ಬೀದರ್: ಮೂಲ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ನಗರದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ನಿವೃತ್ತರಾದವರು, ವಜಾಗೊಂಡವರು, ಇತರೆ ಕಾರಣಗಳಿಂದ ನಿರ್ಗಮಿಸಿದ ನೌಕರರಿಗೆ ಆರ್ಥಿಕ ಸೌಲಭ್ಯ ಕಲ್ಪಿಸಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾ ಅವಧಿಯ ಪ್ರತಿ ಹತ್ತು ವರ್ಷಗಳಿಗೊಮ್ಮೆ ನೀಡಬೇಕು. ಚಾಲಕ, ನಿರ್ವಾಹಕ, ತಾಂತ್ರಿ, ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಭತ್ಯೆ ಐದು ಪಟ್ಟು ಹೆಚ್ಚಿಸಬೇಕು. ಶೂ, ಜೆರ್ಸಿ, ರೇನ್‌ಕೋಟ್ ಸೇರಿದಂತೆ ಇತರೆ ಭತ್ಯೆ ಮೂರು ಪಟ್ಟು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲಾ ನೌಕರರಿಗೂ ಪ್ರತಿ ತಿಂಗಳು ಚಿಕಿತ್ಸೆಗೆ ₹2 ಸಾವಿರ ನೀಡಬೇಕು. ಎಲ್ಲರಿಗೂ ಉಚಿತ ಔಷಧಿ ಪೂರೈಸಬೇಕು. ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಮುದ್ರಣಾಲಯ ಹಾಗೂ ತಾಂತ್ರಿಕ ಸಿಬ್ಬಂದಿಗೆ ಬಡ್ತಿ ಕೊಡಬೇಕು. ಸಾರಿಗೆ ನಿಗಮಗಳ ವಿದ್ಯುತ್‌ಚಾಲಿತ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ನೇಮಿಸಿಕೊಳ್ಳಬೇಕು. ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವವರ ಕೆಲಸ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
2024ರಲ್ಲಿ ಪರಿಷ್ಕರಿಸಲಾಗುವ ವೇತನ ಶ್ರೇಣಿ ನಾಲ್ಕು ವರ್ಷಗಳ ವರೆಗೆ ಯಥಾಸ್ಥಿತಿಯಲ್ಲಿರಬೇಕು. ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿ ನೇಮಕಾತಿ ಬೇಗ ಮುಗಿಸಿ, ಎಲ್ಲಾ ನಿಗಮಗಳ ನೌಕರರ ಮುಂಬಡ್ತಿಗೆ ಕ್ರಮ ಜರುಗಿಸಬೇಕು. ‘ಶಕ್ತಿ’ ಯೋಜನೆಯಿಂದ ಚಾಲಕ, ನಿರ್ವಾಹಕರಿಗೆ ಆಗುತ್ತಿರುವ ಶಿಕ್ಷೆ, ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಬೀದರ್ ವಿಭಾಗದ ಪ್ರಧಾನ ಕಾರ್ಯದರ್ಶಿ ಜೀವನ್, ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಬೀದರ್ ವಿಭಾಗದ ಪ್ರಧಾನ ಕಾರ್ಯದರ್ಶಿ ಶಿವಾನಂದ, ಎನ್‌ಇಕೆಆರ್‌ಟಿಸಿ ಎಸ್ಸಿ/ಎಸ್ಟಿ ಎಂಪ್ಲಾಯೀಸ್ ಅಸೋಸಿಯೇಶನ್ ಬೀದರ್ ವಿಭಾಗದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗಾಯಕವಾಡ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.