಳಗೆ ವೀಕ್ಷಕರು ಜಿಲ್ಲೆಗೆ ಬಂದು, ಸಭೆಗಳನ್ನು ನಡೆಸಿ, ಮಾಹಿತಿ ಕಲೆ ಹಾಕಿ, ಆನಂತರ ಕೆಪಿಸಿಸಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.